ADVERTISEMENT

ಲಾಕ್‌ಡೌನ್: ಮರಳಿ ಹಳ್ಳಿಗಳತ್ತ ಪಯಣ

ಅಗತ್ಯ ಸಾಮಗ್ರಿ ಖರೀದಿಸಲು ಅಂಗಡಿಗಳ ಮುಂದೆ ಸರದಿ ಸಾಲು

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2021, 5:19 IST
Last Updated 28 ಏಪ್ರಿಲ್ 2021, 5:19 IST
ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣಕ್ಕೆ ಬೆಂಗಳೂರಿನಿಂದ ಬಂದ ಜನರು
ಶಿವಮೊಗ್ಗ ಖಾಸಗಿ ಬಸ್ ನಿಲ್ದಾಣಕ್ಕೆ ಬೆಂಗಳೂರಿನಿಂದ ಬಂದ ಜನರು   

ಶಿವಮೊಗ್ಗ: ರಾಜ್ಯದಾದ್ಯಂತ ಮಂಗಳವಾರ ರಾತ್ರಿಯಿಂದಲೇ ಲಾಕ್‌ಡೌನ್ ಆರಂಭದ ಪರಿಣಾಮ ಬೆಂಗಳೂರು ಸೇರಿದಂತೆ ವಿವಿಧೆಡೆ ಇದ್ದ ಜನರು ಮರಳಿ ಹಳ್ಳಿಗಳತ್ತ ಸಾಗಿದರು. ಭಾರಿ ಸಂಖ್ಯೆಯ ಜನರು ಜಿಲ್ಲೆಗೂ ಹರಿದು ಬಂದರು.

ಬೆಳಿಗ್ಗೆಯಿಂದ ಎಲ್ಲ ರಸ್ತೆಗಳಲ್ಲೂ ವಾಹನಗಳ ದಟ್ಟಣೆ ಕಂಡುಬಂತು. ಅದರಲ್ಲೂ ಬೆಂಗಳೂರಿನಿಂದ ಅಧಿಕ ಸಂಖ್ಯೆಯ ವಾಹನಗಳು ಜಿಲ್ಲೆಯತ್ತ ಬಂದವು. ಭದ್ರಾವತಿ ಮಾರ್ಗದಲ್ಲಿ ಕಾರುಗಳು ಇರುವೆಗಳ ಸಾಲಿನಂತೆ ಕಂಡುಬಂದವು. ಕೆಎಸ್‍ಆರ್‌ಟಿಸಿ, ಖಾಸಗಿ ಬಸ್‌ಗಳಲ್ಲೂ ಪ್ರಯಾಣಿಕರ ದಟ್ಟಣೆ ಕಂಡುಬಂತು.

ಖರೀದಿ ಜೋರು: ಕೊರೊನಾ ಸೋಂಕು ವೇಗವಾಗಿ ಹರಡುವುದನ್ನು ತಡೆಯಲು ಏ.27ರಿಂದ ಮೇ 12ರವರೆಗೆ ಸರ್ಕಾರ ಲಾಕ್‌ಡೌನ್‌ ಘೋಷಿಸಿದೆ. 14 ದಿನಗಳ ಈ ಅವಧಿಯನ್ನು ಮನೆಯಲ್ಲೇ ಕಳೆಯಬೇಕಿದೆ. ಮಂಗಳವಾರ ಅಗತ್ಯ ವಸ್ತುಗಳ ಖರೀದಿಗೆ ಒಮ್ಮೆಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರು. ಎಲ್ಲೆಡೆ ಖರೀದಿ ಭರಾಟೆ ಜೋರಾಗಿತ್ತು.

