ADVERTISEMENT

ವಾರಸುದಾರರ ಕೈ ಸೇರಿದ 110 ಮೊಬೈಲ್‌

ಸಿಇಐಆರ್‌ ಪೋರ್ಟಲ್‌ನಲ್ಲಿ ದೂರು ದಾಖಲು: ಸಿಇಎನ್ ಪೊಲೀಸರ ಶ್ರಮ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 3:05 IST
Last Updated 30 ಜುಲೈ 2025, 3:05 IST
ಶಿವಮೊಗ್ಗದಲ್ಲಿ ಮಂಗಳವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಪತ್ತೆಯಾದ ಮೊಬೈಲ್‌ಫೋನನ್ನು ವಾರಸುದಾರರಿಗೆ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಮರಳಿಸಿದರು
ಶಿವಮೊಗ್ಗದಲ್ಲಿ ಮಂಗಳವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಪತ್ತೆಯಾದ ಮೊಬೈಲ್‌ಫೋನನ್ನು ವಾರಸುದಾರರಿಗೆ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಮರಳಿಸಿದರು   

ಶಿವಮೊಗ್ಗ: ಕಳ್ಳತನ ಆಗಿದ್ದ ಹಾಗೂ ಕಳೆದು ಹೋದ 110 ಮೊಬೈಲ್ ಫೋನ್‌ಗಳನ್ನು ಪತ್ತೆ ಮಾಡಿರುವ ಇಲ್ಲಿನ ಸಿಇಎನ್ ಠಾಣೆಯ ಪೊಲೀಸರು, ಮಂಗಳವಾರ ವಾರಸುದಾರರಿಗೆ ಮರಳಿಸಿದರು. 

ಮೊಬೈಲ್‌ಫೋನ್‌ಗಳು ಕಳೆದು ಹೋಗಿರುವ ಬಗ್ಗೆ ಸಿಇಐಆರ್ ಪೋರ್ಟಲ್‌ ಮೂಲಕ ಜಿಲ್ಲೆಯ ಪೊಲೀಸ್ ಇಲಾಖೆಗೆ ಒಂದು ಸಾವಿರ ದೂರು ದಾಖಲಾಗಿದ್ದವು. ಅವುಗಳನ್ನು ಪತ್ತೆ ಮಾಡಲು ಎಸ್ಪಿ ಜಿ.ಕೆ. ಮಿಥುನ್ ಕುಮಾರ್ ಅವರು ಸಿಇಎನ್ ಠಾಣೆಯ ಡಿವೈಎಸ್ಪಿ ಕೃಷ್ಣಮೂರ್ತಿ ನೇತೃತ್ವದಲ್ಲಿ, ಇನ್‌ಸ್ಪೆಕ್ಟರ್ ಮಂಜುನಾಥ್ ಮತ್ತು ಸಿಬ್ಬಂದಿ ಒಳಗೊಂಡ ತಂಡ ರಚಿಸಿದ್ದರು. ಕಳೆದ ಮೂರು ತಿಂಗಳಿನಿಂದ ಸತತವಾಗಿ ತನಿಖೆ ನಡೆಸಿ ₹16,35 ಲಕ್ಷ ಮೊತ್ತದ 110 ಮೊಬೈಲ್ ಫೋನ್‌ಗಳನ್ನು ಹುಡುಕಿಕೊಡುವಲ್ಲಿ ಈ ತಂಡ ಯಶಸ್ವಿಯಾಗಿದೆ. 

ಸಂಜೆ ನಡೆದ ಕಾರ್ಯಕ್ರಮದಲ್ಲಿ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಎಎಸ್ಪಿಗಳಾದ ಅನಿಲ್‌ಕುಮಾರ್ ಭೂಮರಡ್ಡಿ, ಕಾರಿಯಪ್ಪ ಕಳೆದುಕೊಂಡವರಿಗೆ ಮೊಬೈಲ್‌ಫೋನ್‌ಗಳನ್ನು ವಾಪಸ್ ಮರಳಿಸಿ ಅವರ ಮುಖದಲ್ಲಿ ಮಂದಹಾಸ ಮೂಡಿಸಿದರು.

ADVERTISEMENT

ಸಿಇಐಆರ್ ಪೋರ್ಟಲ್ ಮೂಲಕ ದೂರು ದಾಖಲಾದ 24 ಗಂಟೆಯ ಒಳಗಾಗಿ ಕಳೆದುಹೋದ ಮೊಬೈಲ್ ಫೋನನ್ನು ಬ್ಲಾಕ್ ಮಾಡಲಾಗುತ್ತದೆ. ಇದರಿಂದ ಅದು ದುರ್ಬಳಕೆಯಾಗುವುದು ತಪ್ಪಲಿದೆ. ಆ ಫೋನನ್ನು ಯಾರಾದರೂ ಬಳಕೆ ಮಾಡಿದಲ್ಲಿ ಅವರ ವಿವರವೂ ದೊರಕುತ್ತದೆ. ಇದರಿಂದ ಕಳೆದು ಹೋದ ಮೊಬೈಲ್ ಫೋನ್ ಗಳನ್ನು ಸುಲಭವಾಗಿ ಪತ್ತೆ ಮಾಡಲು ಸಾಧ್ಯ. ಸಾರ್ವಜನಿಕರು ಈ ಪೋರ್ಟಲ್‌ನ ಉಪಯೋಗ ಪಡೆದುಕೊಳ್ಳುವಂತೆ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಮನವಿ ಮಾಡಿದ್ದಾರೆ.

ಠಾಣೆ ಬದಲಿಗೆ ಈ ಬ್ಲಾಗ್‌ಗೆ ಭೇಟಿ ಕೊಡಿ!

ಸಾರ್ವಜನಿಕರು ಮೊಬೈಲ್ ಫೋನ್‌ ಕಳೆದು ಹೋದರೆ ದೂರು ಕೊಡಲು ಠಾಣೆಗೆ ಹೋಗಬೇಕಿಲ್ಲ. ಬದಲಿಗೆ ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್‌ಪಿ) ಅಪ್ಲಿಕೇಶನ್ ಮೂಲಕ ದೂರು ದಾಖಲಿಸಿ ಸ್ವೀಕೃತಿ ಪಡೆಯಬಹುದು. https://www.ceir.gov.in ವೆಬ್ ಪೋರ್ಟಲ್ ಭೇಟಿ ನೀಡಿ block stolen/Lost Mobile ಆಪ್ಷನ್ ಮೇಲೆ ಕ್ಲಿಕ್ ಮಾಡಿ ನಂತರ ಫಾರಂನಲ್ಲಿ ಕಳೆದು ಹೋದ ಮೊಬೈಲ್ ಫೋನಿನ IMEI ನಂಬರ್ ಹಾಗೂ ಮೊಬೈಲ್ ಫೋನ್ ನಂಬರ್ ಮತ್ತು ಅಗತ್ಯ ವಿವರಗಳನ್ನು ಭರ್ತಿ ಮಾಡಿ ದೂರು ದಾಖಲಿಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.