
ಸೊರಬ: ಕಾಂಗ್ರೆಸ್ ಸರ್ಕಾರ ಗ್ರಾಮಗಳ ಅಭಿವೃದ್ಧಿ ಜೊತೆಗೆ ಅಲ್ಲಿನ ಜನರಿಗೆ ಸ್ಥಳೀಯವಾಗಿ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಮನರೇಗ ಯೋಜನೆ ಅನುಷ್ಠಾನಗೊಳಿಸಿದೆ. ಆದರೆ ಗಾಂಧೀಜಿ ವಿರೋಧಿಸುವ ಕೇಂದ್ರ ಬಿಜೆಪಿ ಸರ್ಕಾರ ಅವರ ಹೆಸರನ್ನೇ ಇಲ್ಲವಾಗಿಸಲು ಪ್ರಯತ್ನಿಸುವ ಮೂಲಕ ನಿತ್ಯವೂ ಅವರ ಹತ್ಯೆ ಮಾಡುತ್ತಿದೆ ಎಂದು ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.
ತಾಲ್ಲೂಕಿನ ಜಿರಲೆಕೊಪ್ಪ ಗ್ರಾಮದಲ್ಲಿ ಭಾನುವಾರ ₹1ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಮಹಾತ್ಮ ಗಾಂಧಿ ಹೆಸರಿನಲ್ಲಿರುವ ಮನರೇಗ ಯೋಜನೆಯ ಹೆಸರನ್ನು ಕೇಂದ್ರ ಸರ್ಕಾರ ಜಿರಾಮಜಿ ಎಂದು ಬದಲಾಯಿಸಲು ಹೊರಟಿದೆ. ನಾಥರಾಮ ಗೂಡ್ಸೆ ಗಾಂಧೀಜಿಯನ್ನು ಒಂದು ಬಾರಿ ಗುಂಡಿಕ್ಕಿ ಸಾಯಿಸಿದರೆ ಬಿಜೆಪಿಯವರು ಪ್ರತಿನಿತ್ಯ ಸಾಯಿಸುತ್ತಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಕೊಡಿಸುವಲ್ಲಿ ಅವಿರತ ಹೋರಾಡಿದ ಗಾಂಧೀಜಿ ಅವರು ಬಿಜೆಪಿ ನಾಯಕರ ಕಣ್ಣಿಗೆ ಖಳನಾಯಕರಂತೆ ಕಾಣುತ್ತಾರೆ. ಪ್ರೀತಿ, ವಿಶ್ವಾಸದ ಮೂಲಕ ಜನರ ಮನಸ್ಸು ಗೆದ್ದು ಜಗತ್ತಿಗೆ ಶಾಂತಿ ಸಾರಿದ ಗಾಂಧೀಜಿಯವರು ದೀನ,ದಲಿತರು ಹಾಗೂ ತಳಸಮುದಾಯದ ಅಭಿವೃದ್ಧಿ ಕನಸು ಕಂಡವರು.
ಅವರ ಚಿಂತನೆಗಳನ್ನು ಆಡಳಿತದಲ್ಲಿ ಮೈಗೂಡಿಸಿಕೊಂಡ ಮಾಜಿ ಮುಖ್ಯ ಮಂತ್ರಿ ಎಸ್.ಬಂಗಾರಪ್ಪ ಅವರು ತಾಲ್ಲೂಕಿನ ರೈತರಿಗೆ ಬಗರ್ ಹುಕುಂ ಜಮೀನು ಮಂಜೂರಾತಿ ಮಾಡಿದ ಪರಿಣಾಮ ಇಂದು ರೈತರು ನೆಮ್ಮದಿ ಜೀವನ ನಡೆಸಲು ಸಾಧ್ಯವಾಗಿದೆ. ಆದರೆ ಬಡವರಿಗೆ ನೀಡಿದ ಹಕ್ಕು ಪತ್ರವನ್ನು ವಜಾಗೊಳಿಸುವ ಮೂಲಕ ರೈತ ವಿರೋಧಿ ನೀತಿ ಅನುಸರಿಸಿದರು ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರ ಕುರಿತು ಆಕ್ರೋಶ ವ್ಯಕ್ತಪಡಿಸಿದ ಅವರು, ನಮ್ಮ ತಂದೆ ಬಂಗಾರಪ್ಪ ಅವರ ಜನಪರ ಕಾಳಜಿಯನ್ನು ಮುಂದುವರೆಸಿಕೊಂಡು ಹೋಗುವುದಾಗಿ ತಿಳಿಸಿದರು.
