ADVERTISEMENT

ಶಿವಮೊಗ್ಗ ಜಿಲ್ಲೆಯಲ್ಲೂ ಕಠಿಣ ನಿರ್ಬಂಧ: ಕೆ.ಎಸ್‌. ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 8 ಮೇ 2021, 12:02 IST
Last Updated 8 ಮೇ 2021, 12:02 IST
ಕೆ.ಎಸ್.ಈಶ್ವರಪ್ಪ.
ಕೆ.ಎಸ್.ಈಶ್ವರಪ್ಪ.   

ಶಿವಮೊಗ್ಗ: ಲಾಕ್‌ಡೌನ್‌ ಇದ್ದರೂ ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. ಹಾಗಾಗಿ, ಮೇ 10ರಿಂದ ಕೆಲವು ಕಠಿಣ ಕ್ರಮ ಅನಿವಾರ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದಲ್ಲಿ ಶನಿವಾರ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಮೇ 10ರಿಂದ 14 ದಿನಗಳು ಲಾಕ್‌ಡೌನ್‌ ನಿರ್ಬಂಧ ಬಿಗಿಗೊಳಿಸಲಾಗುವುದು. ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಜಾರಿ ಮಾಡಲಾಗುವುದು. ಅದಕ್ಕಾಗಿ ಮೇ 9ರಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಉನ್ನತಮಟ್ಟದ ಸಭೆ ಕರೆಯಲಾಗಿದೆ ಎಂದು ಕಂದಾಯ, ಪೊಲೀಸ್‌, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಭಾಗವಹಿಸುವರು. ಸಬೆಯಲ್ಲೇ ನಿರ್ಬಂಧಗಳ ರೂಪುರೇಷೆ ಅಂತಿಮಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.

ADVERTISEMENT

ಕೋವಿಡ್‌ ನಿಯಂತ್ರಣಕ್ಕೆ ಜಿಲ್ಲೆಯ ಅಧಿಕಾರಿಗಳು ಸಾಕಷ್ಟು ಶ್ರಮಿಸುತ್ತಿದ್ದಾರೆ. ಜನರಲ್ಲೂ ಜಾಗೃತಿ ಮೂಡದ ಹೊರತು ಫಲಿತಾಂಶ ಅಸಾಧ್ಯ. ಹಿಂದೆಯೂ ಸಾಕಷ್ಟು ಕಠಿಣ ನಿಯಮಗಳನ್ನು ರೂಪಿಸಲಾಗಿತ್ತು. ಅನಗತ್ಯವಾಗಿ ಸಂಚರಿಸುವ ಬೈಕ್‌ಗಳು, ಆಟೊರಿಕ್ಷಾಗಳನ್ನು ಜಫ್ತಿ ಮಾಡಲಾಗಿತ್ತು. ಆದರೂ, ಜನರು ಪಾಠ ಕಲಿತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕೋವಿಡ್ ವಿರುದ್ಧದ ಹೋರಾಟದಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಕೈಜೋಡಿಸುತ್ತಿವೆ. ಸೇವಾ ಭಾರತಿ, ಐಎಂಎ, ಕೋವಿಡ್ ಸುರಕ್ಷಾ ಪಡೆಗಳು ರೋಗಿಗಳ ನೆರವಿಗೆ ಸಹಾಯ ಹಸ್ತ ಚಾಚಿವೆ ಎಂದು ಶ್ಲಾಘಿಸಿದರು.

ಜಿಲ್ಲೆಯಲ್ಲಿ ಆಮ್ಲಜನಕ, ವೆಂಟಿಲೇಟರ್, ಔಷಧಗಳು, ಹಾಸಿಗೆ ಸೇರಿದಂತೆ ಯಾವುದೇ ಕೊರತೆ ಇಲ್ಲ. ಜನರು ಆತಂಕಪಡುವ ಆವಶ್ಯಕತೆ ಇಲ್ಲ. ಮನೆಯಲ್ಲೇ ಇದ್ದು ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಜನಸ್ಪಂದನೆ ಇಲ್ಲದೆ ಯಾವ ನಿರ್ಧಾರಗಳೂ ಪರಿಣಾಮಕಾರಿ ಆಗುವುದಿಲ್ಲ. ಸಂಕಷ್ಟಕ್ಕೆ ಒಳಗಾದ ಬಡವರಿಗೆ ಆರ್ಥಿಕ ನೆರವು ನೀಡಲು ಪ್ರಯತ್ನಿಸಲಾಗುವುದು ಎಂದರು.

ಸಹಕಾರ ಭಾರತಿ ಮತ್ತಿತರ ಸಂಸ್ಥೆಗಳು ಆರಂಭಿಸಿರುವ ಕೋವಿಡ್ ಸೇವಾ ಕೇಂದ್ರಕ್ಕೆ ಕ್ಯಾಂಪ್ಕೋ ₹ 6 ಲಕ್ಷ ನೆರವು ನೀಡಿದೆ. ಇದೇರೀತಿ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳು ಉದಾರ ನೆರವು ನೀಡಬೇಕು ಎಂದು ವಿನಂತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.