ADVERTISEMENT

ತೀರ್ಥಹಳ್ಳಿ: ಮಾಲೀಕತ್ವವೇ ಬದಲು; ಇದು ‘ನಕಲಿ’ ಜಾಲದ ಕರಾಮತ್ತು

ದಬ್ಬಣಗದ್ದೆ ಗ್ರಾಮದಲ್ಲಿ 217 ಎಕರೆ ದಾಖಲೆ ಬದಲಾವಣೆ, 11 ವರ್ಷದ ಬಾಲಕನ ಹೆಸರಿಗೆ ಮನೆದಳ ಚೀಟಿ

ನಿರಂಜನ ವಿ.
Published 23 ಜುಲೈ 2025, 4:57 IST
Last Updated 23 ಜುಲೈ 2025, 4:57 IST
ತೀರ್ಥಹಳ್ಳಿ ತಾಲ್ಲೂಕು ಕಚೇರಿ
ತೀರ್ಥಹಳ್ಳಿ ತಾಲ್ಲೂಕು ಕಚೇರಿ   

ತೀರ್ಥಹಳ್ಳಿ: ಕಂದಾಯ ದಾಖಲೆ ತಿದ್ದುಪಡಿ ಮಾಡಿ ಅಕ್ರಮವಾಗಿ ನಕಲಿ ಮಾಲೀಕತ್ವ ಸೃಷ್ಟಿಸುವ ಜಾಲ ವಿವಿಧ ಗ್ರಾಮಗಳಲ್ಲಿ ಸಕ್ರಿಯವಾಗಿದೆ. ಅನಾಮಿಕರ ಹೆಸರುಗಳು ಪಹಣಿ ಚೀಟಿಯಲ್ಲಿ ನಮೂದಾಗುತ್ತಿದ್ದು, ಇದು ತಾಲ್ಲೂಕಿನಲ್ಲಿ ವಿವಾದದ ಕಿಡಿ ಹೊತ್ತಿಸಿದೆ. 

ಮುತ್ತೂರು ಹೋಬಳಿಯ ದಬ್ಬಣಗದ್ದೆ ಗ್ರಾಮದ 217 ಎಕರೆ ಭೂಮಿಯು ಆಕಾರ್‌ ಬಂದ್‌ ದಾಖಲೆಯ ಪ್ರಕಾರ ಸರ್ಕಾರಿ ಖರಾಬ್‌ ಪ್ರದೇಶಕ್ಕೆ ಸೇರಿದೆ. 1999ರ ನವೆಂಬರ್‌ 30ರಂದು ಅಂದಿನ ತಹಶೀಲ್ದಾರ್‌, ಆಕಾರ್‌ ಬಂದ್‌ ದಾಖಲೆಯಂತೆ ಸರ್ವೆ ನಂಬರ್‌ 17/2ರಲ್ಲಿನ 33.11 ಎಕರೆ, ಸರ್ವೆ ನಂಬರ್‌ 83/1ರಲ್ಲಿನ 60.27 ಎಕರೆ ಹಾಗೂ ಸರ್ವೆ ನಂಬರ್‌ 84/1ರಲ್ಲಿನ 122.35 ಎಕರೆ ಪ್ರದೇಶವನ್ನು ಖರಾಬ್‌ ಜಮೀನು ಆಗಿರುವ ಕಾರಣ ಆರ್‌ಟಿಸಿ ದಾಖಲೆಯ 9 ಮತ್ತು 12ನೇ ಕಲಂನಡಿ ಸರ್ಕಾರಿ ಎಂದು ನಮೂದಿಸಿ ಆದೇಶಿಸಿದ್ದಾರೆ.  

ಅಲ್ಲಿ ಸರ್ಕಾರಿ ಶಾಲೆ, ಅಂಗನವಾಡಿ ಕಟ್ಟಡ, ನೀರು ಸರಬರಾಜು ಟ್ಯಾಂಕ್‌, 100ಕ್ಕೂ ಹೆಚ್ಚು ಕುಟುಂಬಗಳ ವಾಸದ ಮನೆ, ಸಾಗುವಳಿ ಜಮೀನು, ಪರಿಭಾವಿತ ಅರಣ್ಯ ಸ್ವರೂಪದ ಪ್ರದೇಶ ಇವೆ. ತಲೆಮಾರುಗಳಿಂದ ಸಾಗುವಳಿ ಮಾಡಿಕೊಂಡಿದ್ದ ರೈತರಿಗೆ ಶಾಸಕರ ಅಧ್ಯಕ್ಷತೆಯಲ್ಲಿ ಬಗರ್‌ ಹುಕುಂ ಸಕ್ರಮೀಕರಣ ಸಮಿತಿಯು ಭೂ ಮಂಜೂರು ಆದೇಶ ನೀಡಿ ಜಮೀನಿನ ಮಾಲೀಕತ್ವದ ದಾಖಲೆ ಒದಗಿಸಿದೆ.  

