ADVERTISEMENT

ಶರಾವತಿ ಸಂತ್ರಸ್ತರಿಗೆ ಭೂಮಿ ಹಕ್ಕು: 6 ತಿಂಗಳೊಳಗೆ ವರದಿ

ಶಾಸಕ ಎಚ್. ಹಾಲಪ್ಪ ಹರತಾಳು

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2020, 14:40 IST
Last Updated 2 ಡಿಸೆಂಬರ್ 2020, 14:40 IST
ಶರಾವತಿ ಮುಳುಗಡೆ ಸಂತ್ರಸ್ತರ ಪ್ರಕರಣ ಪರಿಶೀಲನೆಗೆ ಸರ್ಕಾರ ನೇಮಿಸಿರುವ ವಿಶೇಷ ಕರ್ತವ್ಯಾಧಿಕಾರಿ ಶಿವಕುಮಾರ್ ಬಿ. ಅವರು ಬುಧವಾರ ಸಾಗರಕ್ಕೆ ಬಂದಿದ್ದ ಸಂದರ್ಭದಲ್ಲಿ ಶಾಸಕ ಎಚ್. ಹಾಲಪ್ಪ ಹರತಾಳು ಅವರೊಂದಿಗೆ ಸಮಾಲೋಚನೆ ನಡೆಸಿದರು.
ಶರಾವತಿ ಮುಳುಗಡೆ ಸಂತ್ರಸ್ತರ ಪ್ರಕರಣ ಪರಿಶೀಲನೆಗೆ ಸರ್ಕಾರ ನೇಮಿಸಿರುವ ವಿಶೇಷ ಕರ್ತವ್ಯಾಧಿಕಾರಿ ಶಿವಕುಮಾರ್ ಬಿ. ಅವರು ಬುಧವಾರ ಸಾಗರಕ್ಕೆ ಬಂದಿದ್ದ ಸಂದರ್ಭದಲ್ಲಿ ಶಾಸಕ ಎಚ್. ಹಾಲಪ್ಪ ಹರತಾಳು ಅವರೊಂದಿಗೆ ಸಮಾಲೋಚನೆ ನಡೆಸಿದರು.   

ಸಾಗರ: ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿಯ ಹಕ್ಕು ದೊರಕಿಸಿ ಕೊಡುವ ಸಂಬಂಧ ವಿಶೇಷಾಧಿಕಾರಿಯನ್ನು ಸರ್ಕಾರ ನೇಮಿಸಿದ್ದು, ಆರು ತಿಂಗಳೊಳಗೆ ಭೂಮಿ ಕಳೆದುಕೊಂಡ ರೈತರಿಗೆ ಭೂಮಿಯ ಹಕ್ಕು ದೊರಕಿಸಿಕೊಡುವ ಕುರಿತು ದಾಖಲೆ ಸಮೇತ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ ಎಂದು ಶಾಸಕ ಎಚ್. ಹಾಲಪ್ಪ ಹರತಾಳು ತಿಳಿಸಿದ್ದಾರೆ.

ಶರಾವತಿ ಮುಳುಗಡೆ ಸಂತ್ರಸ್ತರ ಪ್ರಕರಣ ಪರಿಶೀಲನೆಗೆ ಸರ್ಕಾರ ನೇಮಿಸಿರುವ ವಿಶೇಷ ಕರ್ತವ್ಯಾಧಿಕಾರಿ ಶಿವಕುಮಾರ್ ಬಿ. ಬುಧವಾರ ಸಾಗರಕ್ಕೆ ಬಂದಿದ್ದ ಸಂದರ್ಭದಲ್ಲಿ ಅವರೊಂದಿಗೆ ಸಮಾಲೋಚನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ಹಿಂದೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಎರಡು ತಿಂಗಳೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು. ಆದರೆ 14 ಸಾವಿರಕ್ಕೂ ಹೆಚ್ಚು ಶರಾವತಿ ಮುಳುಗಡೆ ಸಂತ್ರಸ್ತ ಕುಟುಂಬಗಳು ಇರುವುದರಿಂದ ಮಾಹಿತಿ ಸಂಗ್ರಹಿಸಿ ದಾಖಲೆ ಒದಗಿಸಲು ಆರು ತಿಂಗಳು ಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ADVERTISEMENT

