ADVERTISEMENT

ಶಿವಮೊಗ್ಗ| ಭೂ ಒತ್ತುವರಿಯಿಂದ ಸಂತ್ರಸ್ತರಿಗೆ ಸಂಕಷ್ಟ: ಎಸ್.ಆರ್. ಹಿರೇಮಠ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 6:10 IST
Last Updated 4 ಅಕ್ಟೋಬರ್ 2025, 6:10 IST
ಎಸ್.ಆರ್. ಹಿರೇಮಠ
ಎಸ್.ಆರ್. ಹಿರೇಮಠ   

ಶಿವಮೊಗ್ಗ: ‘ಜಿಲ್ಲೆಯ ಕೆಲವು ಪ್ರಭಾವಿ ವ್ಯಕ್ತಿಗಳಿಂದ ನೂರಾರು ಎಕರೆ ಅರಣ್ಯ ಮತ್ತು ಕಂದಾಯ ಭೂಮಿ ಕಬಳಿಸಲಾಗಿದೆ. ಇದನ್ನು ವಶಪಡಿಸಿಕೊಳ್ಳಲು ಸರ್ಕಾರಗಳಿಗೆ ಇಚ್ಛಾಶಕ್ತಿಯೇ ಇಲ್ಲ. ಇದರಿಂದ, ಶರಾವತಿ ಸಂತ್ರಸ್ತರೂ ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಹೇಳಿದರು.

‘ಶರಾವತಿ ಸಂತ್ರಸ್ತರ ಭೂಮಿಯ ಹಕ್ಕುದಾರಿಕೆ ಅತಂತ್ರವಾಗಿರುವ ಬಗ್ಗೆ ವಿಷಾದವಿದೆ. ಗಣಿಗಾರಿಕೆಯಿಂದ ಅರಣ್ಯ ನಾಶ ಮತ್ತು ನೂರಾರು ಎಕರೆ ಅಕ್ರಮ ಒತ್ತುವರಿ ಮಾಡಿಕೊಂಡವರೊಂದಿಗೆ ಸಂತ್ರಸ್ತರನ್ನು ಹೋಲಿಕೆ ಮಾಡುವುದು ಸರಿಯಲ್ಲ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಆಳುವ ಸರ್ಕಾರಗಳೇ ಶರಾವತಿ ಸಂತ್ರಸ್ತರನ್ನು ಅರಣ್ಯದ ನಡುವೆ ತಂದು ಬಿಟ್ಟಿದ್ದು, ಇದರಲ್ಲಿ ರೈತರ ತಪ್ಪಿಲ್ಲ. ಸಂತ್ರಸ್ತರಿಗೆ ತೊಂದರೆಯಾಗದಂತೆ ಸರ್ಕಾರ ನೋಡಿಕೊಳ್ಳಬೇಕು. ನ್ಯಾಯಾಂಗ ಹೋರಾಟಕ್ಕೆ ಮುಂದಾಗಬೇಕು. ಕುದುರೆಮುಖ ಅದಿರು ಕಂಪನಿ ಹಾಗೂ ಬಳ್ಳಾರಿ ಗಣಿಗಾರಿಕೆ ಸೇರಿದಂತೆ ಪರಿಸರ ಉಳಿಸುವ ನಮ್ಮ ಹೋರಾಟ ನಿರಂತರವಾದುದು’ ಎಂದರು.

ADVERTISEMENT

ಹೊಸನಗರ ತಾಲ್ಲೂಕಿನ ಗಿರೀಶ್‌ ಆಚಾರ್ ಅವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇಲ್ಲಿ ವಿಚಾರಣೆ ನಡೆದು ಅರಣ್ಯೇತರ ಚಟುವಟಿಕೆಗಳಿಗೆ ಮಂಜೂರು ಮಾಡಿದ್ದ ಭೂಮಿಯನ್ನು ಮರಳಿ ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕು ಎಂದು ನ್ಯಾಯಾಲಯ ತೀರ್ಪು ನೀಡಿತ್ತು. ಇದು ಆಳುವ ಸರ್ಕಾರಗಳು ಸೃಷ್ಟಿಸಿರುವ ಸಮಸ್ಯೆ. ಅರಣ್ಯ ಮತ್ತು ಕಂದಾಯ ಭೂಮಿಯ ದಾಖಲೆಗಳನ್ನು ಸಕಾಲದಲ್ಲಿ ಇಂಡೀಕರಣ ಮಾಡದಿರುವುದರಿಂದ ಈ ಸಮಸ್ಯೆ ಉದ್ಭವಗೊಂಡಿದೆ ಎಂದರು. 

