ADVERTISEMENT

ನಿರ್ಮಲ ತುಂಗಭದ್ರಾ ಯಶಸ್ಸಿಗೆ ಬದ್ಧ: ಮಧು ಬಂಗಾರಪ್ಪ

ಪಾದಯಾತ್ರೆ ಸಿದ್ಧತೆಗೆ ಪೂರ್ವಭಾವಿ ಸಭೆ: ಉಸ್ತುವಾರಿ ಸಚಿವರು ಭಾಗಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 15:56 IST
Last Updated 19 ಅಕ್ಟೋಬರ್ 2024, 15:56 IST
ಶಿವಮೊಗ್ಗದ ಹೊಯ್ಸಳ ಫೌಂಡೇಷನ್‌ನಲ್ಲಿ ಶನಿವಾರ ನಡೆದ ನಿರ್ಮಲ ತುಂಗಭದ್ರಾ ಅಭಿಯಾನದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾತನಾಡಿದರು
ಶಿವಮೊಗ್ಗದ ಹೊಯ್ಸಳ ಫೌಂಡೇಷನ್‌ನಲ್ಲಿ ಶನಿವಾರ ನಡೆದ ನಿರ್ಮಲ ತುಂಗಭದ್ರಾ ಅಭಿಯಾನದ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾತನಾಡಿದರು   

ಶಿವಮೊಗ್ಗ: ತುಂಗಭದ್ರಾ ಸೇರಿದಂತೆ ರಾಜ್ಯದ ಎಲ್ಲ ನದಿಗಳ ಮಾಲಿನ್ಯ ತಡೆ ವಿಚಾರವನ್ನು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಗಂಭೀರವಾಗಿ ಪರಿಗಣಿಸಿದ್ದಾರೆ. ಅದಕ್ಕಾಗಿಯೇ ಪ್ರತ್ಯೇಕ ಸಮಿತಿ ರಚಿಸಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ನಗರದ ದುರ್ಗಿಗುಡಿ ಹೊಯ್ಸಳ ಫೌಂಡೇಶನ್‌ನಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನ ತಂಡ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿಯಿಂದ ಕೊಪ್ಪಳ ಜಿಲ್ಲೆ ಕಿಷ್ಕಿಂಧೆವರೆಗೆ ಆಯೋಜಿಸಿರುವ ಪಾದಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಶನಿವಾರ ಪಾಲ್ಗೊಂಡು ಅವರು ಮಾತನಾಡಿದರು.

ತುಂಗಾ ಹಾಗೂ ಭದ್ರಾ ನದಿಗಳ ಮಾಲಿನ್ಯ ತಡೆಗೆ ನಿರ್ಮಲ ತುಂಗಭದ್ರಾ ಅಭಿಯಾನದ ತಂಡ ನೀಡುವ ಸಲಹೆಗಳನ್ನು ಈ ಸಮಿತಿಯಿಂದ ಅನುಷ್ಠಾನಗೊಳಿಸಲು ಬದ್ಧ ಎಂದು ಹೇಳಿದರು.

ADVERTISEMENT

ಅಭಿಯಾನದ ವಿಚಾರದಲ್ಲಿ ಯಾವುದೇ ರಾಜಕಾರಣವಿಲ್ಲ. ನಾವೆಲ್ಲ ತುಂಗೆಯ ನೀರು ಕುಡಿದು ದೊಡ್ಡವರಾಗಿದ್ದೇವೆ. ತುಂಗಭದ್ರೆಯನ್ನು ಮಾಲಿನ್ಯ ಮುಕ್ತವಾಗಿಸುವುದು ನಮ್ಮ ಕರ್ತವ್ಯ. ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ಸಾರ್ವಜನಿಕರು ಕೂಡ ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.

ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣದ 40 ಕೋಟಿ ಜನರು ತುಂಗಾಭದ್ರಾ ನದಿಯ ನೀರನ್ನು ಬಳಸುತ್ತಿದ್ದಾರೆ. ಇದರ ರಕ್ಷಣೆ ನಮ್ಮೆಲ್ಲರ ಹೊಣೆ ಎಂದರು.

ಶಾಸಕ ಎಸ್.ಎನ್‌. ಚನ್ನಬಸಪ್ಪ ಮಾತನಾಡಿ, ನಿರ್ಮಲಾ ತುಂಗಭದ್ರಾ ಅಭಿಯಾನದ ಯಶಸ್ಸಿಗೆ ಈಗಾಗಲೇ ಅನೇಕ ಸಭೆ ನಡೆಸಿ ಕಾರ್ಯಕ್ರಮ ಹಾಕಿಕೊಂಡಿದ್ದೇವೆ. ಪ್ರಮುಖವಾಗಿ ಯುವಕರು, ವಿದ್ಯಾರ್ಥಿಗಳು ಹಾಗೂ ಸಂಘ ಸಂಸ್ಥೆಗಳಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ ಎಲ್ಲಾ ರಾಜಕೀಯ ಪಕ್ಷಗಳು ಕೈಜೋಡಿಸಲಿವೆ. ಅಧಿಕಾರಿಗಳನ್ನು ಕೂಡ ಇದರಲ್ಲಿ ಸೇರಿಸಿಕೊಳ್ಳುತ್ತೇವೆ. ಎಲ್ಲರ ಸಹಕಾರ ಅಗತ್ಯ ಎಂದರು.

ಅಭಿಯಾನದ ಪ್ರಮುಖ ಡಾ.ಶ್ರೀಪತಿ ಮಾತನಾಡಿ, ತುಂಗೆಯ ನೀರು ಸ್ನಾನಕ್ಕೂ ಯೋಗ್ಯವಲ್ಲದ ಪರಿಸ್ಥಿತಿ ಬಂದಿದೆ. ನದಿಯ ಮೂಲವಾದ ಶೃಂಗೇರಿ ಭಾಗದಿಂದಲೇ ಶುದ್ಧೀಕರಣದ ಕೆಲಸವಾಗಬೇಕಿದೆ ಎಂದರು. 

ಭದ್ರಾ ಕಾಡಾ ಅಧ್ಯಕ್ಷ ಡಾ.ಅಂಶುಮತ್‌, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಚಂದ್ರಭೂಪಾಲ್‌, ಅಭಿಯಾನದ ಸಂಚಾಲಕರಾದ ಎಂ.ಶಂಕರ್, ಗಿರೀಶ್‌ ಪಟೇಲ್‌, ಎಸ್‌.ಬಿ.ಅಶೋಕ್‌ಕುಮಾರ್, ಕಿರಣ್‌ಕುಮಾರ್, ಕಾಂತೇಶ್ ಕದರಮಂಡಲಗಿ, ಮುಖಂಡರಾದ ಕಲಗೋಡು ರ‌ತ್ನಾಕರ, ಜಿ.ಡಿ.ಮಂಜುನಾಥ್, ಬಾಲು ನಾಯ್ಡು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.