ಆನವಟ್ಟಿ: ‘ಈ ಬಾರಿಯ ಲೋಕಸಭೆ ಚುಣಾವಣೆ ಸತ್ಯ ಮತ್ತು ಸುಳ್ಳಿನ ನಡುವಿನ ಚುಣಾವಣೆಯಾಗಿದ್ದು, ಬಿಜೆಪಿಗರು ಭಾವನಾತ್ಮಕ ಹೇಳಿಕೆಗಳಿಂದ ಜನರನ್ನು ದಾರಿತಪ್ಪಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರದ ಯೋಜನೆಗಳು ಮನೆ– ಮನೆಗೂ ತಲುಪಿವೆ. ಹಾಗಾಗಿ ಗೀತಾ ಶಿವರಾಜಕುಮಾರ್ ಅವರು ಲೀಡ್‍ನಲ್ಲೇ ಜಯಗಳಿಸುತ್ತಾರೆ’ ಎಂದು ಪ್ರಾಥಮಿಕ ಹಾಗೂ ಸಾಕ್ಷರತಾ ಶಿಕ್ಷಣ ಇಲಾಖೆಯ ಸಚಿವ ಎಸ್.ಮಧು ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಮಂಗಳವಾರ ಮಧು ಬಂಗಾರಪ್ಪ ಹಾಗೂ ಪತ್ನಿ ಅನಿತಾ ಮಧು ಬಂಗಾರಪ್ಪ ದಂಪತಿ, ಎಸ್.ಬಂಗಾರಪ್ಪ, ಶಕುಂತಲಾ ಬಂಗಾರಪ್ಪ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ನಂತರ ಸ್ವಗ್ರಾಮದ ಕುಬಟೂರಿನ ಗಣಪತಿ ದೇವಸ್ಥಾನ, ಆಂಜನೇಯ ದೇವಸ್ಥಾನ ಹಾಗೂ ದ್ಯಾವಮ್ಮ ದೇವಸ‍್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಬಳಿಕ ಮತಕಟ್ಟೆಯಲ್ಲಿ ಸರತಿ ಸಾಲಿನಲ್ಲಿ ತೆರಳಿ ಮತ ಚಲಾಯಿಸಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದರು.
‘ಮೋದಿ ಬಂದ ಮೇಲೆ ದೇಶ ಅಭಿವೃದ್ಧಿ ಆಗಿದೆಯಾ? 65 ವರ್ಷ ಇವರೆಲ್ಲ ಕಾಂಗ್ರೆಸ್ ಸರ್ಕಾರದಲ್ಲಿ ಬದುಕಿರಲಿಲ್ಲವೇ ಎಂದು ಪ್ರಶ್ನಿಸಿದ ಅವರು ಬರಿ ಹುಸಿ ಸುಳ್ಳು ಹುಟ್ಟುಹಾಕುವುದರಲ್ಲೇ ಬಿಜೆಪಿ ಹತ್ತು ವರ್ಷ ಕಳೆದಿದೆ. ಇದನ್ನು ಸಾಮಾನ್ಯ ಜನರು ತಿಳಿದುಕೊಂಡಿದ್ದಾರೆ. ದೇಶದಲ್ಲಿ ಜನರಿಗೆ ಕಾಂಗ್ರೆಸ್ ಮೇಲೆ ಹೆಚ್ಚು ನಂಬಿಕೆ, ವಿಶ್ವಾಸವಿದೆ. ಜನಸಾಮಾನ್ಯರ ಬದುಕಿಗೆ ಕಾಂಗ್ರೆಸ್ ಸಹಕಾರ ನೀಡಿದೆ. ಹಾಗಾಗಿ ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತದೆ’ ಎಂದರು.
‘ಹೊಂದಾಣಿಕೆ ಮೈತ್ರಿಯಿಂದ ವಿಪಕ್ಷದವರಲ್ಲಿ ಹತಾಶ ಭಾವನೆ ಮೂಡಿದೆ. ಹಾಗಾಗಿ, ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಪ್ರಜ್ವಲ್ ರೇವಣ್ಣ ಪೇನ್‍ಡ್ರೈವ್ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯರಿಗೆ ರಕ್ಷಣೆ ಜೊತೆಗೆ ನ್ಯಾಯ ಒದಗಿಸಲಾಗುತ್ತದೆ. ಕಾನೂನಿನಗಿಂತ ಯಾರೂ ದೊಡ್ಡವರಲ್ಲ. ಈ ವಿಚಾರವನ್ನು ಮಾಧ್ಯಮಗಳ ಮೂಲಕ ತಿರುಚಿ ರಾಜಕೀಯಗೊಳಿಸುತ್ತಿರುವುದನ್ನು ಖಂಡಿಸುತ್ತೇನೆ. ಹೆಚ್ಚು ಪ್ರತಿಕ್ರಿಯೆ ನೀಡುವುದು ಚುನಾವಣಾ ಸಂದರ್ಭದಲ್ಲಿ ತಪ್ಪಾಗುತ್ತದೆ’ ಎಂದರು.
ಮುಖಂಡರಾದ ಸದಾನಂದ ಗೌಡ ಬಿಳಗಲಿ, ಪಿ.ಎಸ್.ಮಂಜುನಾಥ, ಸುರೇಶ್ ಸಾರೆಕೊಪ್ಪ, ಸುರೇಶ್ ಎಲೆಕ್ಟ್ರಿಕಲ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.