ADVERTISEMENT

ಶಿವಮೊಗ್ಗ| ಮುಂದುವರಿದ ಉರುಳು; ಎರಡು ಚಿರತೆಗಳ ಸಾವು

ವೆಂಕಟೇಶ ಜಿ.ಎಚ್.
Published 9 ಡಿಸೆಂಬರ್ 2025, 5:04 IST
Last Updated 9 ಡಿಸೆಂಬರ್ 2025, 5:04 IST
ತಾಳಗುಂದದ ಅರಣ್ಯ ಪ್ರದೇಶದಲ್ಲಿ ಸಾವನ್ನಪ್ಪಿದ ಚಿರತೆ
ತಾಳಗುಂದದ ಅರಣ್ಯ ಪ್ರದೇಶದಲ್ಲಿ ಸಾವನ್ನಪ್ಪಿದ ಚಿರತೆ   

ಶಿವಮೊಗ್ಗ: ಇಲ್ಲಿನ ಶಿವಮೊಗ್ಗ ವನ್ಯಜೀವಿ ವೃತ್ತದಲ್ಲಿ ಕಳ್ಳಬೇಟೆಗಾರರು ಇಡುವ ಉರುಳಿಗೆ ಚಿರತೆ ಹಾಗೂ ಕರಡಿಗಳು ಬೀಳುವುದು ಮುಂದುವರೆದಿದ್ದು, ಉರುಳಿಗೆ ಸಿಲುಕಿ ಎರಡು ಚಿರತೆಗಳು ಜೀವಬಿಟ್ಟಿವೆ. ಕರಡಿಯೊಂದನ್ನು ರಕ್ಷಿಸಲಾಗಿದೆ. ನಿರಂತರವಾಗಿ ಕಾಡು ಪ್ರಾಣಿಗಳು ಉರುಳಿಗೆ ಸಿಲುಕಿ ಜೀವ ಕಳೆದುಕೊಳ್ಳುತ್ತಿದ್ದರೂ ಅರಣ್ಯ ಇಲಾಖೆ ಮೌನ ವಹಿಸಿದೆ ಎಂದು ವನ್ಯಜೀವಿ ಆಸಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭದ್ರಾವತಿ ವಲಯದ ಚನ್ನಗಿರಿ ಬಳಿಯ ಉಮ್ರಾಣಿ ಅರಣ್ಯ ಪ್ರದೇಶದಲ್ಲಿ ಕಳ್ಳಬೇಟೆಗಾರರ ಉರುಳಿಗೆ ಸಿಲುಕಿದ್ದ ಚಿರತೆ ಸೋಮವಾರ ಇಲ್ಲಿನ ತ್ಯಾವರೆಕೊಪ್ಪ ಹುಲಿ– ಸಿಂಹ ಧಾಮದಲ್ಲಿ ಸಾವನ್ನಪ್ಪಿದೆ. ಉರುಳಿಗೆ ಸಿಲುಕಿ ತೀವ್ರ ನಿತ್ರಾಣಗೊಂಡಿದ್ದ ಚಿರತೆಯನ್ನು ರಕ್ಷಿಸಿ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ತರಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಅದು ಸಾವನ್ನಪ್ಪಿದೆ. ಮೂರೂವರೆ ವರ್ಷದ ಈ ಚಿರತೆಯ ಸೊಂಟ ಹಾಗೂ ಕಾಲುಗಳಗೆ ಉರುಳು ಬಿಗಿದಿತ್ತು.

ಮತ್ತೊಂದು ಪ್ರಕರಣದಲ್ಲಿ ಶಿರಾಳಕೊಪ್ಪ ವಲಯದ ತಾಳಗುಂದದ ಬಳಿಯ ಅರಣ್ಯ ಪ್ರದೇಶದ ಬಳಿಯ ಖಾಸಗಿ ಜಮೀನಿನ ಅಂಚಿನಲ್ಲಿ ಹಾಕಿದ್ದ ಉರುಳಿಗೆ ಚಿರತೆಯೊಂದು ಸಿಲುಕಿ ಸಾವನ್ನಪ್ಪಿದೆ. ಚಿರತೆಯ ಕಳೇಬರ ಕೊಳೆತ ಸ್ಥಿತಿಯಲ್ಲಿ ಭಾನುವಾರ ಪತ್ತೆಯಾಗಿದೆ. ಎರಡು ದಿನಗಳ ಹಿಂದೆ ಅದು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಶಿರಾಳಕೊಪ್ಪ ಆರ್‌ಎಫ್‌ಒ ಜಾವೆದ್ ಪಾಶಾ ಅಂಗಡಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ADVERTISEMENT

ಕಳ್ಳಬೇಟೆ, ಪ್ರಾಣಿಗಳು ತಲ್ಲಣ:

ಕಳ್ಳಬೇಟೆಗಾರರು ಕಾಡುಹಂದಿ ಇಲ್ಲವೇ ಕಡವೆಗಳ ಬೇಟೆಗೆಂದು ಇಡುತ್ತಿರುವ ಉರುಳಿಗೆ ಶಿವಮೊಗ್ಗ ವನ್ಯಜೀವಿ ವೃತ್ತದಲ್ಲಿ ಕರಡಿ ಹಾಗೂ ಚಿರತೆಗಳು ತಲ್ಲಣಿಸಿವೆ. ಭದ್ರಾವತಿ ಹಾಗೂ ಶಿವಮೊಗ್ಗ ಉಪ ವಿಭಾಗದಲ್ಲಿ ಏಳು ತಿಂಗಳಲ್ಲಿ 11 ಕರಡಿಗಳು ಹಾಗೂ ನಾಲ್ಕು ಚಿರತೆಗಳು ಉರುಳಿಗೆ ಬಿದ್ದಿವೆ. ಅದರಲ್ಲಿ ಮೂರು ಕರಡಿ ಹಾಗೂ ಎರಡು ಚಿರತೆ ಸಾವನ್ನಪ್ಪಿವೆ. ಒಂದು ಕರಡಿ ಕಾಲು ಕಳೆದುಕೊಂಡಿದೆ.

