ಶಿವಮೊಗ್ಗ: ‘ಸಂವಿಧಾನ ಓದಬೇಕು ಎಂದು ಪಠ್ಯದಲ್ಲಿ ಅಳವಡಿಸಿ ವಿದ್ಯಾರ್ಥಿಗಳನ್ನು ಈ ರೀತಿ ತೊಡಗಿಸಿಕೊಳ್ಳುವ ಅರ್ಥಪೂರ್ಣ ಕಾರ್ಯಕ್ರಮ ರೂಪಿಸಿದ್ದಕ್ಕೆ ಅಭಿನಂದನೆಗಳು. ಸಂವಿಧಾನ ಓದುವ ಜೊತೆಗೆ ಅದನ್ನು ಪ್ರೀತಿಸಿ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಸ್. ಸಂತೋಷ ಸಲಹೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ, ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಸಹಯೋಗದಲ್ಲಿ ಶಿವಮೊಗ್ಗ ತಾಲ್ಲೂಕು ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಸಂವಿಧಾನ ಮತ್ತು ಡಾ.ಬಿ.ಆರ್. ಅಂಬೇಡ್ಕರ್ ಕುರಿತು ಏರ್ಪಡಿಸಿದ್ದ ರಸಪ್ರಶ್ನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಸಂವಿಧಾನ ನೆಲದ ಮೂಲ ಕಾನೂನು. ಅದನ್ನು ಅರ್ಥ ಮಾಡಿಕೊಳ್ಳಬೇಕು. ಅದನ್ನು ನಾವು ಪ್ರೀತಿಸಿದರೆ ಅದು ಹೇಗೆ ಇದೆಯೋ ಹಾಗೇ ನಾವು ಅರ್ಥ ಮಾಡಿಕೊಳ್ಳಲು ಸಾಧ್ಯ’ ಎಂದು ವಿವರಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷರಾದ ಡಿ. ಮಂಜುನಾಥ ಮಾತನಾಡಿ, ‘ಸಂವಿಧಾನ ಅರಿಯದ ಹಲವು ಮಂದಿ ಉನ್ನತ ಸ್ಥಾನದಲ್ಲಿದ್ದು ತಪ್ಪು ಮಾಡುತ್ತ ಸಾರ್ವಜನಿಕ ಹಣ, ಸಮಯ ವ್ಯರ್ಥ ಮಾಡುತ್ತಿದ್ದಾರೆ. ಅದನ್ನು ನೋಡಿದರೆ ಸಂವಿಧಾನ ಅರಿವಿದ್ದಿದ್ದರೆ ಹೀಗೆಲ್ಲ ಆಗುತ್ತಿರಲಿಲ್ಲ. ಹೊಸ ತಲೆಮಾರು ಈ ತಪ್ಪುಗಳನ್ನು ಮಾಡದಿರಲೆಂದು ಪ್ರೇರಣೆ ನೀಡುವ ಸಲುವಾಗಿ ರಸಪ್ರಶ್ನೆ ಕಾರ್ಯಕ್ರಮ ರೂಪಿಸಲಾಗಿದೆ’ ಎಂದು ವಿವರಿಸಿದರು.
‘ಸಂವಿಧಾನ ಕರಡು ಪ್ರತಿಯನ್ನು ಸಾರ್ವಜನಿಕ ಚರ್ಚೆಗೆ ಇಡಲಾಗಿತ್ತು. ಆಗಲೇ ಯಾವುದೇ ಸೌಲಭ್ಯಗಳಿಲ್ಲದ ಕಾಲದಲ್ಲಿ 7,695 ಪ್ರಶ್ನೆಗಳು ಬಂದಿದ್ದವು. ಆದರೆ ಇವತ್ತು ತಿದ್ದುಪಡಿಗಳನ್ನು ಸಾರ್ವಜನಿಕ ಚರ್ಚೆಗೆ ಇಡದೇ ಅಸಡ್ಡೆ ಮಾಡಲಾಗುತ್ತಿದೆ’ ಎಂದು ವಕೀಲ ಕೆ.ಪಿ. ಶ್ರೀಪಾಲ್ ಹೇಳಿದರು.
ಕಾಲೇಜಿನ ಪ್ರಾಚಾರ್ಯ ಪ್ರೊ.ಟಿ. ಅವಿನಾಶ್ ಅಧ್ಯಕ್ಷತೆ ವಹಿಸಿದ್ದರು. ಅನನ್ಯ ಗಿರೀಶ್ ಉಪಸ್ಥಿತರಿದ್ದರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷೆ ಮಹಾದೇವಿ, ಜಿ.ಆರ್. ಲವ, ಪ್ರಕಾಶ್ ಮರ್ಗನಹಳ್ಳಿ ಹಾಜರಿದ್ದರು. ಎಚ್.ಟಿ.ಕೃಷ್ಣಮೂರ್ತಿ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.