ಸೊರಬ: ತಾಲ್ಲೂಕಿನ ಉಪ್ಪಳ್ಳಿ ಗ್ರಾಮದ ದೊಡ್ಡಕೆರೆಯಲ್ಲಿ ಮಲೆನಾಡಿನ ಜನಪದ ಕ್ರೀಡೆ ಮೀನು ಶಿಕಾರಿ (ಕೆರೆಬೇಟೆ) ಭರ್ಜರಿಯಾಗಿ ನಡೆಯಿತು.
ಮಲೆನಾಡಿನ ಅಪ್ಪಟ್ಟ ಗ್ರಾಮೀಣ ಕ್ರೀಡೆಯಾಗಿರುವ ಕೆರೆಬೇಟೆಯಲ್ಲಿ ಪಾಲ್ಗೊಳ್ಳುವವರು ಏಕಕಾಲದಲ್ಲಿ ಕೆರೆಗೆ ಇಳಿದು ಮೀನುಗಳ ಹಿಡಿಯುವುದನ್ನು ನೋಡಲು ನೂರಾರು ಜನ ಬರುತ್ತಾರೆ. ಮಳೆಗಾಲದ ಸಂದರ್ಭದಲ್ಲಿ ಕೆರೆಗಳಿಗೆ ಮೀನಿನ ಮರಿಗಳನ್ನು ಬಿಡಲಾಗುತ್ತದೆ. ನಂತರ ಬೇಸಿಗೆಯಲ್ಲಿ ಕೆರೆಗಳು ಬತ್ತಿದಾಗ ಕೆರೆಬೇಟೆ ಸಾರಲಾಗುತ್ತದೆ. ಈ ವೇಳೆ ಗ್ರಾಮಸ್ಥರಲ್ಲಿ ಎಲ್ಲಿಲ್ಲದ ಸಡಗರ.
ಗ್ರಾಮದಲ್ಲಿ ನಡೆದ ಕೆರೆಬೇಟೆಯಲ್ಲಿ ಕೂಣಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಗ್ರಾಮಸ್ಥರು ಮಾತ್ರವಲ್ಲದೇ ಸುತ್ತಲಿನ ಗ್ರಾಮದವರು ಜಾತಿ, ಮತಗಳ ಭೇದವಿಲ್ಲದೆ, ಹಿರಿಯರು, ಕಿರಿಯರೆನ್ನೆದೆ ಕೆರೆಬೇಟೆಯಲ್ಲಿ ಪಾಲ್ಗೊಂಡಿದ್ದರು. ಕೆಲವರಿಗೆ ಅಂದಾಜು 15 ಕೆ.ಜಿ.ವರೆಗೆ ಮೀನು ಲಭಿಸಿತು. ಕೂಣಿ ಹಿಡಿದು ಕೆರೆಗೆ ಇಳಿದವರು ಸಂಸತದಿಂದಲೇ ಕೆರೆಬೇಟೆ ಮಾಡಿ ತೆರಳಿದರು.
ವಿಶೇಷವೆಂದರೆ, ಇಲ್ಲಿಯೂ ಬಿದರಿನ ಕೂಣಿಯ ಜಾಗದಲ್ಲಿ ಕಬ್ಬಿಣದ ಕೂಣಿಗಳನ್ನೂ ಸಹ ಬಳಸಲಾಯಿತು. ಗ್ರಾಮ ಸಮಿತಿಯವರು ಯಾವುದೇ ಗಲಾಟೆ ಮತ್ತು ಗೊಂದಲಗಳಿಗೆ ಅವಕಾಶ ನೀಡದಂತೆ ಅಚ್ಚುಕಟ್ಟಾಗಿ ನಿರ್ವಹಿಸಿದರು.
ಮಳೆಗಾಲ ಆರಂಭವಾಗುವ ಮುನ್ನ ತಾಲ್ಲೂಕಿನಲ್ಲಿ ಕೆರೆಬೇಟೆಯ ಸಂಭ್ರಮ ನಡೆಯುತ್ತದೆ. ಗ್ರಾಮದವರು ಮಾತ್ರವಲ್ಲದೇ ಸಾಗರ, ತ್ಯಾಗರ್ತಿ, ಸಿದ್ದಾಪುರ, ಆನವಟ್ಟಿ, ಶಿರಾಳಕೊಪ್ಪ ಭಾಗದದಿಂದಲೂ ಕೆರೆಬೇಟೆ ಕಲಿಗಳು ಬಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.