ADVERTISEMENT

ಸಾಗರ: ಸಾಹಿತ್ಯ ಭಾಷೆ ನಲುಗುತ್ತಿದೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 7:53 IST
Last Updated 31 ಡಿಸೆಂಬರ್ 2025, 7:53 IST
ಸಾಗರದಲ್ಲಿ ಸೋಮವಾರ ನಡೆದ ‘ನನ್ನ ಮೆಚ್ಚಿನ ಪುಸ್ತಕ ಹಾಗೂ ಉಪನ್ಯಾಸ’ ಕಾರ್ಯಕ್ರಮ ನಡೆಯಿತು
ಸಾಗರದಲ್ಲಿ ಸೋಮವಾರ ನಡೆದ ‘ನನ್ನ ಮೆಚ್ಚಿನ ಪುಸ್ತಕ ಹಾಗೂ ಉಪನ್ಯಾಸ’ ಕಾರ್ಯಕ್ರಮ ನಡೆಯಿತು   

ಸಾಗರ: ಜನರ ಮಾತುಗಳ ಮೇಲೆ ನಿಯಂತ್ರಣ ಹೇರುವ ಸ್ಥಿತಿ ಇರುವುದರಿಂದ ಸಾಹಿತ್ಯದಲ್ಲಿ ಭಾಷೆಯ ಬಳಕೆಯ ಕುರಿತು ಎಚ್ಚರ ವಹಿಸಲಾಗುತ್ತಿದ್ದು, ಈ ಕಾರಣದಿಂದ ಸಾಹಿತ್ಯ ಭಾಷೆ ನಲುಗುತ್ತಿದೆ ಎಂದು ಲೇಖಕ ಜಿ.ಎಸ್. ಭಟ್ ಅಭಿಪ್ರಾಯಪಟ್ಟರು.

ಇಲ್ಲಿನ ಪವಿತ್ರ ಸಭಾಂಗಣದಲ್ಲಿ ಪರಸ್ಪರ ಸಾಹಿತ್ಯ ವೇದಿಕೆ, ಕನ್ನಡ ಪುಸ್ತಕ ಪ್ರಾಧಿಕಾರ, ಸರ್ಕಾರಿ ಪದವಿಪೂರ್ವ ಕಾಲೇಜು ಸೋಮವಾರ ಏರ್ಪಡಿಸಿದ್ದ ‘ನನ್ನ ಮೆಚ್ಚಿನ ಪುಸ್ತಕ ಹಾಗೂ ಉಪನ್ಯಾಸ’ ಕಾರ್ಯಕ್ರಮದಲ್ಲಿ ‘ಸಾಹಿತ್ಯದ ಭಾಷೆ’ ಕುರಿತು ಮಾತನಾಡಿದರು.

ಸಾಹಿತ್ಯದ ಭಾಷೆಯ ಮೇಲೆ ಕೂಡ ಪ್ರಭುತ್ವ ಪರೋಕ್ಷವಾಗಿ ನಿಯಂತ್ರಣ ಹೇರುವ ಪ್ರವೃತ್ತಿ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದರಿಂದ ಲೇಖಕ ತನ್ನ ಅಭಿವ್ಯಕ್ತಿಯನ್ನು ಸಮರ್ಥವಾಗಿ ನಿರೂಪಿಸಲು ಸಾಧ್ಯವಾಗದು ಎಂದರು.

ADVERTISEMENT

ಆಡು ಭಾಷೆ ಕೂಡ ಹೇಗೆ ಸಾಹಿತ್ಯದ ಭಾಷೆಯಾಗಿ ಪರಿವರ್ತನೆಯಾಗಲು ಸಾಧ್ಯ ಎಂಬ ವಿಸ್ಮಯವನ್ನು ವಿದ್ಯಾರ್ಥಿಗಳು ಸೂಕ್ಷ್ಮವಾಗಿ ಗ್ರಹಿಸಬೇಕು. ಭಾಷಾ ಪ್ರಯೋಗದಲ್ಲಿ ಸಹಜತೆಯನ್ನು ಕಾಪಾಡಿಕೊಳ್ಳುವ ಸವಾಲುಗಳನ್ನು ಕನ್ನಡದ ಲೇಖಕರು ಯಾವ ರೀತಿ ಎದುರಿಸಿದ್ದಾರೆ ಎಂಬುದನ್ನು ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಸೆಮಿಸ್ಟರ್ ಪದ್ದತಿಯ ಶಿಕ್ಷಣ ಕ್ರಮ ಜಾರಿಗೆ ಬಂದ ನಂತರ ವಿದ್ಯಾರ್ಥಿಗಳಲ್ಲಿನ ಸೃಜನಶೀಲತೆಯ ಅಭಿವ್ಯಕ್ತಿಗೆ ತೊಡಕಾಗುತ್ತಿದೆ. ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಈ ಹಿಂದಿನಂತೆ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಲು ಯಾಕೆ ಸಾಧ್ಯವಾಗುತ್ತಿಲ್ಲ ಎಂಬುದನ್ನು ಶಿಕ್ಷಣ ತಜ್ಞರು ಗುರುತಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಲೇಖಕ ಲಕ್ಷ್ಮಣ ಕೊಡಸೆ ಎಂದರು.

ಪರಸ್ಪರ ಸಾಹಿತ್ಯ ವೇದಿಕೆ ಅಧ್ಯಕ್ಷ ಸರ್ಫ್ರಾಜ್ ಚಂದ್ರಗುತ್ತಿ ಅಧ್ಯಕ್ಷತೆ ವಹಿಸಿದ್ದರು. ಕುವೆಂಪು ಅವರ ಬೆರಳ್ಗೆ ಕೊರಳ್ ಕುರಿತು ಯಶವಂತ ಕೆ. , ಯು.ಆರ್.ಅನಂತಮೂರ್ತಿ ಅವರ ಸಂಸ್ಕಾರ ಕುರಿತು ಕವನ ಎಸ್. ನಾ.ಡಿಸೋಜ ಅವರ ಕುಂಜಾಲು ಕಣಿವೆಯ ಕೆಂಪು ಹೂ ಕುರಿತು ಕವನ ಮಾತನಾಡಿದರು.

ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸತ್ಯನಾರಾಯಣ ಕೆ.ಸಿ. ಕನ್ನಡದಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ವಿತರಿಸಿದರು. ಕೆ.ಎಸ್.ದೇವೇಂದ್ರ ಸ್ವಾಗತಿಸಿದರು. ಹರೀಶ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.