
ಶಿವಮೊಗ್ಗ: ಮಹಾಶಿವರಾತ್ರಿ ಅಂಗವಾಗಿ ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಭಾನುವಾರ ಶಿವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ರಾತ್ರಿಯಿಡೀ ಜಾಗರಣೆಯೊಂದಿಗೆ ಶಿವನಾಮ ಸ್ಮರಣೆ ಅನುರಣಿಸಿತು.
ಅರಕೆರೆಯ ಶ್ರೀರಾಮೇಶ್ವರ ಸ್ವಾಮಿ ದೇವಸ್ಥಾನ, ಶಿವಮೊಗ್ಗದ ವಿನೋಬನಗರದ ಶಿವಾಲಯದಲ್ಲಿ ಮಹಾಶಿವರಾತ್ರಿ ಅಂಗವಾಗಿ ವಿವಿಧ ಕಾರ್ಯಕ್ರಮ ನಡೆದವು. ಜಾಗರಣೆಯೊಂದಿಗೆ ರಾತ್ರಿಯಡೀ ಸಾವಿರಾರು ಜನರು ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಅರಕೆರೆಯ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದ ಶ್ರೀಶಂಕರ ಮಠದ ತಂಡದಿಂದ ರುದ್ರಪಠಣ, ನಗರದ ವಿವಿಧ ಭಜನಾ ಮಂಡಳಿಗಳಾದ ಗೋಪಾಳದ ಶ್ರೀರಾಗರಂಜಿನಿ ಭಜನಾ ತಂಡದಿಂದ, ಶ್ರೀರಾಮ ಭಜನಾ ಮಂಡಳಿ ವತಿಯಿಂದ, ವಿದ್ಯಾಭಜನಾ ಮಂಡಳಿ ಶಿವಮೊಗ್ಗ, ಶ್ರೀವಿದ್ಯಾಲಕ್ಷ್ಮೀ ಭಜನಾ ಮಂಡಳಿ, ಶ್ರೀದೇವಿ ಭಜನಾ ಮಂಡಳಿ, ಶಿವಾನಿ ಭಜನಾ ತಂಡ, ಶಾರದಾ ಮಹಿಳಾ ಒಕ್ಕೂಟ, ಮಧುರಾ ಕಲಾ ತಂಡದಿಂದ ಭಜನೆ ಸಂಜೆಯವರೆಗೂ ಭಜನೆ ನಡೆಯಿತು. ರಾಘವೇಂದ್ರ ಪ್ರಭು ಮತ್ತು ಸಿದ್ದಪ್ಪ ವಾದ್ಯ ಸಹಕಾರ ನೀಡಿದರು.
ಸಂಜೆ ನಟನಂ ಬಾಲನಾಟ್ಯ ಕೇಂದ್ರದವರಿಂದ ಭರತನಾಟ್ಯ, ಜಾನಪದ ನೃತ್ಯ, ದಕ್ಷಯಜ್ಞ ನೃತ್ಯ ರೂಪಕ ನಡೆಯಿತು. ರಾತ್ರಿ ಎಸ್.ಎಸ್.ಶಿವಾನಂದ ಶಾಸ್ತ್ರಿ ಮತ್ತು ತಂಡದವರಿಂದ ‘ಗೋಕರ್ಣ ಕ್ಷೇತ್ರ ಮಹಾತ್ಮೆ’ ಹರಿಕಥೆ ನಡೆಯಿತು.
ವಿನೋಬ ನಗರದ ಶಿವಾಲಯದಲ್ಲಿ ಮಹಾ ಶಿವರಾತ್ರಿ ನಿಮಿತ್ತ ವಿಶೇಷ ಪೂಜಾ ಕಾರ್ಯಕ್ರಮ ರುದ್ರಾಭಿಷೇಕ ನಡೆಯಿತು. ದೇವಸ್ಥಾನ ಸರ್ವರಿಗೂ ಶಿವಲಿಂಗವನ್ನು ಸ್ಪರ್ಶಿಸಿ ಪೂಜೆ ಸಲ್ಲಿಸಲು ಮುಕ್ತ ಅವಕಾಶ ನೀಡಲಾಗಿತ್ತು. ಭಕ್ತರಿಗೆ ಪ್ರಸಾದ ವಿನಿಯೋಗ ಕೂಡ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.