ADVERTISEMENT

ಸೊರಬ: ದುರಸ್ತಿ ಕಾಣದ ಕೋಡಿ; ಬೇಸಿಗೆಗೆ ಮುನ್ನವೇ ಕೆರೆ ಬತ್ತುವ ಚಿಂತೆ

ಸೊರಬ; ವರ್ಷಧಾರೆಗೆ ಬಹುತೇಕ ಎಲ್ಲ ಕೆರೆಗಳೂ ಭರ್ತಿ, ನೀರು ಉಳಿಸಿಕೊಳ್ಳುವುದೇ ಸವಾಲು

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 4:25 IST
Last Updated 3 ಸೆಪ್ಟೆಂಬರ್ 2025, 4:25 IST
ಸೊರಬ ತಾಲ್ಲೂಕಿನ ಗೆಂಡ್ಲ-ಹೊಸೂರು ಗ್ರಾಮದ ಕೆರೆ ಕೋಡಿ ದುರಸ್ಥಿಗೊಂಡಿರುವುದು
ಸೊರಬ ತಾಲ್ಲೂಕಿನ ಗೆಂಡ್ಲ-ಹೊಸೂರು ಗ್ರಾಮದ ಕೆರೆ ಕೋಡಿ ದುರಸ್ಥಿಗೊಂಡಿರುವುದು   

ಸೊರಬ: ಜಿಲ್ಲೆಯಲ್ಲಿ ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ಶ್ರೇಯ ಸೊರಬ ತಾಲ್ಲೂಕಿನದ್ದು. ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿರುವ ಕಾರಣ ಬಹುತೇಕ ಕೆರೆಗಳು ತುಂಬಿವೆ. ಅದರಲ್ಲಿ ಬಹಳಷ್ಟು ಕೆರೆಗಳಲ್ಲಿ ಕೋಡಿ ಒಡೆದು ನೀರು ಪೋಲಾಗುತ್ತಿದೆ. ಬೇಸಿಗೆಯಲ್ಲಿ ನೀರಿನ ಅಭಾವ ತಲೆದೋರುವ ಆತಂಕ ಸೃಷ್ಟಿಯಾಗಿದೆ.

ತಾಲ್ಲೂಕಿನಲ್ಲಿ 1,204 ಕೆರೆಗಳಿವೆ. ಇದರಲ್ಲಿ 122 ಕೆರೆಗಳು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿವೆ. ಜಿಲ್ಲಾ ಪಂಚಾಯ್ತಿ ವ್ಯಾಪ್ತಿಗೆ ಬರುವ 971 ಕೆರೆಗಳಲ್ಲಿ ಹಲವು ಕೆರೆಯ ಕೋಡಿ ಹಾಳಾಗಿದ್ದು, ದುರಸ್ತಿಗೆ ₹ 38.42 ಲಕ್ಷ ಅನುದಾನ ನೀಡುವಂತೆ ಪ್ರಸ್ತಾವ ಸಲ್ಲಿಸಿದೆ.

ಇನ್ನು ಸಣ್ಣ ನೀರಾವರಿ ಇಲಾಖೆಗೆ 2023-24ರಲ್ಲಿ 11 ಕೆರೆಗಳ ದುರಸ್ತಿ ಕಾರ್ಯ ಹಾಗೂ ಅಭಿವೃದ್ಧಿಗೆ ₹ 4.70 ಕೋಟಿ ಅನುದಾನ ಬಿಡುಗಡೆಯಾಗಿದೆ. ಆದರೆ ಇದುವರೆಗೂ ಕೆರೆ ಕೋಡಿಗಳ ದುರಸ್ತಿ ಕಾರ್ಯ ನಡೆದಿಲ್ಲ.

