ADVERTISEMENT

ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡಿಕೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2019, 12:18 IST
Last Updated 6 ಮಾರ್ಚ್ 2019, 12:18 IST

ಶಿವಮೊಗ್ಗ:ಅವಧಿ ಮುಗಿಯುತ್ತಿರುವ ರಾಜ್ಯದ 101 ನಗರ–ಪಟ್ಟಣಗಳ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಲೋಕಸಭಾ ಚುನಾವಣೆ ಕಾರಣಕ್ಕೆ ಜೂನ್‌ಗೆ ಮುಂದೂಡುವ ಸಾಧ್ಯತೆ ಇದೆ.

ರಾಜ್ಯದ 6 ಮಹಾನಗರ ಪಾಲಿಕೆ, 28 ನಗರ ಸಭೆ, 41 ಪುರಸಭೆ, 26 ಪಟ್ಟಣ ಪಂಚಾಯಿತಿಗಳ ಅವಧಿ ಮೇ ಒಳಗೆ ಪೂರ್ಣಗೊಳ್ಳಲಿವೆ.ಅವಧಿ ಪೂರ್ಣಗೊಳ್ಳುವ ಮೊದಲು ಚುನಾವಣೆ ನಡೆಸಿ, ಹೊಸ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣಾ ಆಯೋಗ ಡಿಸೆಂಬರ್‌ನಲ್ಲೇ ಚುನಾವಣಾ ಸಿದ್ಧತೆ ಆರಂಭಿಸಿತ್ತು.

ವಾರ್ಡ್‌ಗಳ ಪುನರ್‌ವಿಂಗಡಣಾ ಪ್ರಕ್ರಿಯೆ ಮುಗಿದು, ವಾರ್ಡ್‌ವಾರು ಮೀಸಲಾತಿ ಪಟ್ಟಿಯನ್ನೂ ಪ್ರಕಟಿಸಲಾಗಿತ್ತು. ಚುನಾವಣೆಗೆ ಪೂರ್ವಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಡಳಿತಗಳಿಗೂ ಸೂಚಿಸಿತ್ತು. ಮಾರ್ಚ್‌ ಅಂತ್ಯದ ಒಳಗೆ ಅಥವಾ ಏಪ್ರಿಲ್‌ ಮೊದಲ ವಾರ ಚುನಾವಣೆ ನಡೆಸಲು ಆಲೋಚಿಸಿತ್ತು.

ADVERTISEMENT

ವಾರ್ಡ್ ಮೀಸಲಾತಿ ವಿರುದ್ಧ ಕೆಲವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಇದರಿಂದ ಚುನಾವಣಾ ದಿನಾಂಕನಿಗದಿ ವಿಳಂಬವಾಗಿತ್ತು. ಈಗ ಲೋಕಸಭಾ ಚುನಾವಣೆ ಪ್ರಕ್ರಿಯೆ ಆರಂಭವಾಗಿರುವ ಪರಿಣಾಮ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡಲು ಆಯೋಗ ನಿರ್ಧರಿಸಿದೆ.

ಅಧಿಕಾರವಧಿ ಪೂರ್ಣಗೊಂಡ ಸಂಸ್ಥೆಗಳಿಗೆ ತಕ್ಷಣ ಆಡಳಿತಾಧಿಕಾರಿಗಳನ್ನು ನೇಮಿಸಲು ಸರ್ಕಾರಕ್ಕೆ ಸೂಚನೆ ನೀಡಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 9 ಸ್ಥಳೀಯ ಸಂಸ್ಥೆಗಳಿವೆ. ಭದ್ರಾವತಿ, ಸಾಗರ ನಗರಸಭೆ, ಶಿಕಾರಿಪುರ ಪುರಸಭೆ, ತೀರ್ಥಹಳ್ಳಿ, ಹೊಸನಗರ, ಸೊರಬ, ಶಿರಾಳಕೊಪ್ಪ ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆಯಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.