ಸಾಗರ: ಕನ್ನಡಕ್ಕೆ ತನ್ನದೇ ಆದ ವಿವೇಕವಿದೆ. ಈ ವಿವೇಕ ಹೇಗೆ ರೂಪುಗೊಂಡಿದೆ ಎನ್ನುವ ಬಗ್ಗೆ ಹೊಸ ತಲೆಮಾರು ಹುಡುಕಾಟ ನಡೆಸುವಂತೆ ಒತ್ತಡ ಹೇರಿದ್ದು ಕೆ.ವಿ.ಸುಬ್ಬಣ್ಣ ಅವರ ಹೆಗ್ಗಳಿಕೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಹೇಳಿದರು.
ಸಮೀಪದ ಭೀಮನಕೋಣೆ ಗ್ರಾಮದ ಕಿನ್ನರಮೇಳ ಸಭಾಂಗಣದಲ್ಲಿ ಕೇಡಲಸರದ ಸಂಸ್ಕೃತಿ ಸಮಾಜ ಟ್ರಸ್ಟ್ ಶುಕ್ರವಾರ ಏರ್ಪಡಿಸಿದ್ದ ಕೆ.ವಿ.ಸುಬ್ಬಣ್ಣ ಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಂಡವಾಳಶಾಹಿ, ವಸಾಹತುಶಾಹಿ ವ್ಯವಸ್ಥೆಯು ಸ್ಥಳೀಯ ಸಂಸ್ಕೃತಿಯನ್ನು ನಾಶಗೊಳಿಸುವ ಜೊತೆಗೆ ಸ್ಥಳೀಯರನ್ನು ಹೇಗೆ ಅನಾಥ ಮಾಡಬಲ್ಲದು ಎಂಬುದನ್ನು ಸುಬ್ಬಣ್ಣ 90ರ ದಶಕದಲ್ಲಿ ತಮ್ಮ ಬರಹಗಳಲ್ಲಿ ಗ್ರಹಿಸಿದ್ದಾರೆ. ಮೀಸಲಾತಿಯ ಅಪ್ರಸ್ತುತತೆ ಕುರಿತು ಸುಬ್ಬಣ್ಣ ಈ ಹಿಂದೆ ಹೇಳಿದ್ದು ಈಗ ನಿಜವಾಗುತ್ತಿದೆ. ಸರ್ಕಾರಿ ಕ್ಷೇತ್ರದಲ್ಲಿ ಉದ್ಯೋಗ ಇಲ್ಲ. ಖಾಸಗಿದಲ್ಲಿ ಮೀಸಲಾತಿ ಇಲ್ಲ. ಭೂ ಸುಧಾರಣೆಯಿಂದ ಕೃಷಿಕರ ಕೈ ಸೇರಿದ್ದ ಭೂಮಿ ಮರಳಿ ಬಂಡವಾಳಶಾಹಿಗಳ ಕೈಗೆ ಸೇರುತ್ತಿದೆ ಎಂದರು.
‘ಕುವೆಂಪು ಸಾಹಿತ್ಯಿಕವಾಗಿ ಯೋಚಿಸಿದ, ಬರಹಗಳ ಮೂಲಕ ಮಾಡಿದ ಕೆಲಸವನ್ನು ಸಾಂಸ್ಕೃತಿಕವಾಗಿ ಸಾಕಾರಗೊಳಿಸಿದ್ದು ಸುಬ್ಬಣ್ಣ ಅವರ ಸಾಧನೆ. ಪ್ರತಿನಿಧಿ ರಾಜಕಾರಣದ ಸ್ಥಾನದಲ್ಲಿ ಪ್ರಜಾ ರಾಜಕಾರಣ ನೆಲೆಸಬೇಕು ಎಂಬ ಆಶಯ ಸುಬ್ಬಣ್ಣ ಅವರ ಚಿಂತನೆಗಳಲ್ಲಿ ಎದ್ದು ಕಾಣುತ್ತದೆ. ರಾಜಕೀಯ-ಸಾಹಿತ್ಯ ಒಟ್ಟೊಟ್ಟಿಗೆ ಸಾಗಿದರೆ ಸಕಾರಾತ್ಮಕ ಬೆಳವಣಿಗೆ ಸಾಧ್ಯ ಎಂದು ಸುಬ್ಬಣ್ಣ ಪ್ರತಿಪಾದಿಸಿದ್ದರು ಎಂದು ವಿಮರ್ಶಕ ನರಹಳ್ಳಿ ಬಾಲಸುಬ್ರಮಣ್ಯ ಹೇಳಿದರು.
ರಂಗಕರ್ಮಿ ಚಿದಂಬರರಾವ್ ಜಂಬೆ ಅವರಿಗೆ ಕೆ.ವಿ.ಸುಬ್ಬಣ್ಣ ಗೌರವ ಪುರಸ್ಕಾರ ನೀಡಲಾಯಿತು. ರಂಗಕರ್ಮಿ ಪ್ರಸಾದ್ ರಕ್ಷಿದಿ, ಕೆ.ಜಿ.ಕೃಷ್ಣಮೂರ್ತಿ, ಕೆ.ಜಿ.ಮಹಾಬಲೇಶ್ವರ್, ವಿಮರ್ಶಕ ಟಿ.ಪಿ.ಅಶೋಕ್, ಉಮಾಮಹೇಶ್ವರ ಹೆಗಡೆ ಇದ್ದರು. ‘ಕೃಷ್ಣ ಸಂಧಾನ’ ತಾಳಮದ್ದಲೆ ಪ್ರಸ್ತುತಪಡಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.