ADVERTISEMENT

ಭೂ ಕುಸಿತ ಸಂಭವಿಸುವ ಸಾಧ್ಯತೆ: ಭಾರತೀಪುರ ಗುಡ್ಡದ ಹೆದ್ದಾರಿ ಮಾರ್ಗ ಬಂದ್‌

ನಿರಂಜನ ವಿ.
Published 9 ಜೂನ್ 2025, 8:09 IST
Last Updated 9 ಜೂನ್ 2025, 8:09 IST
ಭಾರತೀಪುರ ಚತುಷ್ಪಥ ಮೇಲ್ಸೇತುವೆಗಾಗಿ ಜರುಗಿಸಿರುವ ಗುಡ್ಡ
ಭಾರತೀಪುರ ಚತುಷ್ಪಥ ಮೇಲ್ಸೇತುವೆಗಾಗಿ ಜರುಗಿಸಿರುವ ಗುಡ್ಡ   

ತೀರ್ಥಹಳ್ಳಿ: ಮೇಲ್ಸೇತುವೆ ಕಾಮಗಾರಿಗೆ ಭಾರತೀಪುರ ಗುಡ್ಡ ತೆರೆದುಕೊಂಡಿದ್ದು ಮಳೆಗಾಲದಲ್ಲಿ ಕುಸಿಯುವ ಆತಂಕ ಎದುರಾಗಿದೆ. ಭೂ ಕುಸಿತ ಸಂಭವಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ತಾತ್ಕಾಲಿಕ ಚತುಷ್ಪತ ರಸ್ತೆಯ ಒಂದು ಮಾರ್ಗದ ಸಂಚಾರ ಸ್ಥಗಿತಗೊಳ್ಳಲಿದೆ.

₹56.35 ಕೋಟಿ ವೆಚ್ಚದಲ್ಲಿ ಭಾರತೀಪುರ ಎಡ-ಬಲ ಮೇಲ್ಸೇತುವೆ (ಪ್ಲೈ ಓವರ್)‌ ಕಾಮಗಾರಿ ಮುಕ್ತಾಯದ ಹಂತ ತಲುಪಿದ್ದು ಸಂಚಾರಕ್ಕೆ ಅನುವು ಮಾಡಲಾಗಿದೆ. ಆಕಸ್ಮಿಕವಾಗಿ ಗುಡ್ಡ ಕುಸಿತ ಸಂಭವಿಸಿದರೆ ಮುಂದೇನು ಗತಿ ಎಂಬ ಪ್ರಶ್ನೆ ವಾಹನ ಸವಾರರನ್ನು ಆತಂಕಕ್ಕೀಡು ಮಾಡಿದೆ.

ಶಿವಮೊಗ್ಗ – ಮಂಗಳೂರು ರಾಷ್ಟ್ರೀಯ ಹೆದ್ದಾರಿ 169 ಮಾರ್ಗದ ವಿಸ್ತರಣೆ ಕಾಮಗಾರಿ ವೇಗ ಪಡೆದುಕೊಂಡಿದೆ. ಮಾರ್ಗ ಮಧ್ಯೆಯ ಹೇರ್‌ ಪಿನ್‌ ತಿರುವು ನೇರಗೊಳಿಸುವ ಉದ್ದೇಶದಿಂದ ಮೇಲ್ಸೇತುವೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಇದಕ್ಕಾಗಿ 200 ಮೀಟರ್‌ ಉದ್ದದಷ್ಟು ಬೃಹತ್‌ ಗುಡ್ಡವನ್ನು ಕಡಿದು ಚತುಷ್ಪತ ಸೇತುವೆ ನಿರ್ಮಿಸಲಾಗಿದೆ.

ADVERTISEMENT

ರಸ್ತೆಯ ಬದಿಯಲ್ಲೇ 100 ಅಡಿಗಳಷ್ಟು ಎತ್ತರದ ಗುಡ್ಡ ಇದೆ. ಒಂದು ವೇಳೆ ಶಾಲಾ ವಾಹನ, ಪ್ರಯಾಣಿಕರ ಬಸ್‌, ಹೆಚ್ಚು ಜನರು ಓಡಾಡುವಾಗ ಗುಡ್ಡ ಕುಸಿದರೆ ಏಕಕಾಲದಲ್ಲಿ ನೂರಾರು ಜನರ ಪ್ರಾಣಕ್ಕೆ ಕುತ್ತುಂಟಾಗಲಿದೆ. ಭಾರಿ ಪ್ರಮಾಣದಲ್ಲಿ ಗುಡ್ಡ ಜರುಗಿದರೆ ಸ್ಥಳೀಯ ನಿವಾಸಿಗಳ ಮನೆಗಳಿಗೆ ಗುಡ್ಡದ ಮಣ್ಣು, ನೀರು ನುಗ್ಗುವ ಸಾಧ್ಯತೆಯೂ ಹೆಚ್ಚಿದೆ.

