ಶಿವಮೊಗ್ಗ: ಕುರ್ಚಿ ಎರಡು, ಅಧಿಕಾರಿಗಳು ಮೂವರು! ಇದು ಶಿವಮೊಗ್ಗದ ಉಪನೋಂದಣಾಧಿಕಾರಿ ಕಚೇರಿಗೆ ಗುರುವಾರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದಾಗ ಕಂಡುಬಂದ ಅಚ್ಚರಿಯ ಸಂಗತಿ.
ಶಿವಮೊಗ್ಗದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಎರಡು ಹಿರಿಯ ಉಪನೋಂದಣಾಧಿಕಾರಿ ಹುದ್ದೆಗಳಿವೆ. ಆದರೆ ಅಲ್ಲಿ ಮೂವರು ಅಧಿಕಾರಿಗಳು (ಸುಬ್ರಹ್ಮಣ್ಯ, ಧನುರಾಜ್ ಹಾಗೂ ಸಹದೇವರೆಡ್ಡಿ ಕೋಟಿ) ಕೆಲಸ ಮಾಡುತ್ತಿರುವುದು ಕಂಡುಬಂದಿತು.
ಕೆಎಟಿ ತಡೆಯಾಜ್ಞೆ:
ಹಿರಿಯ ಉಪನೋಂದಣಾಧಿಕಾರಿ ಧನುರಾಜ್ ಅವರ ಸ್ಥಾನಕ್ಕೆ ಸಹದೇವ ರೆಡ್ಡಿ ಕೋಟಿ ವರ್ಗಾವಣೆ ಆಗಿ ಬಂದಿದ್ದಾರೆ. ಆದರೆ ಧನುರಾಜ್ ತಮ್ಮ ವರ್ಗಾವಣೆಗೆ ಕರ್ನಾಟಕ ಆಡಳಿತಾತ್ಮಕ ನ್ಯಾಯಾಲಯದಿಂದ (ಕೆಎಟಿ) ತಡೆಯಾಜ್ಞೆ ತಂದಿದ್ದಾರೆ. ಅಷ್ಟೊತ್ತಿಗೆ ಸಹದೇವರೆಡ್ಡಿ ಕೋಟಿ ಕೆಲಸಕ್ಕೆ ವರದಿ ಮಾಡಿಕೊಂಡಿದ್ದರಿಂದ ಇಬ್ಬರೂ ಒಂದೇ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಧನುರಾಜ್ ಹಾಗೂ ಸಹದೇವರೆಡ್ಡಿ ಕೋಟಿ ಅವರ ವಿಚಾರದಲ್ಲಿ ಐಜಿಆರ್ (ಇನ್‌ಸ್ಪೆಕ್ಟರ್ ಜನರಲ್ ಆಫ್ ರೆಕಾರ್ಡ್ಸ್) ಸೂಕ್ತ ನಿರ್ಧಾರ ಕೈಗೊಳ್ಳಬೇಕಿದೆ. ಆದರೆ ಯಾವುದೇ ಆದೇಶ ಅಲ್ಲಿಂದ ಹೊರಬೀಳದ ಕಾರಣ ಕಳೆದ ಎರಡು ತಿಂಗಳಿಂದ ಇಬ್ಬರೂ ಅಧಿಕಾರಿಗಳು ಅಕ್ಕಪಕ್ಕವೇ ಕುಳಿತು ಒಂದೇ ಕೊಠಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಅದನ್ನು ಕಂಡು ಸ್ವತಃ ಲೋಕಾಯುಕ್ತ ಪೊಲೀಸರು ಅಚ್ಚರಿಗೊಂಡರು.
ಕೆಲಸದ ಹಂಚಿಕೆ:
ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಕಾರ್ಯಕ್ಕೆ ಬರುವ ಸ್ಲಾಟ್‌ಗಳನ್ನು (ಕಡತಗಳು) ಮೂರು ಭಾಗಗಳಾಗಿ ವಿಭಜಿಸಿ ಮೂವರು ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿಯೂ ಈ ವೇಳೆ ಗಮನಕ್ಕೆ ಬಂದಿತು.
ಅಪಮೌಲ್ಯ ಕಾರ್ಯ 10 ವರ್ಷಗಳಿಂದ ಬಾಕಿ:
10 ವರ್ಷಗಳ ಹಳೆಯ 32 ಅಪಮೌಲ್ಯ ಪ್ರಕರಣ ಬಾಕಿ ಇರುವುದು ಕಂಡುಬಂದಿತು. ನಿಯಮಾವಳಿ ಅನುಸಾರ ತಕ್ಷಣ ಆ ಕಡತಗಳನ್ನು ಪರಿಹರಿಸಬೇಕಿತ್ತು. ಆದರೆ ಅದು ಆಗಿಲ್ಲ ಎಂದು ತಪಾಸಣೆ ವೇಳೆ ಲೋಕಾಯುಕ್ತ ಪೊಲೀಸರು ಅಸಮಾಧಾನ ವ್ಯಕ್ತಪಡಿಸಿದರು.
