ADVERTISEMENT

ತುಂಗಾ ನಾಲೆ ಕಾಮಗಾರಿ ಕಳಪೆ: ಈಶ್ವರಪ್ಪ ಆರೋಪ

​ಪ್ರಜಾವಾಣಿ ವಾರ್ತೆ
Published 8 ಜುಲೈ 2019, 11:31 IST
Last Updated 8 ಜುಲೈ 2019, 11:31 IST
ಶಿವಮೊಗ್ಗ ಶಾಸಕ ಕೆ.ಎಸ್.ಈಶ್ವರಪ್ಪ ಹಾಗೂ ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ್ ನಾಯ್ಕ ಸೋಮವಾರ ತುಂಗಾ ನಾಲಾ ಆಧುನೀಕರಣ ಕಾಮಗಾರಿ ಪರಿಶೀಲನೆ ನಡೆಸಿದರು.
ಶಿವಮೊಗ್ಗ ಶಾಸಕ ಕೆ.ಎಸ್.ಈಶ್ವರಪ್ಪ ಹಾಗೂ ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ್ ನಾಯ್ಕ ಸೋಮವಾರ ತುಂಗಾ ನಾಲಾ ಆಧುನೀಕರಣ ಕಾಮಗಾರಿ ಪರಿಶೀಲನೆ ನಡೆಸಿದರು.   

ಶಿವಮೊಗ್ಗ: ತುಂಗಾ ನಾಲೆ ಆಧುನೀಕರಣ ಕಾಮಗಾರಿ ಕಳಪೆಯಾಗಿದೆ. ಕಬ್ಬಿಣ ಬಳಸದೇ ಕಾಂಕ್ರಿಟ್‌ ಹಾಕಲಾಗಿದೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಎಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡರು.

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಭದ್ರಾಪುರದ ಕೆಲವು ಭಾಗಗಳಲ್ಲಿಸೋಮವಾರ ಅವರು ತುಂಗಾ ನಾಲೆ ಆಧುನೀಕರಣ ಕಾಮಗಾರಿ ಪರಿಶೀಲಿಸಿದರು.

ಸಹ್ಯಾದ್ರಿ ಕಾಲೇಜು ಹಿಂಭಾಗದಿಂದ ಕೂಡ್ಲಿವರೆಗೆ 26 ಕಿ.ಮೀ. ಕಾಮಗಾರಿ ಕೈಗೊಳ್ಳಲಾಗಿದೆ. ₨ 141 ಕೋಟಿ ವೆಚ್ಚದ ಕಾಮಗಾರಿ ಬಹುತೇಕ ಕಳಪೆಯಾಗಿದೆ. ಮೇಲ್ಭಾಗದಲ್ಲಿ ಸಿಮೆಂಟ್‌ ಬಳಸಿಲ್ಲ. ಇದರಿಂದ ಹಲವು ಕಡೆ ನಾಲೆ ಕುಸಿದಿದೆ ಎಂದು ದೂರಿದರು.

ADVERTISEMENT

ನಾಲೆ ಕಳಪೆ ಕಾಮಗಾರಿ ಬಗ್ಗೆ ಆ ಭಾಗದ ರೈತರು ದೂರು ನೀಡಿದ್ದಾರೆ. ಆಧುನೀಕರಣ ಕಾಮಗಾರಿ ಕಳಪೆಯಾಗಿರುವ ಕಾರಣ ಸಮರ್ಪಕವಾಗಿ ನೀರು ಹರಿಯುತ್ತಿಲ್ಲ. ಕುಸಿದಿರುವ ಭಾಗಗಳಲ್ಲಿ ದುರಸ್ತಿ ಮಾಡಬೇಕು ಎಂಬ ಬೇಡಿಕೆ ಇದೆ. ಇಂತಹ ಕಳಪೆ ಕಾಮಗಾರಿ ನಡೆಸಿರುವ ಗುತ್ತಿಗೆದಾರರ ಬಿಲ್‌ ತಡೆಹಿಡಿಯಬೇಕು. ಗುತ್ತಿಗೆ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ತಾಕೀತು ಮಾಡಿದರು.

ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ್ ನಾಯ್ಕ, ಜಿಲ್ಲಾ ಪಂಚಾಯ್ತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಇ.ಕಾಂತೇಶ್, ಎಂಜಿನಿಯರ್‌ ಪಾಟೀಲ್, ಧನಂಜಯ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.