ಗುಡುಗು, ಗಾಳಿ, ಮಳೆ ಆಗಮಿಸಿದರೆ ಗುಡ್ಡದ ನೆತ್ತಿ ನೋಡುವ ಸನ್ನಿವೇಶ ನಿರ್ಮಾಣವಾಗಿದೆ. ಹತ್ತಿರದಲ್ಲೇ ತುಂಗಾ ನದಿ ಇದ್ದು ಪ್ರವಾಹ, ನೀರಿನ ಸೆಲೆಗಳ ಹರಿವು ಗುರುತಿಸದಿರುವುದು, ರಸ್ತೆ, ಸೇತುವೆ ನಿರ್ಮಾಣಕ್ಕಾಗಿ ಬೃಹತ್‌ ಗಾತ್ರದ ಬುಲ್ಡೋಜರ್‌, ವೈಬ್ರೇಟರ್‌, ಕುಳಿಯಂತ್ರ ಬಳಕೆಯಿಂದಾಗಿ ಗುಡ್ಡದ ಮೇಲಿರುವ ಮರಗಳ ಬೇರು ಸಡಿಲಗೊಂಡಿರುವ ಆತಂಕ ಗ್ರಾಮಸ್ಥರನ್ನು ಕಾಡುತ್ತಿದೆ.

ತಡೆಗೋಡೆ ನಿರ್ಮಾಣ ಮಾಡಿಲ್ಲ:

ಅರಣ್ಯ ಇಲಾಖೆಯ ಪೂರ್ವಾನುಮತಿ ಕೇವಲ ರಸ್ತೆಗೆ ಮಾತ್ರ ಸಿಕ್ಕಿದ್ದು ಗುಡ್ಡದ ನೆತ್ತಿಯ ಮೇಲಿನ ಮರಗಳ ಕಟಾವಿಗೆ ಅವಕಾಶ ಸಿಕ್ಕಿಲ್ಲ. ತಡೆಗೋಡೆ ನಿರ್ಮಿಸಿದರೂ ಗುಡ್ಡ ಕುಸಿಯುವುದನ್ನು ತಡೆಯಲು ಸಾಧ್ಯವಿಲ್ಲ. ಮಳೆಗಾಲದಲ್ಲಿ ಎಲ್ಲಿ ಕುಸಿಯುತ್ತದೆ ಎಂದು ವೀಕ್ಷಿಸಿ ಅಲ್ಲಿಗೆ ತಡೆಗೋಡೆ ನಿರ್ಮಿಸುವ ಚಿಂತನೆ ಇಟ್ಟುಕೊಂಡಿದ್ದೇವೆ ಎಂದು ಈಚೆಗೆ ತಾಲ್ಲೂಕು ಕಚೇರಿಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಅಧ್ಯಕ್ಷತೆಯಲ್ಲಿ ನಡೆದ ಮುಂಗಾರು ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಯೊಬ್ಬರು ಸಭೆಗೆ ತಿಳಿಸಿದ್ದರು.

ಅನುಮತಿಸದ ಅರಣ್ಯ ಇಲಾಖೆ:

ಭಾರತೀಪುರ ಗುಡ್ಡ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸೇರಿಕೊಂಡಿದೆ. ಹೆದ್ದಾರಿ ಪ್ರಾಧಿಕಾರ ಕೇಳಿದಷ್ಟು ಪ್ರದೇಶವನ್ನು ಮಾತ್ರ ಕೇಂದ್ರ ಅರಣ್ಯ ಪರಿಸರ ಸಚಿವಾಲಯ ಪೂರ್ವಾನುಮತಿ (ಎಫ್‌ಸಿ) ನೀಡಿದೆ. ಗುಡ್ಡ ಕಡಿದಾದ ಪ್ರದೇಶದಿಂದ ಕೂಡಿದ್ದು ಹೆಚ್ಚಿನ ಗುಡ್ಡ ಕಡಿತಕ್ಕೆ ಅನುಮತಿಸಿಲ್ಲ. ಪೂರ್ಣ ಅನುಮತಿಗೂ ಮುನ್ನವೇ ಗುಡ್ಡ ಕೊರೆದಿರುವುದರಿಂದ ಸಮಸ್ಯೆ ತಲೆದೋರಿದೆ.

