
ಕೋಣಂದೂರು: ಬಿಸಿಲಿನ ಬೇಗೆ ಹೆಚ್ಚುತ್ತಿರುವುದರಿಂದ ತೋಟಗಳಲ್ಲಿ ಅಡಿಕೆ ಗಿಡಗಳನ್ನು ರಕ್ಷಿಸಿಕೊಳ್ಳುವ ಸಲುವಾಗಿ ಅವುಗಳ ಬೊಡ್ಡೆಗಳಿಗೆ ಸುಣ್ಣ ಬಳಿಯುವ ಕಾರ್ಯ ಮಲೆನಾಡು ಭಾಗದಲ್ಲಿ ಭರದಿಂದ ನಡೆಯುತ್ತಿದೆ.
ಈ ಬಾರಿ ಅಧಿಕ ಮಳೆಯಾದ ಪರಿಣಾಮ ತಾಪಮಾನವೂ ಏರಿಕೆಯಾಗುತ್ತಿದೆ. ಅತಿಯಾದ ಮಳೆಯಿಂದ ಕೊಳೆ ರೋಗಕ್ಕೆ ತುತ್ತಾಗಿದ್ದ ಅಡಿಕೆ ಈಗ ತಾಪಮಾನದ ಹೊಡೆತಕ್ಕೆ ಸಿಲುಕಿದೆ. ಒಣಗಿ ಬಿದ್ದಿರುವ ಸೋಗೆ, ಕುರುಚಲು ಗಿಡಗಳನ್ನು ಸೇರಿಸಿ ಅಡಿಕೆ ಗಿಡಗಳಿಗೆ ನೆರಳು ಮಾಡಲಾಗುತ್ತಿದ್ದು, ಈ ವಿಧಾನದಿಂದ ಸಣ್ಣ ಗಿಡಗಳಿಗೆ ಸ್ವಲ್ಪ ಮಟ್ಟಿಗಿನ ತಾಪ ಕಡಿಮೆಯಾಗುತ್ತದೆ. 3ರಿಂದ 4 ವರ್ಷದ ಗಿಡಗಳಿಗೆ ಸುಣ್ಣ ಬಳಿಯುವುದರಿಂದ ಬಿಸಿಲಿನಿಂದ ರಕ್ಷಿಸಬಹುದು ಎನ್ನುವುದು ವೈಜ್ಞಾನಿಕವಾಗಿ ಕಂಡುಕೊಂಡಿರುವ ಮಾರ್ಗ.
ಬಿಳಿ ಬಣ್ಣಕ್ಕೆ ಸೂರ್ಯನ ಶಾಖವನ್ನು ಪ್ರತಿಫಲಿಸುವ ಗುಣವಿದೆ. ಹಾಗಾಗಿ ಬಿಸಿಲಿನ ಭರಾಟೆಯಿಂದ ಅಡಿಕೆ ಗಿಡಗಳನ್ನು ರಕ್ಷಿಸಲು ಸುಣ್ಣ ಬಳಿಯಲಾಗುತ್ತಿದೆ. ಸುಣ್ಣವನ್ನು ಒಂದು ದಿನ ಮೊದಲೇ ನೀರಲ್ಲಿ ನೆನೆಸಿಟ್ಟು, ಮಾರನೇ ದಿನ ಮೈದಾ ಹಿಟ್ಟು, ಬೆಲ್ಲ, ಅಂಟು ಮಿಶ್ರಣದ ದ್ರಾವಣವನ್ನು ಸಿದ್ಧಪಡಿಸಿ ಗಿಡಗಳಿಗೆ ಬಳಿಯಲಾಗುತ್ತದೆ. ಬಳಿಯುವಾಗ ಸುಣ್ಣವು ಕೈಗೆ ಹಾಗೂ ಕಣ್ಣುಗಳಿಗೆ ತಾಗದಂತೆ ಎಚ್ಚರ ವಹಿಸಲಾಗುತ್ತಿದೆ ಎಂದು ರೈತರು ಹೇಳುತ್ತಿದ್ದಾರೆ.
ಸುಣ್ಣ ಬಳಿಯುವುದರಿಂದ ಗಿಡಗಳ ಆಯುಷ್ಯ ಹಾಗೂ ಇಳುವರಿ ಹೆಚ್ಚುತ್ತದೆ. ಕ್ಯಾಲ್ಸಿಯಂ ಪೋಷಕಾಂಶವೂ ದೊರೆಯುವುದರಿಂದ ಕಾಂಡಗಳನ್ನು ರಕ್ಷಿಸಿಕೊಳ್ಳಬಹುದು. ಎಲೆ ಚುಕ್ಕಿ ರೋಗದಿಂದ ಅಡಿಕೆಯ ಇಳುವರಿ ಕುಂಠಿತಗೊಳ್ಳುತ್ತಿದ್ದು, ಬಿಸಿಲಿನ ಪ್ರಖರತೆಯಿಂದಲೂ ಅಡಿಕೆ ಗಿಡಗಳನ್ನು ರಕ್ಷಿಸಿಕೊಳ್ಳುವುದು ಸವಾಲಿನ ಕೆಲಸವಾಗಿದೆ ಎನ್ನುತ್ತಾರೆ ಹೊಸಕೊಪ್ಪದ ಯುವ ರೈತ ಉಮೇಶ್.
ಅಡಿಕೆ ಗಿಡಗಳಿಗೆ ಬಾಧಿಸುತ್ತಿರುವ ಎಲೆಚುಕ್ಕಿ, ಚಂಡೆ ಮೊದಲಾದ ಕಾಯಿಲೆಗಳಿಗೆ ಶಾಶ್ವತ ಪರಿಹಾರ ಸಿಗಬೇಕು. ಆ ಮೂಲಕ ಮಲೆನಾಡಿನ ಆದಾಯದ ಮೂಲವಾದ ಅಡಿಕೆ ಬೆಳೆಯನ್ನು ರಕ್ಷಿಸಲು ಇಲಾಖೆ ಮತ್ತು ಸರ್ಕಾರಗಳು ಮುಂದಾಗಬೇಕಿದೆ ಎಂದು ಒತ್ತಾಯಿಸಿದ್ದಾರೆ ಅಡಿಕೆ ಬೆಳೆಗಾರರು.
ಅಡಿಕೆ ಗಿಡಗಳಿಗೆ ಕನಿಷ್ಠ 5 ವರ್ಷ ನೆರಳಿನ ಅವಶ್ಯಕತೆ ಇರುತ್ತದೆ. ಬಿಸಿಲಿನ ಪ್ರಖರತೆ ತಡೆಯಲು ಅಡಿಕೆ ಗಿಡಗಳಿಗೆ ಸುಣ್ಣ ಬಳಿಯುವುದು ವೈಜ್ಞಾನಿಕವಾದ ಪರಿಹಾರಲಕ್ಷ್ಮೀಕಾಂತ್ ಸಹಾಯಕ ತೋಟಗಾರಿಕಾ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.