ADVERTISEMENT

26 ವರ್ಷಗಳ ನಂತರ ಈಗ ಎಂ.ಎಸ್.ರವಿಪ್ರಕಾಶ್‌ ಎಂಬುವವರು ತಗಾದೆ ತೆಗೆದಿದ್ದಾರೆ. ‘ತಹಶೀಲ್ದಾರ್‌, ಖರಾಬ್‌ ಜಮೀನನ್ನು ಸರ್ಕಾರಿ ಎಂದು ನಮೂದಿಸಿ ಆದೇಶ ಹೊರಡಿಸುವ ಮುನ್ನ ಯಾವುದೇ ತಿಳಿವಳಿಕೆ ಪತ್ರ ನೀಡಿಲ್ಲ. ಈ ಜಮೀನು ನಮ್ಮ ಪಿತ್ರಾರ್ಜಿತ ಆಸ್ತಿಯಾಗಿದ್ದು, ಕಾಲ ವಿಳಂಬ ಮನ್ನಾ ಅರ್ಜಿ ಎಂದು ಪರಿಗಣಿಸಬೇಕು’ ಎಂದು 2025ರ ಜನವರಿ 27ರಂದು ಶಿವಮೊಗ್ಗ ಉಪ ವಿಭಾಗಾಧಿಕಾರಿಗೆ ಮೇಲ್ಮನವಿ ಸಲ್ಲಿಸಿರುವುದು ವ್ಯಾಪಕ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಈ ಕುರಿತು ಪರಿಶೀಲನೆ ನಡೆಸುವಂತೆ ಉಪವಿಭಾಗಾಧಿಕಾರಿ ನ್ಯಾಯಾಲಯ 2025ರ ಮಾರ್ಚ್‌ 3ರಂದು ತಹಶೀಲ್ದಾರ್‌ಗೆ ಸೂಚಿಸಿದೆ. 

11ರ ಪೋರನಿಗೆ ದೊರೆತ ಮನೆದಳ ಚೀಟಿ:  

‘ಅಗ್ರಹಾರ ಹೋಬಳಿಯ ಜಂಬೆತಲ್ಲೂರು ಗ್ರಾಮದ ಸರ್ವೆ ನಂಬರ್‌ 97ರ ಭೂಮಿಗೆ ಸಂಬಂಧಿಸಿದಂತೆ 11 ವರ್ಷದ ಬಾಲಕನಾಗಿದ್ದ ಜೆ.ಕೃಷ್ಣಮೂರ್ತಿ ಅವರಿಗೆ 1964ರಲ್ಲಿ ಮನೆದಳ ಚೀಟಿ (ಹಕ್ಕುಪತ್ರ) ದೊರೆತಿದೆ. 1953ರಲ್ಲಿ ಜನಿಸಿದ ಅವರಿಗೆ ಈಗ 72 ರ ಹರೆಯ. ತೀರ್ಥಹಳ್ಳಿಯ ಉಪ ನೋಂದಣಾಧಿಕಾರಿ ಕಚೇರಿಯ ಕ್ರಯಪತ್ರದಲ್ಲಿ 60 ವರ್ಷ ವಯಸ್ಸೆಂದು ನಮೂದಿಸಲಾಗಿದೆ. ಮನೆದಳ ದಾಖಲೆ ಪರಿಶೀಲಿಸಿದಾಗ ಅಂದಿನ ಅಮಲ್ದಾರ್‌ ನೀಡಿದ ಚೀಟಿಪತ್ರದಲ್ಲಿ ಸಹಿ ಇಲ್ಲದಿರುವುದು ಕಂಡು ಬಂದಿದೆ. ಮನೆ ದಳ ಚೀಟಿಯಲ್ಲಿ ಪರಭಾರೆ ಮಾಡತಕ್ಕದ್ದಲ್ಲ ಎಂಬ ಅಂಶ ಇದ್ದರೂ, 2025ರ ಜ.2ರಂದು ಆ ಜಾಗವನ್ನು ಮಾರಾಟ ಮಾಡಲಾಗಿದೆ. ಅಲ್ಲದೇ ಗುಡ್ಡೇಕೊಪ್ಪ ಪಂಚಾಯಿತಿ ಇ-ಸ್ವತ್ತು ದಾಖಲೆ ನೀಡಿದೆ’ ಎಂದು ಆಕ್ಷೇಪಿಸಿ ಕೋಟೆಗದ್ದೆ ಗ್ರಾಮದ ಕೆ.ಎ.ಶಿವಾನಂದ ಎಂಬುವವರು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ, ತೀರ್ಥಹಳ್ಳಿ ಇಒಗೆ ದೂರು ನೀಡಿದ್ದಾರೆ. 

