ADVERTISEMENT

ಜಿಲ್ಲೆಯ ಎಲ್ಲೆಡೆ ಲಕ್ಷ್ಮ, ಗೋ ಪೂಜೆ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2019, 14:13 IST
Last Updated 28 ಅಕ್ಟೋಬರ್ 2019, 14:13 IST
ಶಿವಮೊಗ್ಗದಲ್ಲಿ ಮಹಿಳೆಯರು ಭಾನುವಾರ ಲಕ್ಷ್ಮಿ ಪೂಜೆ ನೆರವೇರಿಸಿದರು.
ಶಿವಮೊಗ್ಗದಲ್ಲಿ ಮಹಿಳೆಯರು ಭಾನುವಾರ ಲಕ್ಷ್ಮಿ ಪೂಜೆ ನೆರವೇರಿಸಿದರು.   

ಶಿವಮೊಗ್ಗ:ಜಿಲ್ಲೆಯ ಹಲವಡೆಗೆ ಗೃಹಿಣಿಯರು, ವ್ಯಾಪಾರಿಗಳು, ಉದ್ಯಮಿಗಳು ಭಾನುವಾರ ಲಕ್ಷ್ಮೀ ಪೂಜೆ, ಸೋಮವಾರ ಗೋ ಪೂಜೆಯನ್ನು ಸಂಭ್ರಮದಿಂದ ಆಚರಿಸಿದರು.

ನರಕ ಚತುರ್ದಶಿ, ಬಲಿಪಾಢ್ಯಮಿಯ ಮಧ್ಯೆ ಬರುವ ಅಮವಾಸ್ಯೆಯ ದಿನ ಧನಲಕ್ಷ್ಮೀ ಪೂಜಿಸುವ ಪರಿಪಾಠ ಹಿಂದಿನಿಂದಲೂ ಸಾಂಪ್ರದಾಯಿಕವಾಗಿ ನಡೆದುಕೊಂಡು ಬಂದಿದೆ. ಗೃಹಿಣಿಯರು ಮಡಿಯುಟ್ಟು, ಬಾಳೆಕಂದು, ತೋರಣ, ಹೂಗಳಿಂದ ಸಿಂಗರಿಸಿದ ಮಂಟಪದಲ್ಲಿ ಲಕ್ಷ್ಮೀ ಚಿತ್ರ, ಮೂರ್ತಿ, ಬೆಳ್ಳಿ, ಮರದ ಮುಖವಿಟ್ಟು ವಿಶೇಷ ಅಲಂಕಾರ ಮಾಡಿದ್ದರು.

ಲಕ್ಷ್ಮೀ ದೇವಿಯ ಮುಂದೆ ಚಿಲ್ಲರೆ ಹರವಿ, ಬಗೆಬಗೆಯ ನೋಟುಗಳನ್ನು ಹಾರದಂತೆ ಬಳಸಿದ್ದರು. ಕೆಲ ಮನೆಗಳಲ್ಲಿ ಕಳಸಕ್ಕೆ ಕಾಯಿ ಜೋಡಿಸಿ, ಹೊಸ ರವಿಗೆ ತೊಡಿಸಿ ಪೂಜಿಸಿದರು. ಕೆಲ ಮನೆಗಳಲ್ಲಿ ಚಿನ್ನಾಭರಣಗಳಿಂದ ಲಕ್ಷ್ಮೀದೇವಿಯ ಮೂರ್ತಿ ಅಲಂಕರಿಸಲಾಗಿತ್ತು.

ADVERTISEMENT

ನಗರ ಪ್ರದೇಶಗಳಲ್ಲಿ ಅಂಗಡಿ ಮಳಿಗೆಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಬೆಳಿಗ್ಗೆಯಿಂದ ವ್ಯಾಪಾರ-ವ, ಹಿವಾಟಿನಲ್ಲಿ ತೊಡಗಿಸಿಕೊಂಡಿದ್ದ ವರ್ತಕರು, ಸಂಜೆಯ ನಂತರ ವಹಿವಾಟು ಸ್ಥಗಿತಗೊಳಿಸಿ, ಪೂಜೆಗೆ ಸಿದ್ಧವಾದರು. ಲಕ್ಷ್ಮೀ ಪೂಜೆಯ ನಂತರ ಅಂಗಡಿಗಳ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಮಹಿಳೆಯರ ಸಂಭ್ರಮ:

ಮಹಿಳೆಯರು ಥೇಟ್ ಮಹಾಲಕ್ಷ್ಮಿಯರಂತೆ ಕಣ್ಮನ ಸೆಳೆಯುವ ಬಣ್ಣಬಣ್ಣದ ತರಹೇವಾರಿ ಸೀರೆಯುಟ್ಟು, ಚಿನ್ನಾಭರಣ ಧರಿಸಿ, ಮನೆಮನೆಗೆ ತೆರಳಿ ಮುತ್ತೈದೆಯರನ್ನು ಪೂಜೆಗೆ ಆಹ್ವಾನಿಸುತ್ತಿದ್ದ ದೃಶ್ಯ ಕಂಡುಬಂತು.

‘ಕಳೆದ 20 ವರ್ಷಗಳಿಂದ ನಿರಂತರವಾಗಿ ಲಕ್ಷ್ಮೀ ಪೂಜೆ ಮಾಡಿಕೊಂಡು ಬರಲಾಗುತ್ತಿದ್ದೇವೆ. ಕುಟುಂಬ, ಸಮಾಜಕ್ಕೆ ದೇವಿ ಆರೋಗ್ಯ, ಐಶ್ವರ್ಯ, ಆಯಸ್ಸು ನೀಡಲಿ ಎಂದು ಈ ಪೂಜೆ ಮಾಡುತ್ತೇವೆ. ಐದು ತರದ ಹೂವಿನಿಂದ ದೇವಿ ಅಲಂಕರಿಸಿ, ಐದು ತರದ ಸಿಹಿ ನೈವೇಧ್ಯ ಮಾಡುತ್ತೇವೆ. ನೆರೆ ಮನೆ, ಕುಟುಂಬ ವರ್ಗ ಕರೆದು ಅರಿಸಿನ, ಕುಂಕುಮ ನೀಡಲಾಗುತ್ತದೆ’ ಎಂದು ಪೂಜೆಯ ಮಹತ್ವ ಕುರಿತು ಹಲವು ಮಹಿಳೆಯರು ಅನಿಸಿಕೆ ಹಂಚಿಕೊಂಡರು.

ಹಲವೆಡೆ ಗೋಪೂಜೆ:ಸೋಮವಾರ ಮನೆಗಳನ್ನು ಹಸಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಮನೆಯ ಅಂಗಳ ಬಳಿದು, ರಂಗೋಲಿಯ ಚಿತ್ತಾರ ಬಿಡಿಸಲಾಗಿತ್ತು. ಹಲವರು ಮನೆಯ ಒಳಗೆ ಗೋ ಪೂಜೆ ಮಾಡಿದರು. ಸಂಜೆ ದೀಪಗಳ ಬೆಳಕಿನಲ್ಲಿ, ಆಕಾಶ ಬುಟ್ಟಿಯ ಚಿತ್ತಾರದಲ್ಲಿ ಝಗಮಗಿಸುವ ನಕ್ಷತ್ರಗಳ ಮಧ್ಯೆ ಸಿಡಿಸಿ, ಸಂಭ್ರಮಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಮಡಿಉಟ್ಟು ಗೋ ಮಾತೆಗೆ ವಿಶೇಷ ಪೂಜೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.