ADVERTISEMENT

ತುಮರಿ: ಹೋರಾಟಕ್ಕೆ ಲೋಹಿಯಾ ಸ್ಫೂರ್ತಿ

ಪಾದಯಾತ್ರೆ ಪೂರ್ವಭಾವಿ ಸಭೆಯಲ್ಲಿ ಕಾಗೋಡು ತಿಮ್ಮಪ್ಪ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2023, 6:14 IST
Last Updated 13 ಫೆಬ್ರುವರಿ 2023, 6:14 IST
ಶರಾವತಿ ಎಡದಂಡೆಯ ಹೊಸಕೊಪ್ಪ ಸಭಾಂಗಣದಲ್ಲಿ ಕಾಂಗ್ರೆಸ್ ಸ್ಥಳೀಯ ಘಟಕ ಆಯೋಜಿಸಿದ್ದ ಆಂಬಾರಗುಡ್ಡ ಪಾದಯಾತ್ರೆ ಪೂರ್ವಭಾವಿ ಸಭೆಯಲ್ಲಿ ಕಾಗೋಡು ತಿಮ್ಮಪ್ಪ ಮಾತನಾಡಿದರು
ಶರಾವತಿ ಎಡದಂಡೆಯ ಹೊಸಕೊಪ್ಪ ಸಭಾಂಗಣದಲ್ಲಿ ಕಾಂಗ್ರೆಸ್ ಸ್ಥಳೀಯ ಘಟಕ ಆಯೋಜಿಸಿದ್ದ ಆಂಬಾರಗುಡ್ಡ ಪಾದಯಾತ್ರೆ ಪೂರ್ವಭಾವಿ ಸಭೆಯಲ್ಲಿ ಕಾಗೋಡು ತಿಮ್ಮಪ್ಪ ಮಾತನಾಡಿದರು   

ತುಮರಿ: ‘ರಾಜಕೀಯ ಎನ್ನುವುದು ಜನರ ಹೋರಾಟದ ಭಾಗವಾಗಬೇಕೇ ಹೊರತು ವ್ಯಾವಹಾರಿಕ ಆಗಕೂಡದು. ಭೂಮಿ ಹೋರಾಟದ ಹೊತ್ತಿನಲ್ಲಿ ಲೋಹಿಯಾ ನಮಗೆ ಇದನ್ನೇ ಪಾಠವಾಗಿ ಭೋದನೆ ಮಾಡಿದರು. ಅದನ್ನೇ ಇಂದಿಗೂ ಜಾರಿಯಲ್ಲಿ ಇಟ್ಟಿದ್ದೇವೆ’ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ಶರಾವತಿ ಎಡದಂಡೆಯ ಹೊಸಕೊಪ್ಪ ಸಭಾಂಗಣದಲ್ಲಿ ಕಾಂಗ್ರೆಸ್ ಸ್ಥಳೀಯ ಘಟಕ ಆಯೋಜಿಸಿದ್ದ ಆಂಬಾರಗುಡ್ಡ ಪಾದಯಾತ್ರೆ ಪೂರ್ವಭಾವಿ ಸಭೆಯಲ್ಲಿ ಕರಪತ್ರ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ತಲೆ ತಲಾಂತರದಿಂದ ವಾಸಿಸುತ್ತಿರುವ ಸ್ಥಳೀಯ ಜನರ ಗಮನಕ್ಕೆ ತಾರದೇ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾವಣೆ ಮಾಡಿ ಜನರು ಸಂಕಷ್ಟಕ್ಕೆ ಒಳಗಾಗುವಂತೆ ಮಾಡಿರುವುದೇ ಶಾಸಕ ಹರತಾಳು ಹಾಲಪ್ಪ ಅವರ ಸಾಧನೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಜನಪ್ರತಿನಿಧಿಗಳು ಜನರ ನೋವಿಗೆ ಧ್ವನಿ ಆಗಬೇಕು. ಅಂಬಾರಗುಡ್ಡ ವಿಚಾರದಲ್ಲಿ ಜನವಸತಿ ಪ್ರದೇಶಗಳನ್ನು ಸೇರಿಸಿ ಕಂದಾಯ ಭೂಮಿಯನ್ನು ಜೀವ ವೈವಿಧ್ಯ ವಲಯ ಭಾಗವಾಗಿ ಅರಣ್ಯ ಇಲಾಖೆಗೆ ಹಕ್ಕು ಬದಲಾವಣೆ ಮಾಡಲಾಗಿದೆ. ಸರ್ಕಾರದ ಮೇಲೆ ಒತ್ತಡ ತರಬೇಕಾದ ಶಾಸಕರು ಮೌನವಾಗಿದ್ದಾರೆ’ ಎಂದು
ದೂರಿದರು.

ಅಂಬಾರಗುಡ್ಡ ವಿಚಾರದಲ್ಲಿ ಸರ್ಕಾರ ತೆಗೆದುಕೊಂಡ ತೀರ್ಮಾನದ ವಿರುದ್ಧ ಜನತಾ ಹೋರಾಟ ಸಂಘಟಿಸಿ ಉತ್ತರ ನೀಡಬೇಕಾಗಿದ್ದು, ಜನರು ಸ್ವಪ್ರೇರಣೆಯಿಂದ ಫೆ. 16ರ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

‘ಅಂಬಾರಗುಡ್ಡ ತಪ್ಪಲಿನಲ್ಲಿ ಇರುವ 3,750 ಎಕರೆ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾವಣೆ ಮಾಡುವ ಮುನ್ನ ನಿಯಮಾವಳಿಗಳನ್ನು ಪಾಲನೆ ಮಾಡದೇ ಸ್ಥಳೀಯ ನಿವಾಸಿಗಳನ್ನು ವಂಚಿಸಲಾಗಿದೆ’ ಎಂದು ಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್. ಜಯಂತ್ ಆರೋಪಿಸಿದರು.

ಪ್ರಜಾಸತಾತ್ಮಕವಾಗಿ ಆಯ್ಕೆಯಾದ ಸರ್ಕಾರ ಈ ರೀತಿ ಜನ ವಿರೋಧಿ ನಿಲುವು ತಾಳಿದೆ. ಹದಿನೈದು ವರ್ಷಗಳ ಹಿಂದೆ ಅಂಬಾರಗುಡ್ಡ ಗಣಿಗಾರಿಕೆ ಆರಂಭ ಆದಾಗ ಸರ್ಕಾರ ಸುಮ್ಮನೆ ಇತ್ತು. ಆದರೆ, ಜನ ಹೋರಾಟ ಮಾಡಿ ಗುಡ್ಡ ಉಳಿಸಿಕೊಂಡರು. ಈಗ ಅದೇ ಜನರನ್ನು ಸರ್ಕಾರ ಅನಾಥ ಮಾಡುತ್ತಿದೆ ಎಂದು ಆರೋಪಿಸಿದರು.

ವೇದಿಕೆಯಲ್ಲಿ ನಾಗರಾಜ್ ಗೌಡ, ಹರೀಶ್ ಗಂಟೆ, ಓಂಕಾರ ಜೈನ್, ರವಿ ಅಳೂರು, ಗಣೇಶ್ ಜಾಕಿ, ವಿಜಯ ಅಡಗಳಲೆ, ಸತ್ಯನಾರಾಯಣ ಜಿ.ಟಿ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.