ADVERTISEMENT

ಗಲಭೆಗೆ ಕೆಲವರ ಪ್ರಚೋದನೆ: ಈಶ್ವರಪ್ಪ ಆರೋಪ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2020, 13:25 IST
Last Updated 4 ಡಿಸೆಂಬರ್ 2020, 13:25 IST
   

ಶಿವಮೊಗ್ಗ: ಒಂದು ಸಮುದಾಯಕ್ಕೆ ಸೇರಿದ ಕೆಲವು ಕುತಂತ್ರಿಗಳು ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ. ಶಾಂತಿ ಕದಡುತ್ತಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ನಾಗೇಶ್ ಅವರ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರ ಜತೆ ಅವರು ಮಾತನಾಡಿದರು.

ಹಲ್ಲೆ ಪೂರ್ವನಿಯೋಜಿತ ಕೃತ್ಯ. ಹೊರಗಿನ ಶಕ್ತಿಗಳು ಸೇರಿಕೊಂಡು ಶಿವಮೊಗ್ಗದಲ್ಲಿ ಶಾಂತಿ ಹಾಳು ಮಾಡಲು ಪ್ರಯತ್ನಿಸುತ್ತಿವೆ. ಇಂತಹ ಗೂಂಡಾಗಳನ್ನು ಸುಮ್ಮನೆ ಬಿಡುವುದಿಲ್ಲ. ಪೊಲೀಸರು ಕಠಿಣ ಕ್ರಮ ಕೈಗೊಳ್ಳುವರು. ಹಿಂದೂಗಳು ಎಂದೂ ಗೂಂಡಾಗಿರಿ ಮಾಡುವುದಿಲ್ಲ. ಮುಸ್ಲಿಂ ಸಮಾಜದ ಮುಖಂಡರು ಕರೆದು ದುಷ್ಟರಿಗೆ ಬುದ್ಧಿ ಹೇಳಬೇಕು. ತಾಳ್ಮೆಯ ಮಿತಿ ಪರೀಕ್ಷಿಸಬಾರದು ಎಂದು ಎಚ್ಚರಿಸಿದರು.

ADVERTISEMENT

ಕೆಲವು ಮುಸ್ಲಿಂ ಯುವಕರಿಗೂ ಪೆಟ್ಟಾಗಿದೆಯಲ್ಲ ಎನ್ನುವ ಪ್ರಶ್ನೆಗೆ, ಕ್ರಿಯೆಗೆ ಪ್ರತಿಕ್ರಿಯೆ ನೀಡದಿದ್ದರೆ ಅದು ಹಿಂದೂ ಸಮಾಜ ಎನಿಸಿಕೊಳ್ಳುವುದಿಲ್ಲ. ಹಿಂದೂ ಯುವಕರು ನೇರವಾಗಿ ಗೂಂಡಾಗಿರಿ ಮಾಡಿಲ್ಲ ಎಂದು ಪ್ರತಿಕ್ರಿಯಿಸಿದರು.

ವಿಶ್ವ ಹಿಂದುಪರಿಷತ್, ಬಜರಂಗದಳದ ಕಾರ್ಯಕರ್ತರ ಮೇಲೆ ಪದೇ ಪದೆ ದಾಳಿಯಾಗುತ್ತಿದೆ. ಗೋಹತ್ಯೆ ನಿಷೇಧಕ್ಕೆ ಹೋರಾಟ ನಡೆಸುತ್ತಿದ್ದ ನಾಗೇಶ್ ಮೇಲೆ ಹಲ್ಲೆ ಮಾಡಲಾಗಿದೆ ಎಂದು ದೂರಿದರು.

ವಿಶೇಷ ತಂಡ ರಚಿಸಲು ಕಾಂಗ್ರೆಸ್ ಆಗ್ರಹ
ಹಲ್ಲೆ ನಡೆಸಿದ ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಬೇಕು ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ನೇತೃತ್ವದ ಕಾಂಗ್ರೆಸ್ ನಿಯೋಗ ಪೂರ್ವವಲಯ ಐಜಿಪಿ ಎಸ್‌.ರವಿ ಅವರನ್ನು ಶುಕ್ರವಾರ ಭೇಟಿ ಮಾಡಿ ಒತ್ತಾಯಿಸಿತು.

ಘಟನೆಯ ನಂತರ ನಗರದ ನಾಗರಿಕರು ಆತಂಕಗೊಂಡಿದ್ದಾರೆ. ಪೊಲೀಸರು ಪರಿಸ್ಥಿತಿ ನಿಯಂತ್ರಿಸುವ ಜತೆಗೆ, ಎರಡೂ ಕಡೆಯ ಗೂಂಡಾಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕು. ಹಲ್ಲೆ ಆರೋಪಿಗಳನ್ನು ಬಂಧಿಸುವ ಮೂಲಕ ಸಮಾಜದ ಶಾಂತಿ ಕಾಪಾಡಬೇಕು ಎಂದು ಕೋರಿದರು.

ನಗರದ ಕೆಲವೆಡೆ ಪೊಲೀಸರು ಅತಿರೇಕದ ವರ್ತನೆ ತೋರಿದ್ದಾರೆ. ಹಾಲು, ತರಕಾರಿ ಖರೀದಿಸಲು ಅವಕಶಾಶ ನೀಡಿಲ್ಲ. ಅಗತ್ಯ ವಸ್ತುಗಳಿಗೆ ಅಡ್ಡಿ ಮಾಡದಂತೆ ಸೂಚಿಸಬೇಕು ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.