ಶಿವಮೊಗ್ಗ: ‘ಕೆಲವು ವಿಚಾರಗಳ ಬಗ್ಗೆ ಬಿಜೆಪಿಯ ಹಿರಿಯ ನಾಯಕರ ಜತೆ ಚರ್ಚಿಸಬೇಕಿದೆ. ಬಳಿಕ ಪಕ್ಷ ಸೇರುವ ಬಗ್ಗೆ ಚಿಂತಿಸಲಾಗುವುದು’ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
‘ಕಾಂಗ್ರೆಸ್ ಸೇರ್ಪಡೆಗೊಳ್ಳುವಂತೆ ಅನೇಕರು ಒತ್ತಾಯಿಸಿದ್ದಾರೆ. ಉನ್ನತ ಸ್ಥಾನ ನೀಡುವುದಾಗಿ ಪುಸಲಾಯಿಸಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರುವುದಿಲ್ಲ. ಬಿಜೆಪಿಯಲ್ಲಿ ಕಾರ್ಯಕರ್ತನಾಗಿ ಶ್ರಮಿಸಿದ್ದೇನೆ. ಸಾಧ್ಯವಾದರೆ ಇಲ್ಲಿಯೇ ಮುಂದುವರಿಯಲು ಬಯಸುತ್ತೇನೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
‘ಬಿಜೆಪಿ ಸೇರುವಂತೆ ಕುರುಬ ಸಮುದಾಯದ ನಾಯಕರು ಪ್ರೀತಿಯಿಂದ ಹೇಳುತ್ತಿದ್ದಾರೆ. ಸೆಪ್ಟೆಂಬರ್ ಬಳಿಕ ಕಾಂಗ್ರೆಸ್‌ನಲ್ಲಿ ಕ್ರಾಂತಿಯಾಗುತ್ತದೆ ಎಂದು ಹೇಳಲಾಗುತ್ತಿದೆ. ಸರ್ಕಾರವೇ ಬೀಳುತ್ತದೆಯೋ ಅಥವಾ ಸಿದ್ದರಾಮಯ್ಯ ತಮ್ಮ ಸ್ಥಾನದಿಂದ ಇಳಿಯುತ್ತಾರೋ ಗೊತ್ತಿಲ್ಲ’ ಎಂದು ವ್ಯಂಗ್ಯವಾಡಿದರು.
‘ಸಂವಿಧಾನದ ಮೂಲ ಪೀಠಿಕೆಯಲ್ಲಿ ‘ಜಾತ್ಯತೀತ’ ಮತ್ತು ‘ಸಮಾಜವಾದಿ’ ಎಂಬ ಎರಡು ಪದಗಳನ್ನು ಇಂದಿರಾಗಾಂಧಿಯವರು ತಮ್ಮ ಸರ್ವಾಧಿಕಾರದ ಅವಧಿಯಲ್ಲಿ ಸೇರಿಸಿದ್ದಾರೆ. ಈ ಪದಗಳು ತುರ್ತು ಪರಿಸ್ಥಿತಿಯಲ್ಲಿ ತುರುಕಿದ ಪದಗಳಾಗಿವೆ. ಆದರೆ, ಕಾಂಗ್ರೆಸ್ಸಿಗರು ಇದನ್ನು ಮರೆತು ಈಗ ಸಂವಿಧಾನ ವಿರೋಧಿ ಟೀಕೆಗಳನ್ನು ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
‘ಜಾತ್ಯತೀತ, ಸಮಾಜವಾದಿ ಪದಗಳನ್ನು ಸೇರಿಸುವ ವಿಷಯದಲ್ಲಿ ಸಂವಿಧಾನ ರಚನಾ ಸಭೆಯಲ್ಲಿಯೇ ಅಂಬೇಡ್ಕರ್ ಮತ್ತು ನೆಹರೂ ಅವರು ವಿರೋಧ ಮಾಡಿದ್ದರು. ಆದರೆ, ಇಂದಿರಾಗಾಂಧಿಯವರು ಅದನ್ನು ಸೇರಿಸಿ, ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದರು. ಹೀಗಾಗಿ ಈ ಎರಡೂ ಪದಗಳ ಮಧ್ಯೆ ಸಮಗ್ರವಾಗಿ ಚರ್ಚೆ ನಡೆದು, ಪ್ರಜಾಪ್ರಭುತ್ವಕ್ಕೆ ಅನುಗುಣವಾದ ತೀರ್ಮಾನ ಈಗಲಾದರೂ ಆಗಬೇಕು’ ಎಂದರು.
ಪ್ರಮುಖರಾದ ವಾಗೀಶ್, ಲೋಕೇಶ್, ಬಾಲು, ಸೋಗಾನೆ ರಮೇಶ್, ಜಾಧವ, ರಾಜು, ಶಿವಕುಮಾರ್, ಕುಬೇರಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.