ADVERTISEMENT

‘ಬೇಸಿಗೆಯಲ್ಲಿ ಗದ್ದೆಗೆ ತೆರಳಲು ದಾರಿಗಾಗಿ ಕೆರೆ ಕೋಡಿ ನೀರು ಹಾದು ಹೋಗುವ ಏರಿ ಕಿತ್ತು, ಮಳೆಗಾಲದಲ್ಲಿ ಮತ್ತೆ ಕಟ್ಟುವ ಕೆಲಸವನ್ನು ಸಾರ್ವಜನಿಕರೇ ಮಾಡುತ್ತಿದ್ದೇವೆ. ಗ್ರಾಮದಿಂದ ದಂಡಾವತಿ ನದಿವರೆಗೆ ರಸ್ತೆ ಜೊತೆ ಕಿರು ಸೇತುವೆ ನಿರ್ಮಾಣ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಈವರೆಗೂ ಈ ಬಗ್ಗೆ ಕ್ರಮ ಕೈಗೊಂಡಿಲ್ಲ’ ಎಂಬುದು ಗೆಂಡ್ಲ ಗ್ರಾಮದ ನಾಗರಾಜ ಗೌಡ ಆರೋಪ.

ಈ ಬಾರಿ ವರ್ಷಧಾರೆಗೆ ಕೆರೆಗಳು ತುಂಬಿದ್ದು, ಕೋಡಿಗಳ ದುರಸ್ತಿ ಕಾರ್ಯ‌ ಆಗಿಲ್ಲ. ತಾಲ್ಲೂಕಿನಲ್ಲಿ 19,400 ಹೆಕ್ಟೆರ್ ಪ್ರದೇಶದಲ್ಲಿ ಭತ್ತ ಬೆಳೆಯುತ್ತಿದ್ದು, ಶೇ 60ರಷ್ಟು ಕೆರೆ ನೀರು ಆಶ್ರಯಿಸಿದ ಬೆಳೆ ಇದೆ. ಇನ್ನು ಶೇ 40ರಷ್ಟು ಬೆಳೆ ಮಳೆ ಆಶ್ರಯಿಸಿದೆ. 2023–24ರಲ್ಲಿ ಟಿ.ಜಿ ಕೊಪ್ಪ ಗ್ರಾಮದಲ್ಲಿ ಹರಿದು ಹೋಗುವ ಗೌರಿ ಹಳ್ಳ ಕೆರೆ ಏರಿ ಒಡೆದು ನೂರಾರು ಎಕರೆ ಭತ್ತದ ಬೆಳೆ ಹಾನಿಯಾಗಿತ್ತು.‌ ಉರಗನಹಳ್ಳಿ– ದೇವತಿಕೊಪ್ಪ ಗ್ರಾಮದ ಕೆರೆ ಏರಿ ಕುಸಿದ ಪರಿಣಾಮ ಸೊರಬ ಹಾಗೂ ಶಿಕಾರಿಪುರ ಸಂಪರ್ಕ ಕಡಿತಗೊಂಡಿತ್ತು. ಈ ಬಾರಿಯೂ ಕೆರೆ ಏರಿಗಳಲ್ಲಿ ಸಣ್ಣದಾಗಿ ಬಿರುಕು ಕಾಣಿಸಿಕೊಂಡಿದ್ದು, ಸುತ್ತಲಿನ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಆತಂಕ ಶುರುವಾಗಿದೆ ಎನ್ನುತ್ತಾರೆ ಕೃಷಿಕ ಶಿವಕುಮಾರ್.

ತಾಲ್ಲೂಕಿನ ದೊಡ್ಡ ಕೆರೆಗಳಾದ ಕುಬಟೂರು, ದೇವತಿಕೊಪ್ಪ, ಬಾಸೂರು ಕೆರೆಗಳು ಭಾರಿ ಮಳೆಗೆ ತುಂಬಿವೆ. ಕೊಡಕಣಿ, ಬಾಸೂರು, ಕೆರೆಹಳ್ಳಿ, ಬಾರಂಗಿ ಸೇರಿದಂತೆ ಅನೇಕ ಗ್ರಾಮಗಳ ಕೆರೆಗಳು ಅಧಿಕ ಮಳೆ ತುಂಬಿವೆ.