ಜಿರಲೆಕೊಪ್ಪದ ಗ್ರಾಮಸ್ಥರು ಬಸ್ ವ್ಯವಸ್ಥೆಗೆ ಮನವಿ ಮಾಡಿದಾಗ ಹಲವು ವರ್ಷಗಳಿಂದ ನನೆಗುದಿಗೆ ಬಿದಿದ್ದ ರಸ್ತೆ ಕಾಮಗಾರಿ ಅಭಿವೃದ್ಧಿಪಡಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು. ನಾನು ಹಿಂದಿನ ಅವಧಿಯಲ್ಲಿ ಶಾಸಕರಾಗಿದ್ದ ಸಂದರ್ಭದಲ್ಲಿ ಜಿರಲೆಕೊಪ್ಪ ಗ್ರಾಮಕ್ಕೆ ರಸ್ತೆ ಮಾಡುವ ಉದ್ದೇಶ ಹೊಂದಲಾಗಿತ್ತು. ಆದರೆ ಇಂದು ನಾನೇ ಸಚಿವನಾಗಿ ತಮ್ಮ ಗ್ರಾಮಕ್ಕೆ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿರುವುದು ಹೆಮ್ಮೆ ತಂದಿದೆ ಎಂದು ತಿಳಿಸಿದರು.
ಈ ವೇಳೆ ನಿವೃತ್ತ ನೌಕರ ಶ್ರೀನಿವಾಸ್, ಗ್ರಾಮ ಸಮಿತಿ ಅಧ್ಯಕ್ಷ ಬಂಗಾರಪ್ಪ, ಮಾವಲಿ ಗ್ರಾ.ಪಂ ಉಪಾಧ್ಯಕ್ಷ ಬಂಗಾರಪ್ಪ, ಇಓ ಶಶಿಧರ್, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ.ಶೇಖರ್, ಮುಖಂಡರಾದ ಗಣಪತಿ ಹುಲ್ತಿಕೊಪ್ಪ, ನಾಗರಾಜ್ ಚಿಕ್ಕಸವಿ, ಸುರೇಶ್ ಬಿಳವಾಣಿ, ಈಶ್ವರ, ಪ್ರಭಾಕರ್ ಶಿಗ್ಗಾ, ದಯಾನಂದ ಸರಸ್ವತಿ, ಶಿವಕುಮಾರ್ ಕಾಸ್ವಾಡಿಕೊಪ್ಪ, ಪಂಚಾಕ್ಷರಿ, ಕೇಶವ,ಜಗದೀಶ್,ಚಂದ್ರಪ್ಪ, ಅನಂತ, ಮಾಲತೇಶ್, ವಿರೇಶ್, ತಮ್ಮಣ್ಣಪ್ಪ, ಬಿಷ್ಠಪ್ಪ, ರಾಜು, ಹೊಳಿಯಪ್ಪ, ಕುಮಾರ್, ಮಲ್ಲೇಶಪ್ಪ ಹರಗಿ,ಲೋಕಮ್ಮ ಇದ್ದರು.
ಮುಂದಿನ ಶೈಕ್ಷಣಿಕ ವರ್ಷದಿಂದ ಪಿಯುಸಿವರೆಗೆ ಮಧ್ಯಾಹ್ನದ ಬಿಸಿಯೂಟ ವಿಸ್ತರಣೆ ಜೊತೆಗೆ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಬುಕ್ ವಿತರಿಸಲಾಗುವುದು.ಎಸ್. ಮಧು ಬಂಗಾರಪ್ಪ.ಜಿಲ್ಲಾ ಉಸ್ತುವಾರಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.