‘ಮುಂಬರುವ ದಿನಗಳಲ್ಲಿ ಶರಾವತಿ ಸಂತ್ರಸ್ತರ ಸಮಸ್ಯೆಯೊಂದನ್ನೇ ಸಮಗ್ರವಾಗಿ ಅಧ್ಯಯನ ನಡೆಸಿ, ಅವರ ಪರ ನಡೆಯುವ ಯಾವುದೇ ಹೋರಾಟಕ್ಕೆ ನಮ್ಮ ಸಂಘಟನೆಯಿಂದ ಬೆಂಬಲ ಇದೆ. ಇಲ್ಲಿ ಬೇಜವಾಬ್ದಾರಿ ಸರ್ಕಾರಗಳಿಂದಾಗಿ ಹೊಟ್ಟೆಪಾಡಿಗೆ ಉಳುಮೆ ಮಾಡಿಕೊಂಡಿದ್ದ ರೈತರಿಗೆ ತೊಂದರೆಯಾಗಿದೆ’ ಎಂದು ಆರೋಪಿಸಿದರು. 

ಶರಾವತಿ ಪಂಪ್ ಸ್ಟೋರೇಜ್ ವಿದ್ಯುತ್ ಯೋಜನೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಜನರು ಒಂದಾದರೆ ಯಾವ ಸರ್ಕಾರವೂ ಜನವಿರೋಧಿ ಮತ್ತು ಪರಿಸರ ವಿರೋಧಿ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವಿಲ್ಲ. ಈ ಯೋಜನೆ ಬಗ್ಗೆ ಸ್ಥಳೀಯರು ಹೋರಾಟಕ್ಕೆ ಮುಂದಾಗಬೇಕು’ ಎಂದು ಅಭಿಪ್ರಾಯಪಟ್ಟರು.

ಸಂಘಟನೆಯ ಸಹ ಸಂಯೋಜಕ ಕೆ.ವಿ.ಭಟ್ಟ, ತರಬೇತುದಾರ ಜಿ.ಎನ್.ಸಿಂಹ, ಪ್ರಮುಖರಾದ ಎಂ.ಡಿ.ವಸಂತ್ ಕುಮಾರ್, ವಾಸುದೇವ್ ಕೋಟ್ಯಾನ್ ಇದ್ದರು. 

ಚಿಂತನಾ ಶಿಬಿರ
 ಇಂದಿನಿಂದ  ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿಯ ಕವಿಶೈಲದಲ್ಲಿ ಅಕ್ಟೋಬರ್ 4 ಮತ್ತು 5 ರಂದು ಬೆಳಿಗ್ಗೆ 10 ಗಂಟೆಗೆ ‘ಚಿಂತನಾ ಶಿಬಿರ’ ಆಯೋಜಿಸಲಾಗಿದೆ ಎಂದು ಎಸ್.ಆರ್. ಹಿರೇಮ‌ಠ ತಿಳಿಸಿದರು.  ಬಳ್ಳಾರಿ ವಿಜಯನಗರ ತಮಕೂರು ಹಾಗೂ ಚಿತ್ರದುರ್ಗ ಸೇರಿದಂತೆ ರಾಜ್ಯದ ಗಣಿ ಬಾಧಿತ ಪರಿಸರ ಮತ್ತು ಜನರ ಬದುಕಿನ ಪುನಶ್ಚೇತನದ ವಿಸ್ತೃತ ಜನಾಂದೋಲನದ ಭಾಗವಾಗಿ ಕಾರ್ಯಕರ್ತರಲ್ಲಿ ನಾಯಕತ್ವ ಗುಣ ಬೆಳೆಸುವ ಉದ್ದೇಶದಿಂದ ಶಿಬಿರ ಆಯೋಜಿಸಲಾಗಿದೆ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.