15ಕ್ಕೂ ಹೆಚ್ಚು ಗ್ರಾಮಗಳಲ್ಲಿ ಅಕ್ರಮ: 

ಕಂದಾಯ ದಾಖಲೆಗಳನ್ನು ತಿದ್ದುತ್ತಿರುವ ಆರೋಪಗಳು ನಿರಂತರವಾಗಿ ಕೇಳಿ ಬರುತ್ತಿವೆ. ಸಹಿ ಬದಲಾವಣೆ, ನಕ್ಷೆ, ಸಾಗುವಳಿ ಚೀಟಿ ಕಡತ, ಹಕ್ಕುಪತ್ರ ನಾಪತ್ತೆ ಪ್ರಕರಣಗಳು ಹೆಚ್ಚುತ್ತಿವೆ. ದಬ್ಬಣಗದ್ದೆ ಮಾದರಿಯಲ್ಲೇ ಬೆಜ್ಜವಳ್ಳಿ, ಹುಂಚದಕಟ್ಟೆ, ನಾಲೂರು- ಕೊಳಿಗೆ, ಸಿಂಗನಬಿದರೆ, ಹೆಗ್ಗೋಡು, ಮೇಗರವಳ್ಳಿ, ಹಣಗೆರೆ, ಬಿದರಗೋಡು ಸೇರಿದಂತೆ 15ಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ನಕಲಿ ಮಾಲೀಕತ್ವ ಸೃಷ್ಟಿಸುತ್ತಿರುವ ಗಂಭೀರ ಆರೋಪಗಳು ಕೇಳಿ ಬಂದಿದೆ.

ಭೂ ಸುರಕ್ಷಾ ಯೋಜನೆಯಡಿ 36 ಲಕ್ಷ ದಾಖಲೆಯನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ. ದಬ್ಬಣಗದ್ದೆಯ ವಾಸ್ತವ ವರದಿ ಪಡೆದು ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಲಾಗಿದೆ. ಉಳಿದ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಗ್ರಾಮ ಲೆಕ್ಕಿಗರು ಕಂದಾಯ ನಿರೀಕ್ಷಕರ ವರದಿ ಕೇಳಲಾಗಿದೆ
ರಂಜಿತ್‌ ಎಸ್. ತಹಶೀಲ್ದಾರ್‌
ಬ್ಬಣಗದ್ದೆ ಸೇರಿದಂತೆ ಹಲವು ಕಂದಾಯ ಗ್ರಾಮಗಳಲ್ಲಿ ನಕಲಿ ಮಾಲೀಕತ್ವ ಸೃಷ್ಟಿಸಲಾಗುತ್ತಿದೆ. ರಿಯಲ್‌ ಎಸ್ಟೇಟ್‌ ದಂಧೆಯಲ್ಲಿ ಕಂದಾಯ ಇಲಾಖೆ ಭಾಗಿಯಾಗಿದೆ. ದಾಖಲೆ ಸಂಗ್ರಹಿಸಿ ಸರ್ಕಾರಕ್ಕೆ ದೂರು ನೀಡಲು ಸಿದ್ಧತೆ ನಡೆಸಿದ್ದೇವೆ
ಶ್ರೀನಂದ ದಬ್ಬಣಗದ್ದೆ ಸಾಮಾಜಿಕ ಹೋರಾಟಗಾರ

Quote -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.