ಸಬ್‌ರಿಜಿಸ್ಟ್ರಾರ್ ಕಚೇರಿಯಲ್ಲಿ ಸೇವಾ ಶುಲ್ಕದ ಫಲಕ ಹಾಕದಿರುವುದು, ಜಿಲ್ಲಾ ನೋಂದಣಾಧಿಕಾರಿ ಕೇಂದ್ರ ಸ್ಥಾನದಲ್ಲಿಯೇ ಇದ್ದರೂ ಜೂನ್ ನಂತರ ಸಬ್ ರಿಜಿಸ್ಟ್ರಾರ್ ಕಚೇರಿಗೆ ಭೇಟಿ ನೀಡದಿರುವುದು ಲೋಕಾಯುಕ್ತ ಪೊಲೀಸರ ತಪಾಸಣೆಯ ವೇಳೆ ಕಂಡು ಬಂದಿತು. ಪಾರದರ್ಶಕ ಆಡಳಿತದ ನಿಟ್ಟಿನಲ್ಲಿ ಸಿಸಿ ಟಿವಿ ಕ್ಯಾಮೆರಾ, ಸಾರ್ವಜನಿಕರ ಅಳಲು ಆಲಿಸಲು ದೂರು ಪೆಟ್ಟಿಗೆ ಇಟ್ಟಿಲ್ಲ ಎಂಬುದನ್ನು ಅಧಿಕಾರಿಗಳು ಗುರುತಿಸಿದರು.
ಹಿರಿಯ ನಾಗರಿಕರು, ಅಂಗವಿಕಲರು ಹಾಗೂ ಗಣ್ಯರಿಗೆ ಕೊಡಬೇಕಾದ ವಿಐಪಿ ಸ್ಲಾಟ್ ಬಳಕೆ ಅಗದಿರುವುದು ಆ ಬಗ್ಗೆ ಯಾವುದೇ ದಾಖಲಾತಿ ನಿರ್ವಹಣೆ ಮಾಡದಿರುವುದು ತಪಾಸಣೆ ವೇಳೆ ಕಂಡುಬಂದಿತು. ಕೆಲವರು ಮಧ್ಯವರ್ತಿಗಳಾಗಿ ಪತ್ರಬರಹಗಾರರನ್ನು ನೋಂದಣಿಗೆ ಕರೆತಂದಿರುವ ಬಗ್ಗೆಯೂ ಲೋಕಾಯುಕ್ತ ಪೊಲೀಸರು ಮಾಹಿತಿ ಪಡೆದರು.
ಜಿಲ್ಲೆಯ ಸಬ್‌ರಿಜಿಸ್ಟ್ರಾರ್ ಕಚೇರಿಗಳ ಮೇಲೆ ದಾಳಿ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರ ಸೂಚನೆಯ ಮೇರೆಗೆ ಈಚೆಗೆ ಜಿಲ್ಲೆಯ ತಹಶೀಲ್ದಾರ್ ಕಚೇರಿ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಗಳ ಮೇಲೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು ಅದರ ಭಾಗವಾಗಿ ಶಿವಮೊಗ್ಗ ಜಿಲ್ಲೆಯ ಎಲ್ಲ ಸಬ್ ರಿಜಿಸ್ಟ್ರಾರ್‌ಗಳ ಕಚೇರಿಗಳ ಮೇಲೂ ಗುರುವಾರ ಏಕಕಾಲದಲ್ಲಿ ದಾಳಿ ನಡೆಸಿದ್ದರು.
ಆದಾಯ ಸಿಂಧುತ್ವ ಪ್ರಮಾಣಪತ್ರ ಬಾಕಿ: ನೋಟಿಸ್ ತಹಶೀಲ್ದಾರ್ ಕಚೇರಿಗಳ ಮೇಲೆ ಈಚೆಗೆ ಲೋಕಾಯುಕ್ತ ಪೊಲೀಸರು ನಡೆಸಿದ್ದ ದಾಳಿಯ ವೇಳೆ ಜಾತಿ–ಆದಾಯ ಸಿಂಧುತ್ವ ಪ್ರಮಾಣಪತ್ರಗಳನ್ನು ಸಕಾರಣವಿಲ್ಲದೇ ಬಾಕಿ ಇರಿಸಿಕೊಂಡಿರುವುದು ಕಂಡುಬಂದಿತ್ತು. ಈ ವಿಚಾರದಲ್ಲಿ ಮಾಧ್ಯಮಗಳಲ್ಲಿ ಬಂದ ವರದಿ ಆಧರಿಸಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಜಿಲ್ಲಾಧಿಕಾರಿ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರ್‌ಗೆ ನೋಟಿಸ್ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.