ADVERTISEMENT

ಶಿವಮೊಗ್ಗ: ‘ತರಕಾರಿ ರವಿ’ ಈಗ ‘ತರಹೇವಾರಿ’ ಬೆಳೆಗಾರ!

ಮಿಶ್ರ ಬೆಳೆ ಬೆಳೆದು ಮಾದರಿಯಾದ ಯುವ ರೈತ

ಎಚ್.ಎಸ್.ರಘು
Published 27 ಜುಲೈ 2022, 2:51 IST
Last Updated 27 ಜುಲೈ 2022, 2:51 IST
ಶಿಕಾರಿಪುರ ಪಟ್ಟಣದ ಕೃಷಿಕ ರವಿ ತಮ್ಮ ಕೃಷಿ ಭೂಮಿಯಲ್ಲಿ ಬೆಳೆದಿರುವ ಹಾಗಲಕಾಯಿ ಬೆಳೆ
ಶಿಕಾರಿಪುರ ಪಟ್ಟಣದ ಕೃಷಿಕ ರವಿ ತಮ್ಮ ಕೃಷಿ ಭೂಮಿಯಲ್ಲಿ ಬೆಳೆದಿರುವ ಹಾಗಲಕಾಯಿ ಬೆಳೆ   

ಶಿಕಾರಿಪುರ: ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಕೃಷಿ ಭೂಮಿಯಲ್ಲಿ ಹೀರೆಕಾಯಿ, ಹಾಗಲಕಾಯಿ ಸೇರಿ ವಿವಿಧ ತರಕಾರಿಗಳನ್ನು ಬೆಳೆಯುವ ಮೂಲಕ ಇಲ್ಲಿನ ಯುವ ರೈತ ಎಂ.ರವಿ ಮುರ‍್ಲೇರ ಇತರರಿಗೆ ಮಾದರಿಯಾಗಿದ್ದಾರೆ.

ಉನ್ನತ ಶಿಕ್ಷಣ ಪಡೆಯದ ರವಿ, ತರಕಾರಿ ಬೆಳೆಯುವುದಕ್ಕಿಂತ ಮುಂಚೆ ವಾರದ ಸಂತೆಯಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದರು. ಅದೇ ಕಾರಣದಿಂದ ಅವರು ಪಟ್ಟಣದಲ್ಲಿ ‘ತರಕಾರಿ ರವಿ’ ಎಂದೇ ಹೆಸರಾಗಿದ್ದರು. 10 ವರ್ಷಗಳಿಂದ ಈಚೆಗೆ ಅವರು ಪಟ್ಟಣ ಸಮೀಪದ ಮಾಸೂರು ರಸ್ತೆಯಲ್ಲಿರುವ ತಮ್ಮ 6 ಎಕರೆ ಕೃಷಿ ಭೂಮಿಯಲ್ಲಿ ತರಕಾರಿಯನ್ನೇ ಬೆಳೆಯುತ್ತ, ತಮ್ಮ ‘ಖ್ಯಾತಿ’ಗೆ ಮತ್ತಷ್ಟು ಪುಷ್ಟಿ ದೊರೆಯುವಂತೆ ನೋಡಿಕೊಂಡಿದ್ದಾರೆ.

ಟೊಮೆಟೊ, ಬದನೆಕಾಯಿ, ಕೋಸು, ಬೀನ್ಸ್, ಸೊಪ್ಪು, ಸೇವಂತಿ ಹೂ ಸೇರಿ ವಿವಿಧ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ತರಕಾರಿ ಜತೆಗೆ ಅಡಿಕೆ, ಮೆಕ್ಕೆಜೋಳ, ಶುಂಠಿ, ಭತ್ತ ಬೆಳೆಗೂ
ಆದ್ಯತೆ ನೀಡಿದ್ದಾರೆ. ಹೀರೆಕಾಯಿ ಹಾಗೂ ಹಾಗಲಕಾಯಿ ಬಳ್ಳಿಗೆ ಆಸರೆಯಾದ ಚಪ್ಪರದ ಅಡಿಯಲ್ಲಿ ಅಡಿಕೆ ಗಿಡಗಳನ್ನು ಬೆಳೆಸಲು ಮುಂದಾಗಿದ್ದಾರೆ.

ADVERTISEMENT

ಬೆಳೆಗೆ ಪೋಷಕಾಂಶ ನೀಡಲು ಸಗಣಿ ಗೊಬ್ಬರ ಹಾಗೂ ರಾಸಾಯನಿಕ ಗೊಬ್ಬರ ಬಳಸುತ್ತಿದ್ದಾರೆ. ಪ್ರಸ್ತುತ
ಕೃಷಿ ಭೂಮಿಯಲ್ಲಿರುವ ಹೀರೆಕಾಯಿ ಹಾಗೂ ಹಾಗಲಕಾಯಿ ಫಸಲು 6 ತಿಂಗಳಿಗೊಮ್ಮೆ ದೊರೆಯುತ್ತಿದೆ. ಕೆಲವು ವರ್ಷಗಳ ಹಿಂದೆಕೊತ್ತಂಬರಿ ಸೊಪ್ಪು ಬೆಳೆದು ಬಾಂಬೆ ಮಾರುಕಟ್ಟೆಗೆ ಪೂರೈಸಿದ್ದ ಇವರು
ಇದೀಗ ಹೀರೆ ಮತ್ತು ಹಾಗಲವನ್ನು ಡಬ್ಬಿಗಳಲ್ಲಿ ಪ್ಯಾಕ್ ಮಾಡಿ ಹೈದರಾಬಾದ್ ಮಾರುಕಟ್ಟೆಗೆ ಸರಬರಾಜು ಮಾಡುವಮೂಲಕ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.

‘ರೈತರು ಮಣ್ಣು ಪರೀಕ್ಷೆ ಮಾಡಿಸಬೇಕು. ಆಗ ಕೃಷಿ ಭೂಮಿಯಲ್ಲಿ ಯಾವ ರೀತಿಯ ಬೆಳೆ ಬೆಳೆಯಬೇಕು ಹಾಗೂ ಬೆಳೆಗೆ ಅಗತ್ಯವಾದ ಗೊಬ್ಬರವನ್ನು ಎಷ್ಟು ಪ್ರಮಾಣದಲ್ಲಿ ನೀಡಬಹುದು ಎಂಬುದನ್ನು ಅರಿಯಲು ಸಾಧ್ಯವಾಗುತ್ತದೆ’ ಎಂಬುದು ರವಿ ಅವರ ಅಭಿಪ್ರಾಯ.

‘ನನ್ನ ಕೃಷಿ ಚಟುವಟಿಕೆಗೆ ಕೃಷಿಇಲಾಖೆ ಸಹಾಯಕ ನಿರ್ದೇಶಕ ಕಿರಣ್‌ ಕುಮಾರ್‌, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಪ್ರಭುಶಂಕರ್‌,ಸಹಾಯಕ ನಿರ್ದೇಶಕ ವಿಶ್ವನಾಥ್‌ ಅವರು ಸಲಹೆ , ಸೂಚನೆ ನೀಡಿದ್ದಾರೆ’ ಎಂದು ಅವರು ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.