ಶಿವಮೊಗ್ಗ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಾಗಿ ಸಿದ್ಧಪಡಿಸಿರುವ ಜಾತಿ ಪಟ್ಟಿಯಲ್ಲಿ 50ಕ್ಕೂ ಹೆಚ್ಚು ಹಿಂದೂ ಜಾತಿಗಳ ಹೆಸರಿನ ಮುಂದೆ ಕ್ರಿಶ್ಚಿಯನ್ ಪದ ಬಳಸಲಾಗಿದೆ. ಹಿಂದೂ ಸಮುದಾಯ ಇದನ್ನು ಒಪ್ಪುವುದಿಲ್ಲ. ಆದ್ದರಿಂದ ಕೂಡಲೇ ಸಮೀಕ್ಷೆ ನಡೆಸುವ ನಿರ್ಧಾರವನ್ನು ಸರ್ಕಾರ ಹಿಂಪಡೆಯಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದರು.
ಸಚಿವ ಸಂಪುಟ ಸಭೆಯಲ್ಲಿ ಸಮೀಕ್ಷೆಯ ವಿಚಾರವಾಗಿ ಚರ್ಚೆ ನಡೆದಿದೆ. ಜಾತಿ ಪಟ್ಟಿಯಲ್ಲಿ 331 ಹೊಸ ಜಾತಿಗಳ ಸೃಷ್ಟಿಗೆ ಬಹುತೇಕ ಸಚಿವರು ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತೀವ್ರ ಮುಖ ಭಂಗವಾಗಿದ್ದು, ಕುರ್ಚಿ ಉಳಿಯಬೇಕಿದ್ದರೆ ಸಮೀಕ್ಷೆ ಕೈಬಿಡುವುದು ಸೂಕ್ತ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸಲಹೆ ನೀಡಿದರು.
ಮೇಲ್ನೋಟಕ್ಕೆ ಮಾತ್ರ ಹಿಂದುಳಿದ ವರ್ಗ, ದಲಿತರ ಪರ ಎಂದು ಹೇಳಿಕೊಂಡಿರುವ ಸಿದ್ದರಾಮಯ್ಯ ಆಂತರಿಕವಾಗಿ ಖುರ್ಚಿ ಉಳಿಸಿಕೊಳ್ಳಲು ಸಂಚು ರೂಪಿಸಿದ್ದಾರೆ. ಹೊಸ ಜಾತಿಗಣತಿ ಹೆಸರಿನಲ್ಲಿ ಹಿಂದೂಗಳನ್ನು ಒಡೆಯುವ ಹುನ್ನಾರ ನಡೆಸುತ್ತಿದ್ದು, ಕಾಂಗ್ರೆಸ್ ಆಡಳಿತ ಕೊನೆಗೊಳ್ಳುವ ಕಾಲ ಸನಿಹದಲ್ಲಿದೆ ಎಂದರು.
ಕೇಂದ್ರ ಸರ್ಕಾರ ಅಧಿಕೃತವಾಗಿ ಜಾತಿ ಜನಗಣತಿ ಮಾಡುವುದಾಗಿ ಘೋಷಿಸಿದೆ. ಆದ್ದರಿಂದ, ರಾಜ್ಯ ಸರ್ಕಾರ ಸಮೀಕ್ಷೆ ನಡೆಸುವ ಅವಶ್ಯಕತೆ ಇಲ್ಲ. ಇಲ್ಲಿ ಪ್ರತಿಷ್ಠೆ ತೋರಿಸಲು ಸಿದ್ದರಾಮಯ್ಯ ಹೊರಟಿದ್ದರು. ಇದಕ್ಕೂ ಸಚಿವ ಸಂಪುಟ ಸಭೆಯಲ್ಲಿ ಹಿನ್ನಡೆ ಆಗಿದೆ. ಆದ್ದರಿಂದ ಹಿಂದೂ ಜಾತಿ ಹೆಸರಿನ ಮುಂದೆ ಕ್ರಿಶ್ಚಿಯನ್ ಪದ ಕೈಬಿಡಬೇಕು ಎಂದರು.
ಸೋಗಾನೆ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ಸಮಸ್ಯೆ ಬಗೆಹರಿಸಲು ಸರ್ಕಾರ ₹6.50ಕೋಟಿ ಬಿಡುಗಡೆ ಮಾಡಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿಕೆ ನೀಡಿದ್ದಾರೆ. ಆದೇಶ ಕೇವಲ ಆದೇಶವಾಗಿ ಉಳಿಯಬಾರದು. ತಕ್ಷಣ ಅನುಷ್ಟಾನಕ್ಕೆ ಬರಬೇಕು. ಸಂಸದ ಬಿ.ವೈ.ರಾಘವೇಂದ್ರ ಅವರು ಇದಕ್ಕೆ ಸಹಕರಿಸಬೇಕು. ಆರೋಪ-ಪ್ರತ್ಯಾರೋಪ ಮಾಡಿಕೊಳ್ಳುವುದರಲ್ಲಿ ಯಾವುದೇ ಲಾಭವಿಲ್ಲ ಎಂದು ಈಶ್ವರಪ್ಪ ಸಲಹೆ ನೀಡಿದರು.
ಪ್ರಮುಖರಾದ ಕೆ.ಇ.ಕಾಂತೇಶ್, ಇ.ವಿಶ್ವಾಸ್, ಕುಬೇರಪ್ಪ, ಮೋಹನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.