ADVERTISEMENT

ದರ ಏರಿಕೆ ಆತಂಕ:ಲಾಕ್‌ಡೌನ್‌ ಅವಧಿಯಲ್ಲಿ ನಿತ್ಯ ಬೆಳಿಗ್ಗೆ 6ರಿಂದ 10ರವರೆಗೆ ಅಗತ್ಯ ವಸ್ತು, ತರಕಾರಿ ಮತ್ತು ಹಣ್ಣು ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಮಾರುಕಟ್ಟೆಗೆ ಧಾವಿಸಿದ ಗ್ರಾಹಕರಿಗೆ ದರ ಏರಿಕೆಯ ಆತಂಕ ಮನೆ ಮಾಡಿತ್ತು. ಈ ಕುರಿತು ಹಲವರು ಅಸಮಾಧಾನ ಹೊರಹಾಕಿದರು.

ಮಂಗಳವಾರ ಬೆಳಿಗ್ಗೆಯಿಂದಲೇ ದಿನಸಿ ಅಂಗಡಿಯ ಎದುರು ಜನದಟ್ಟಣೆ ಕಂಡುಬಂದಿತು. ಖರೀದಿಗೆ ಮುಗಿಬಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ದಿನಸಿ ಸಾಮಗ್ರಿಯ ದೊಡ್ಡ ಪಟ್ಟಿ ಹಿಡಿದು ಬಂದಿದ್ದ ಗ್ರಾಹಕರು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದರು. ಬಹುತೇಕ ಅಂಗಡಿಗಳ ಮುಂದೆ ಸರತಿ ಸಾಲು ಕಂಡುಬಂತು.

ಮದ್ಯ ಖರೀದಿ ಭರಾಟೆ: ಲಾಕ್‌ಡೌನ್ ಅವಧಿಯಲ್ಲಿ ಬೆಳಿಗ್ಗೆ 6ರಿಂದ 10ರವರೆಗೆ ಮದ್ಯ ಮಾರಾಟಕ್ಕೆ ಸರ್ಕಾರ ಅವಕಾಶ ನೀಡಿದ್ದರೂ ಜನರು ಮಂಗಳವಾರ ಅಧಿಕ ಪ್ರಮಾಣದಲ್ಲಿ ಮದ್ಯ ಖರೀದಿಸಿದರು.

‘ಗ್ರಾಮಕ್ಕೆ ಹೋದರೆ ಮತ್ತೆ ಲಾಕ್‌ಡೌನ್‌ ಮಗಿದ ಮೇಲೆ ಮರಳುತ್ತೇವೆ. ಅಲ್ಲಿ ಮದ್ಯ ಸಿಗುವುದಿಲ್ಲ. ಅಲ್ಲದೆ ಬೆಳಿಗ್ಗೆ 10ರ ಒಳಗೆ ಬಂದು ಮರಳಲೂ ಆಗದು. ಅದಕ್ಕಾಗಿ 15 ದಿನಗಳಿಗೆ ಅಗತ್ಯ ಇರುವಷ್ಟು ಖರೀದಿಸಿದ್ದೇವೆ’ ಎಂದು ಖರೀದಿಯ ರಹಸ್ಯ ಬಿಚ್ಚಿಟ್ಟರು ಸಿದ್ದಾಪುರದ ರಾಮಣ್ಣ.

ಅಲ್ಲದೆ ಒಮ್ಮೆಗೆ ಜನರು ಹೆಚ್ಚಿನ ಪ್ರಮಾಣದಲ್ಲಿ ಮದ್ಯ ಖರೀದಿಸಿದ ಕಾರಣ ಬಹುತೇಕ ಅಂಗಡಿಗಳಲ್ಲಿ ‘ನೋ ಸ್ಟಾಕ್‌’ ಫಲಕ ಅಳವಡಿಸಲಾಗಿತ್ತು. ಬೆಳಿಗ್ಗೆ 6ಕ್ಕೆ ಮತ್ತೆ ಬಾಗಿಲು ತೆಗೆಯುವ ಕಾರಣ ಅಷ್ಟರೊಳಗೆ ದಾಸ್ತಾನು ತರುವುದು ಕಷ್ಟ ಎಂದು ಮದ್ಯ ಮಾರಾಟಗಾರರೊಬ್ಬರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.