‘ಕಳ್ಳಬೇಟೆಗಾರರು ಹೆಚ್ಚಾಗಿ ಖಾಸಗಿ ಜಮೀನುಗಳಲ್ಲಿ ಉರುಳು ಇಡುತ್ತಿದ್ದಾರೆ. ಹೊಲದ ಮಾಲೀಕರು ಮಾತ್ರ ತಮಗೆ ಸಂಬಂಧವಿಲ್ಲ ಎಂದು ಹೇಳುತ್ತಿದ್ದಾರೆ. ಹೊಲದ ಮಾಲೀಕರನ್ನು ಹೊಣೆಯಾಗಿಸಲು ಮುಂದಾದರೆ ರಾಜಕೀಯ ಒತ್ತಡ ಎದುರಾಗುತ್ತಿದೆ’ ಎಂದು ಅಸಹಾಯಕತೆ ವ್ಯಕ್ತಪಡಿಸುವ ಅರಣ್ಯ ಸಿಬ್ಬಂದಿಯೊಬ್ಬರು, ‘ಕಳ್ಳಬೇಟೆಗಾರರ ಬಂಧನಕ್ಕೆ ಹಾಗೂ ಉರುಳಿನ ಪತ್ತೆಗೆ ಅರಣ್ಯ ಪ್ರದೇಶದಲ್ಲಿ ಕೂಂಬಿಂಗ್ ಕೈಗೊಂಡಿದ್ದೇವೆ’ ಎನ್ನುತ್ತಾರೆ.

‘ಕೆಲವು ವರ್ಷಗಳಿಂದ ಶಿವಮೊಗ್ಗ ವನ್ಯಜೀವಿ ವೃತ್ತದಲ್ಲಿ ಕಳ್ಳಬೇಟೆ ಹಾವಳಿ ಕಡಿಮೆಯಾಗಿತ್ತು. ಈಗ ಮತ್ತೆ ಹೆಚ್ಚಾಗುತ್ತಿದೆ. ಅದರ ಫಲ ಚಿರತೆ ಕರಡಿಗಳು ಅನುಭವಿಸುತ್ತಿವೆ. ಅರಣ್ಯಾಧಿಕಾರಿಗಳುಯಾರ ಜಮೀನಿನಲ್ಲಿ ಉರುಳು ಇರುತ್ತದೆಯೇ ಅವರನ್ನೇ ಹೊಣೆಯಾಗಿಸಿ ಎಫ್‌ಐಆರ್‌ ದಾಖಲಿಸಿ ಕ್ರಮ ಕೈಗೊಳ್ಳಲಿ. ಒತ್ತಡಕ್ಕೆ ಮಣಿದರೆ ವನ್ಯಜೀವಿಗಳ ಸಾವು ಹೀಗೆಯೇ ಮುಂದುವರೆಯಲಿದೆ. ಈಗ ಬೇಟೆ ನಿರೋಧಕ ಶಿಬಿರಗಳು (ಕ್ಯಾಂಪ್‌) ನಿಷ್ಕ್ರಿಯವಾಗಿವೆ. ಹೀಗಾಗಿ ಉರುಳು ಹಾಕುವ ಕೆಲಸ ಸುಗಮವಾಗಿ ನಡೆಯುತ್ತಿದೆ’ ಎಂದು ವನ್ಯಜೀವಿ ಪರ ಹೋರಾಟಗಾರ ಪರಮೇಶ್ವರಯ್ಯ ಚಿಟಗುಪ್ಪೆ ಬೇಸರ ವ್ಯಕ್ತಪಡಿಸುತ್ತಾರೆ.

ಉರುಳು ಹಾಕಿದರೆ ಕೊಡುವ ಶಿಕ್ಷೆಯ ತೀವ್ರತೆಯ ಬಗ್ಗೆ ಕಾಡಂಚಿನ ಗ್ರಾಮಗಳಲ್ಲಿ ಜಾಗೃತಿ ಮೂಡಿಸಲು ಹಾಗೂ ಕೂಂಬಿಂಗ್ ನಡೆಸಲು ಸೋಮವಾರ ಸಭೆ ನಡೆಸಿ ಅರಣ್ಯಾಧಿಕಾರಿಗಳಿಗೆ ಸೂಚನೆ ಕೊಟ್ಟಿರುವೆ.
ಕೆ.ಟಿ.ಹನುಮಂತಪ್ಪ ಸಿಸಿಎಫ್ ಶಿವಮೊಗ್ಗ
ಬಹಳಷ್ಟು ಕಡೆ ಆನೆ ನಿರೋಧಕ ಕಂದಕ (ಇಪಿಟಿ)ಗಳಲ್ಲಿ ಉರುಳು ಹಾಕಲಾಗುತ್ತಿದೆ. ಅಲ್ಲಿ ಹುಲ್ಲು ಬೆಳೆಯುವುದರಿಂದ ಗೊತ್ತಾಗದೇ ಪ್ರಾಣಿಗಳು ಬಂದು ಬೀಳುತ್ತಿವೆ. ಹೀಗಾಗಿ ಅಲ್ಲಿಯೂ ಕೂಂಬಿಂಗ್‌ ಮಾಡುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ.
ರವೀಂದ್ರಕುಮಾರ್ ಡಿಸಿಎಫ್ ಭದ್ರಾವತಿ ವಿಭಾಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.