ಕೋಣಂದೂರು: ಮಹಾತ್ಮ ಗಾಂಧೀಜಿ ಅವರು ಪ್ರತಿಪಾದಿಸಿದ ತತ್ವಾದರ್ಶಗಳಾದ ಅಹಿಂಸೆ, ಸತ್ಯ, ಪ್ರಾಮಾಣಿಕತೆ, ಶರೀರ ಶ್ರಮ, ಸರ್ವಧರ್ಮ ಸಮಭಾವ, ಸ್ವದೇಶಿ ಪರಿಕಲ್ಪನೆಗಳು ಇಂದಿಗೂ ಪ್ರಸ್ತುತ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಅಭಿಪ್ರಾಯಪಟ್ಟರು.
ಇಲ್ಲಿನ ಶರಾವತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ನಡೆದ ಗಾಂಧೀಜಿ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಮೌಲ್ಯವಿಲ್ಲದ ಜೀವನ ಅರ್ಥಹೀನ. ಗಾಂಧೀಜಿಯಂತಹ ಮಹಾತ್ಮರ ಜೀವನ ಅತ್ಯಂತ ಸರಳವೂ ಪಾರದರ್ಶಕವೂ ಆಗಿತ್ತು. 100ಕ್ಕೂ ಹೆಚ್ಚು ದೇಶಗಳಲ್ಲಿ ಗಾಂಧೀಜಿಯವರ ಅಧ್ಯಯನ ಪೀಠ ಸ್ಥಾಪಿಸಲಾಗಿದೆ. 140ಕ್ಕೂ ಹೆಚ್ಚು ದೇಶಗಳು ಗಾಂಧೀಜಿ ಅಂಚೆ ಚೀಟಿ ಮತ್ತು ನಾಣ್ಯಗಳನ್ನು ಬಿಡುಗಡೆ ಮಾಡಿವೆ. ಪ್ರತಿಮೆಯನ್ನೂ ನಿರ್ಮಿಸಿ ತಮ್ಮ ಗೌರವವನ್ನು ಸಮರ್ಪಿಸುತ್ತಿರುವುದು ಭಾರತೀಯರಾದ ನಮಗೆ ಹೆಮ್ಮೆಯ ಸಂಗತಿ’ ಎಂದರು.
‘ದೇಶ ವಿದೇಶಗಳಲ್ಲಿಯೂ ಗಾಂಧೀಜಿ ಅವರಿಂದ ಪ್ರಭಾವಿತರಾದವರು ಹಲವರು ಇದ್ದಾರೆ’ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಧ್ಯಕ್ಷ ಜಿ.ಎಸ್.ನಾರಾಯಣರಾವ್ ಹೇಳಿದರು.
ಪ್ರಾಂಶುಪಾಲ ಪ್ರೊ.ಎಂ.ಜಿ.ಸುಭಾಷ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಬಿ.ಪ್ರಕಾಶ್ ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.