
ಶಿವಮೊಗ್ಗ: ‘ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಹೆಚ್ಚು ಅವಕಾಶ ನೀಡಲು ನಾವು ಬದ್ಧ. ಬೆಂಗಳೂರಿನಲ್ಲಿ ಆಯೋಜಿಸುವ 12 ವರ್ಷದೊಳಗಿನವರ ವಿಭಾಗದ ಟೂರ್ನಿಯನ್ನು ರಾಜ್ಯದ ಇತರೆ ಭಾಗಗಳಿಗೂ ವಿಸ್ತರಿಸಲಾಗುವುದು’ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಚುನಾವಣೆಯಲ್ಲಿ ಸ್ಪರ್ಧಿಸಿರುವ ‘ಟೀಮ್ ಬ್ರಿಜೇಶ್’ ಬಣದ ಅಭ್ಯರ್ಥಿಗಳು ಹೇಳಿದರು.
‘ಮೂರೂವರೆ ದಶಕಗಳ ಕಾಲ ಕ್ರೀಡಾಪಟು, ಆಡಳಿತಗಾರ, ಪ್ರವರ್ತಕ (ಪ್ರಮೋಟರ್) ಆಗಿ ಕೆಲಸ ಮಾಡಿದ ಅನುಭವ ಇದ್ದು, ಕೆಎಸ್‌ಸಿಎ ಆಡಳಿತವನ್ನು ಒಂದು ತಂಡವಾಗಿ ಮುನ್ನಡೆಸುವೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವೆ’ ಎಂದು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ದಿ ಪ್ರಿಂಟರ್ಸ್ ಮೈಸೂರು ಪ್ರೈವೆಟ್ ಲಿಮಿಟೆಡ್ (ಪ್ರಜಾವಾಣಿ–ಡೆಕ್ಕನ್ ಹೆರಾಲ್ಡ್ ಪತ್ರಿಕಾ ಸಮೂಹ) ನಿರ್ದೇಶಕ ಕೆ.ಎನ್. ಶಾಂತಕುಮಾರ್ ಬುಧವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
ರಾಜ್ಯದ ದ್ವಿತೀಯ ದರ್ಜೆ ನಗರಗಳಲ್ಲಿ ಕೆಎಸ್‌ಸಿಎಯಿಂದ ತರಬೇತಿ, ಒಳಾಂಗಣ ಕ್ರೀಡಾಂಗಣಗಳ ನಿರ್ಮಾಣ, ಶಾಲಾ ಹಂತದಲ್ಲಿ ಕ್ರಿಕೆಟ್ ಉತ್ತೇಜಿಸುವ ಗುರಿ ಇದೆ ಎಂದೂ ಹೇಳಿದರು.
ಈ ಸಂದರ್ಭದಲ್ಲಿ ಹಾಜರಿದ್ದ ಭಾರತ ತಂಡದ ಮಾಜಿ ಆಟಗಾರ ಬ್ರಿಜೇಶ್ ಪಟೇಲ್, ‘ಆಟಗಾರರೇ ಆಡಳಿತಗಾರರಾಗಿ ಯಶಸ್ವಿಯಾಗುತ್ತಾರೆ ಎಂಬುದು ಒಪ್ಪುವಂಥದ್ದಲ್ಲ. ಶಾಂತಕುಮಾರ್ ಒಬ್ಬ ಸಮರ್ಥ ಕ್ರೀಡಾ ಆಡಳಿತಗಾರ. ಖಂಡಿತವಾಗಿಯೂ ಕೆಎಸ್‌ಸಿಎಯನ್ನು ತಂಡವಾಗಿ ಮುನ್ನಡೆಸಿ ಉತ್ತಮ ಆಡಳಿತ ನೀಡಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಕಳೆದ ಅವಧಿಯಲ್ಲಿ ನಮ್ಮ ತಂಡವು ದುಂದುವೆಚ್ಚಕ್ಕೆ ಅವಕಾಶ ಕೊಟ್ಟಿಲ್ಲ. ಸಾರ್ವಜನಿಕ ಹಣವನ್ನು ಜವಾವ್ದಾರಿಯುತವಾಗಿ ಬಳಕೆ ಮಾಡಿದ ಪರಿಣಾಮ ಕೆಎಸ್‌ಸಿಎ ಖಾತೆಯಲ್ಲಿ ಈಗ ₹400 ಕೋಟಿ ಠೇವಣಿ ಇದೆ‘ ಎಂದು ಅವರು ಹೇಳಿದರು.
‘ಜೂನ್ 4ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯ ಕಾಲ್ತುಳಿತದ ದುರ್ಘಟನೆಗೆ ಕೆಎಸ್‌ಸಿಎ ಹೊಣೆ ಆಗಿಸುವುದು ಸಲ್ಲ. ದುರ್ಘಟನೆ ನಡೆದದ್ದು ಕ್ರಿಕೆಟ್ ಪಂದ್ಯದ ಸಮಯದಲ್ಲಿ ಅಲ್ಲ. ಬದಲಿಗೆ ಕಾರ್ಯಕ್ರಮವೊಂದರ ಆಯೋಜನೆ ವೇಳೆ. ಅದು ನಮ್ಮ (ಕೆಎಸ್‌ಸಿಎ) ಕೈಯಲ್ಲಿ ಇರಲಿಲ್ಲ. ಈಗ ಚುನಾವಣೆ ದೃಷ್ಟಿಯಿಂದ ಕೆಎಸ್‌ಸಿಎ ಮೇಲೆ ಆರೋಪ ಮಾಡಿ ಸಂಸ್ಥೆಯ ಹಿತಕ್ಕೆ ಧಕ್ಕೆ ತರುವುದು ಸರಿಯಲ್ಲ’ ಎಂದು ಹೇಳಿದ ಬ್ರಿಜೇಶ್, ‘ಚುನಾವಣೆಯ ನಂತರ ಕ್ರೀಡಾಂಗಣದ ಪ್ರವೇಶ ಹಾಗೂ ನಿರ್ಗಮನದ ದ್ವಾರಗಳಲ್ಲಿ ನವೀಕರಣ ಕಾರ್ಯವನ್ನು ನೂತನ ಸಮಿತಿ ಕೈಗೆತ್ತಿಕೊಳ್ಳಲಿದೆ’ ಎಂದರು.
‘ದಾವಣಗೆರೆ, ಹಾಸನ, ಕೊಡಗಿನ ಮೂರ್ನಾಡು ಕ್ರೀಡಾಂಗಣ ನಿರ್ಮಾಣ ಮಾಡಿದ್ದೇವೆ. ಅಧಿಕಾರಕ್ಕೆ ಬರುತ್ತಿದ್ದಂತೆಯೇ ತುಮಕೂರು, ಮೈಸೂರಿನಲ್ಲಿ ಕ್ರೀಡಾಂಗಣ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಲಾಗುವುದು’ ಎಂದರು.
ಟೀಮ್ ಬ್ರಿಜೇಶ್ ಬಣದ ಅಭ್ಯರ್ಥಿಗಳಾದ ಇ.ಎಸ್. ಜಯರಾಮ್, ಡಿ.ವಿನೋದ್ ಶಿವಪ್ಪ, ಬಿ.ಕೆ. ರವಿ, ತಿಲಕ್ ನಾಯ್ಡು, ಡಿ.ಎಸ್. ಅರುಣ್, ವೀರಣ್ಣ ಸವಡಿ, ಡಿ.ಆರ್. ನಾಗರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.