ಶಿವಮೊಗ್ಗ: ‘ಕುಂಸಿ ಹೋಬಳಿಯ ತುಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಣೆಹೊಸೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಳೆಯಿಂದ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸವಾರರು, ಶಾಲೆ–ಕಾಲೇಜು ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವಂತಾಗಿದೆ.
ಇದರಿಂದಾಗಿ ಸ್ಥಳೀಯರು ಜನಪ್ರತಿನಿಧಿ ಹಾಗೂ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಗ್ರಾಮದಲ್ಲಿ 100ಕ್ಕೂ ಹೆಚ್ಚು ಮನೆಗಳಿದ್ದು, 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ದಿನನಿತ್ಯ ಶಾಲಾ– ಕಾಲೇಜುಗಳಿಗೆ ತೆರಳುತ್ತಾರೆ. ಮುಖ್ಯ ರಸ್ತೆಗೆ ಸಂಪರ್ಕಿಸಲು 1.5 ಕೀ.ಮಿ ದೂರ ಕ್ರಮಿಸಬೇಕು. ಈ ರಸ್ತೆಯು ಬ್ಯಾಡನಾಳ, ಚೋಡನಾಳ, ಕಲ್ಮನೆ ಮೂಲಕ ಶಿಕಾರಿಪುರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಆದರೆ, ರಸ್ತೆಯು ಕೆಸರು ಗದ್ದೆಯಂತಾಗಿದೆ ಎಂದು ಸ್ಥಳೀಯರಾದ ರಾಘವೇಂದ್ರ ಬಿದುರುಮಟ್ಟಿ ‘ಪ್ರಜಾವಾಣಿ’ ಬಳಿ ದೂರಿದರು.
‘ಸ್ಥಳೀಯರನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಆದರೂ ಗ್ರಾಮಕ್ಕೆ ವ್ಯವಸ್ಥಿತ ರಸ್ತೆ ನಿರ್ಮಿಸಲು ಸಾಧ್ಯವಾಗಿಲ್ಲ. ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಭಾಷಣ ಮಾಡುವರು ಇಲ್ಲಿ ಸಂಚರಿಸಿ, ಗ್ರಾಮೀಣರ ಸಂಕಷ್ಟ ಆಲಿಸಬೇಕು’ ಎಂದು ಅವರು ಆಗ್ರಹಿಸಿದರು.
ಮಳೆಗಾಲದಲ್ಲಿ ಗುಂಡಿಗಳಲ್ಲಿ ವಾಹನ ಸವಾರರು ಬಿದ್ದು ಗಾಯಗೊಂಡ ಉದಾಹರಣೆಗಳು ಇವೆ. ಆದರೂ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇತ್ತ ಗಮನ ಹರಿಸುತ್ತಿಲ್ಲ ಎಂದು ಸ್ಥಳೀಯರಾದ ಎಚ್.ಜಿ. ಅಶೋಕ್ ದೂರಿದರು.
ಗ್ರಾಮ ಪಂಚಾಯಿತಿ ಅನುದಾನದಲ್ಲಿ ಜೇಡಿ ಮಣ್ಣು ಸುರಿದು ರಸ್ತೆ ನಿರ್ಮಿಸಿದ್ದಾರೆ. ರಸ್ತೆಯ ನಿರ್ಮಾಣವೇ ಅವೈಜ್ಞಾನಿಕವಾಗಿದೆ. ರಸ್ತೆ ನಿರ್ಮಾಣ ಸಂಪೂರ್ಣ ಕಳಪೆ ಆಗಿದೆ. ಇದರ ಪರಿಣಾಮ ಮಳೆಗಾಲದಲ್ಲಿ ಗ್ರಾಮಸ್ಥರು ಸಮಸ್ಯೆ ಎದುರಿಸಬೇಕಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ವಿಡಿಯೊ ಚಿತ್ರೀಕರಿಸಿ ಮಕ್ಕಳ ಮನವಿ
ಗ್ರಾಮದ ರಸ್ತೆಯ ದುಃಸ್ಥಿತಿಯನ್ನು ವಿಡಿಯೊ ಚಿತ್ರೀಕರಣ ಮಾಡಿರುವ ವಿದ್ಯಾರ್ಥಿಗಳು ಅದನ್ನು ಸ್ಥಳೀಯ ಶಾಸಕ ಸಂಸದ ಹಾಗೂ ಅಧಿಕಾರಿಗಳಿಗೆ ಬುಧವಾರ ಕಳುಹಿಸಿ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ. ‘ಪ್ರತಿ ವರ್ಷ ಮಳೆಗಾಲದಲ್ಲಿ ಗ್ರಾಮದ ರಸ್ತೆ ಸಂಪೂರ್ಣ ಹಾಳಾಗುತ್ತದೆ. ರಸ್ತೆಯಲ್ಲಿ ಈಗ ಕೆಸರು ತುಂಬಿದೆ. ಶಾಲೆಗೆ ಹೋಗಲು ತುಂಬಾ ಸಮಸ್ಯೆ ಆಗುತ್ತಿದೆ. ಪ್ರತಿದಿನ ಇದೇ ರಸ್ತೆಯಲ್ಲಿ ಓಡಾಡಬೇಕು. ದಯವಿಟ್ಟು ನಮಗೆ ರಸ್ತೆ ಸರಿ ಮಾಡಿಸಿಕೊಡಿ’ ಎಂದು ವಿಡಿಯೊದಲ್ಲಿ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.