ಜಿ.ಪಂ. ವ್ಯಾಪ್ತಿಗೆ ಒಳಪಡುವ ತಾಲ್ಲೂಕಿನ ಬೆನ್ನೂರು, ತುಡನೂರು, ಯಲವಾಳ, ಬಾರಂಗಿ, ಹಿರೇ ಮಾಗಡಿ, ಮುಟುಗುಪ್ಪೆ, ಬಿಳಗೋಡು ಸೇರಿದಂತೆ ಬಹುತೇಕ ಗ್ರಾಮದ ಕೆರೆಗಳ ಕೋಡಿ ಹಾಳಾಗಿದ್ದು, ವಿನಾಕಾರಣ ಹೆಚ್ಚಿನ ಪ್ರಮಾಣದ ನೀರು ಪೋಲಾಗುತ್ತಿದೆ. ಇದರಿಂದ ಪ್ರತಿ ವರ್ಷ ಬೇಸಿಗೆಗೂ ಮುನ್ನ ಕೆರೆಗಳಲ್ಲಿ ನೀರು ಬತ್ತಿ ಹೋಗಿ ದನಕರು, ಪ್ರಾಣಿ, ಪಕ್ಷಿಗಳು ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಸೊರಬ ತಾಲ್ಲೂಕಿನ ಟಿ.ಜಿ ಕೊಪ್ಪ ಗ್ರಾಮದಲ್ಲಿ‌ 2023-24ರಲ್ಲಿ ಗೌರಿ ಹಳ್ಳ ಏರಿ ಒಡೆದು ಗ್ರಾಮಸ್ಥರು ತಾತ್ಕಾಲಿಕ ಏರಿ ನಿರ್ಮಿಸಿರುವುದು
ಸೊರಬ ತಾಲ್ಲೂಕಿನ ಹೆಚ್ಚೆ ಗ್ರಾಮದ ತೋಟದಕೆರೆ ಕೋಡಿಯಲ್ಲಿ ಹರಿಯುತ್ತಿರುವ ನೀರು
ತಾಲ್ಲೂಕಿನ 11 ಕೆರೆಗಳ ಅಭಿವೃದ್ದಿಗಾಗಿ 2023–24ರಲ್ಲಿ ₹ 4.70 ಕೋಟಿ ಅನುದಾನ ಬಿಡುಗಡೆಗೊಂಡಿದ್ದು ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು.
ಚರಣ್ ಎಇಇ ಸಣ್ಣ ನೀರಾವರಿ ಇಲಾಖೆ. ಸೊರಬ
ಜಿ.ಪಂ ವ್ಯಾಪ್ತಿಯ 15 ಕೆರಗಳ ಅಭಿವೃದ್ಧಿಗೆ ₹ 38.42 ಲಕ್ಷ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೆಲವು ಕೆರೆಗಳ ಕೋಡಿ ದುರಸ್ತಿ ಕಾಮಗಾರಿಗೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು
ಮುರುಗೇಶ್ ಎಇಇ ಜಿ.ಪಂ. ಸೊರಬ

ಕೆರೆ ಬತ್ತಿ ಮೀನುಗಾರಿಕೆಗೂ ಅಡ್ಡಿ

ಕೋಡಿಯಿಂದ ವಿನಾಕಾರಣ ನೀರು ಪೋಲಾಗುತ್ತಿದೆ. ಇದರಿಂದ ಕೆರೆಗಳು ಬೇಸಿಗೆಗೆ ಮೊದಲೇ ಬತ್ತಲು ಶುರುವಾಗುತ್ತಿವೆ. ಹೂಳೆತ್ತುವುದು ಹಾಗೂ ಅಭಿವೃದ್ಧಿ ಕೆಲಸವಾಗದೇ ಡಿಸೆಂಬರ್– ಜನವರಿ ತಿಂಗಳಲ್ಲಿ ಕೆರೆಗಳ ನೀರು ಬತ್ತಿ ಹೋಗುತ್ತಿದೆ. ಅಲ್ಲದೆ ಗ್ರಾಮೀಣ ಭಾಗದಲ್ಲಿ ಮೀನುಗಾರಿಕೆಗೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿದ್ದು ಮೀನು ಮರಿ ಬಿಟ್ಟರೂ ನೀರಿಲ್ಲದೇ ಅವು ಬೆಳವಣಿಗೆ ಹೊಂದುತ್ತಿಲ್ಲ. ಇದರಿಂದ ಆದಾಯ ಇಲ್ಲವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.