ADVERTISEMENT

ಜಿಲ್ಲೆಗೊಂದು ಪ್ರಣಾಳಿಕೆಗೆ ಸಿದ್ಧತೆ: ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2022, 11:04 IST
Last Updated 10 ಆಗಸ್ಟ್ 2022, 11:04 IST

ಶಿವಮೊಗ್ಗ: ‘ಸ್ಥಳೀಯವಾಗಿ ಜನರ ಭಾವನೆಗಳಿಗೆ ದನಿಯಾಗಲು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಗೊಂದು ಪ್ರಣಾಳಿಕೆ ರೂಪಿಸಲು ಸಿದ್ಧತೆ ನಡೆಸಿದ್ದೇವೆ‘ ಎಂದು ಕೆಪಿಸಿಸಿ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ಮಧು ಬಂಗಾರಪ್ಪ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಪ್ರತೀ ಜಿಲ್ಲೆಯಲ್ಲೂ ಜನರ ಸಮಸ್ಯೆಗಳು ವಿಭಿನ್ನವಾಗಿವೆ. ಮಲೆನಾಡಿನ ಶಿವಮೊಗ್ಗದ ಜನರ ಬೇಡಿಕೆಗಳು ಬೇರೆ ಇದ್ದರೆ, ಕರಾವಳಿ, ಉತ್ತರ ಕರ್ನಾಟಕದ ಬಯಲು ಸೀಮೆಯ ಜಿಲ್ಲೆಗಳ ತೊಂದರೆ ಬೇರೆ ಇವೆ. ಇವುಗಳನ್ನು ಗಮನದಲ್ಲಿಟ್ಟುಕೊಂಡು ಜಿಲ್ಲೆಗೊಂದು ಪ್ರಣಾಳಿಕೆ ರೂಪಿಸಲಾಗುತ್ತಿದೆ ಎಂದರು.

’ಚುನಾವಣೆ ಎದುರಿಸಲು ಪ್ರತೀ ರಾಜಕೀಯ ಪಕ್ಷಗಳಿಗೆ ಪ್ರಣಾಳಿಕೆಯೇ ಬಹು ದೊಡ್ಡ ಶಕ್ತಿ. ಹೀಗಾಗಿ ಅದನ್ನು ಸಶಕ್ತವಾಗಿ ಹಾಗೂ ವಾಸ್ತವಿಕ ನೆಲೆಯಲ್ಲಿ ಸಿದ್ಧಪಡಿಸುತ್ತಿದ್ದೇವೆ. ಆ ನಿಟ್ಟಿನಲ್ಲಿ ಪ್ರತೀ ಜಿಲ್ಲಾ ಕೇಂದ್ರದ ಪಕ್ಷದ ಘಟಕಗಳಿಂದ ವರದಿ ತರಿಸಿಕೊಂಡು ಚರ್ಚಿಸಿ ಮುಂದುವರೆಯಲಿದ್ದೇವೆ‘ ಎಂದು ಮಧು ಹೇಳಿದರು.

ADVERTISEMENT

‘ಬಿಜೆಪಿಯವರಂತೆ ನಾವು ಪ್ರಣಾಳಿಕೆಯಲ್ಲಿ ಸುಳ್ಳು ಭರವಸೆ ನೀಡುವುದಿಲ್ಲ. ಚುನಾವಣೆಯಲ್ಲಿ ಗೆದ್ದ ಮೇಲೆ ಅವುಗಳನ್ನು ಈಡೇರಿಸದೇ ಜನರಿಗೆ ಮೋಸ ಮಾಡುವುದಿಲ್ಲ‘ ಎಂದು ಟಾಂಗ್ ನೀಡಿದ ಮಧು ಬಂಗಾರಪ್ಪ, ಜನರಿಗೆ ನೀಡಿದ ಭರವಸೆಗಳ ಈಡೇರಿಸಲಿದ್ದೇವೆ. ಅದಕ್ಕೆ ಈ ಹಿಂದೆ ಸಿದ್ದರಾಮಯ್ಯ ಸರ್ಕಾರದ ಅವಧಿಯ ಪ್ರಣಾಳಿಕೆಯಲ್ಲಿ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಿದ್ದೇ ಸಾಕ್ಷಿ ಎಂದರು.

ಶ್ರೀಸಾಮಾನ್ಯರು ಅದರಲ್ಲೂ ಬಡವರು, ದುರ್ಬಲರನ್ನು ಆರ್ಥಿಕವಾಗಿ ಮೇಲೆತ್ತಿ ಅವರನ್ನು ಮುಖ್ಯವಾಹಿನಿಗೆ ತರಲು ಸರ್ಕಾರದಿಂದ ಉಚಿತ ಕೊಡುಗೆಗಳ ನೀಡುವುದು, ಅದನ್ನು ಪ್ರಣಾಳಿಕೆಯಲ್ಲಿ ಅಳವಡಿಸುವುದು ಅಗತ್ಯವಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.