1960ರ ಸಂದರ್ಭದಲ್ಲೇ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿ ಗುರುತಿಸಿ ಕೊಡಲಾಗಿದೆ. ಅಲ್ಲಿ ಅವರು ಆಗಿನಿಂದಲೂ ವಾಸವಾಗಿ ಸಾಗುವಳಿ ಮಾಡುತ್ತಿದ್ದಾರೆ. ಆದರೆ ಈವರೆಗೂ ಅವರಿಗೆ ಭೂಮಿಯ ಹಕ್ಕುಪತ್ರ ನೀಡಿಲ್ಲ. ಸ್ಥಳೀಯ ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಸ್ಥಳಕ್ಕೆ ಭೇಟಿ ನೀಡಿ ಸ್ವಾಧೀನದಲ್ಲಿರುವ ಭೂಮಿಯ ಕುರಿತು ವಿವರ ಸಂಗ್ರಹಿಸಬೇಕಿದೆ ಎಂದು ತಿಳಿಸಿದರು.

ಶರಾವತಿ ಮುಳುಗಡೆ ಸಂತ್ರಸ್ತರು ಶಿವಮೊಗ್ಗ ಜಿಲ್ಲೆ ವ್ಯಾಪ್ತಿಯಲ್ಲಿ ಬೇರೆ ಬೇರೆ ಪ್ರದೇಶಗಳಲ್ಲಿ ವಾಸವಾಗಿದ್ದಾರೆ. ಕೆಲವರು ಜಮೀನು ಮಂಜೂರಾತಿಗೆ ಅರ್ಜಿಯನ್ನೇ ಸಲ್ಲಿಸಿಲ್ಲ. ಗ್ರಾಮ ಪಂಚಾಯಿತಿ ಚುನಾವಣೆ ಮುಗಿದ ನಂತರ ಅವರಿಂದ ಅರ್ಜಿ ಪಡೆಯಲಾಗುವುದು ಎಂದು ಹೇಳಿದರು.

ವಿಶೇಷ ಕರ್ತವ್ಯಾಧಿಕಾರಿ ಬಿ. ಶಿವಕುಮಾರ್, ಮುಳುಗಡೆ ಸಂತ್ರಸ್ತರು ಯಾವ ಪ್ರದೇಶದಲ್ಲಿ ಸಾಗುವಳಿ ಮಾಡುತ್ತಿದ್ದಾರೆಯೊ ಅದಕ್ಕೆ ಸಂಬಂಧಪಟ್ಟಂತೆ ಹಕ್ಕುಪತ್ರ ವಿತರಿಸಲಾಗುವುದು. ಕೆಲವರು ಸಾಗುವಳಿ ಮಾಡುತ್ತಿರುವ ಭೂಮಿ ಅರಣ್ಯಭೂಮಿ, ಗೋಮಾಳ, ಗ್ರಾಮ ಠಾಣಾ, ಸೊಪ್ಪಿನಬೆಟ್ಟದ ವ್ಯಾಪ್ತಿಯಲ್ಲಿ ಬರುತ್ತದೆ ಎನ್ನಲಾಗಿದೆ. ಕಂದಾಯ ಹಾಗೂ ಅರಣ್ಯ ಇಲಾಖೆಯ ಜಂಟಿ ಸರ್ವೆ ನಡೆಸಿ ಸಾಗುವಳಿದಾರರಿಗೆ ಭೂಮಿಯ ಹಕ್ಕು ಕೊಡಿಸಲಾಗುವುದು ಎಂದು ತಿಳಿಸಿದರು. ಗ್ರೇಡ್-2 ತಹಶೀಲ್ದಾರ್ ಪರಮೇಶ್ವರ ಟಿ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.