ತರಾತುರಿಯ ಪರ್ಯಾಯ ಮಾರ್ಗ:

ಭಾರತೀಪುರ ಗುಡ್ಡ ಕುಸಿದರೆ ತೀರ್ಥಹಳ್ಳಿ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಕೆಸರೆಯಿಂದ ಬಾನುಗೋಡು, ಜಡ್ಡುಗದ್ದೆ, ಭಾರತೀಪುರ, ಯಡಗುಡ್ಡೆ, ಶಿರುಪತಿ, ತುಪ್ಪದಮನೆ ಸಂಪರ್ಕಕ್ಕೆ ಹೊಸ ರಸ್ತೆ ನಿರ್ಮಿಸಲಾಗುತ್ತಿದೆ. ₹8 ಕೋಟಿ ವೆಚ್ಚದಲ್ಲಿ ತೀರ್ಥಹಳ್ಳಿ ಬೈಪಾಸ್‌ ರಸ್ತೆ ನಿರ್ಮಾಣದ ಜವಾಬ್ದಾರಿಯನ್ನು ಲೋಕೋಪಯೋಗಿ ಇಲಾಖೆ ವಹಿಸಿದೆ. ತರಾತುರಿಯಲ್ಲಿ ರಸ್ತೆ ನಿರ್ಮಿಸುತ್ತಿರುವುದು ಗ್ರಾಮಸ್ಥರಲ್ಲಿ ಹಲವು ಅನುಮಾನ ಹುಟ್ಟು ಹಾಕುವಂತೆ ಮಾಡಿದೆ.

ಮಲೆನಾಡು ನಡುಗಿಸಿದ ಭೂ ಕುಸಿತ:

2019ರಲ್ಲಿ ಹೆಗಲತ್ತಿ ಗುಡ್ಡ ಕುಸಿತ ಭಾರಿ ಸದ್ದು ಮಾಡಿತ್ತು. ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಥಳ ವೀಕ್ಷಿಸಿದ್ದರು. ಮಾನವ ಜೀವಹಾನಿ ಸಂಭವಿಸದಿದ್ದರೂ, ಸಾಗುವಳಿ ಪ್ರದೇಶಗಳಿಗೆ ಭಾರಿ ಪ್ರಮಾಣದ ನಷ್ಟವಾಗಿತ್ತು. 2021ರಲ್ಲಿ ಹೆಗ್ಗಾರು ಗುಡ್ಡ ಕುಸಿದು ಹಳ್ಳದ ಹರಿವಿನ ದಿಕ್ಕು ಬದಲಾಗಿತ್ತು. 2023ರಲ್ಲಿ ಆಗುಂಬೆ ಘಾಟಿಯ 17ನೇ ತಿರುವು ಕುಸಿದು ಸಂಪೂರ್ಣ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಭಾರತೀಪುರ ರಸ್ತೆಯ ಧರೆ ಕುಸಿದು ಬದಲಿ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿತ್ತು. 2024ರಲ್ಲಿ ಬಾಳೇಬೈಲು ಸೇತುವೆ ಮಾರ್ಗ ಕುಸಿದು ಸಂಚಾರ ಸ್ಥಗಿತಗೊಂಡಿತ್ತು. ಭಾರತೀಪುರ ತಿರುವಿನಲ್ಲಿ 18 ಕಡೆಗಳಲ್ಲಿ ಗುಡ್ಡ ಜರುಗಿದೆ. 

ತೀರ್ಥಹಳ್ಳಿ ತಾಲ್ಲೂಕಿನ ಹೆಗಲತ್ತಿ ಗ್ರಾಮದಲ್ಲಿ 2019ರಲ್ಲಿ ಗುಡ್ಡ ಜರುಗಿರುವುದು
ಅವೈಜ್ಞಾನಿಕವಾಗಿ ಭಾರತೀಪುರ ಗುಡ್ಡವನ್ನು ಕಡಿಯಲಾಗಿದೆ. ಗುಡ್ಡ ಕುಸಿಯುವ ಆತಂಕದಿಂದಲೇ ಬಾನುಗೋಡಿನಲ್ಲಿ ಪರ್ಯಾಯ ಮಾರ್ಗ ಕೈಗೆತ್ತಿಕೊಳ್ಳಲಾಗಿದೆ. ಪ್ರಾಣ ಹಾನಿ ಸಂಭವಿಸಿದರೆ ಅಧಿಕಾರಿಗಳೇ ಹೊಣೆ
ಪೂರ್ಣೇಶ್‌ ಕೆಳಕೆರೆ ತಾಲ್ಲೂಕು ಪಂಚಾಯಿತಿ ಕೆಡಿಪಿ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.