ADVERTISEMENT

ಶೋಷಿತ ಸಮುದಾಯಗಳು ಎಚ್ಚೆತ್ತುಕೊಳ್ಳಲಿ: ಮಹಾಂತ ಸ್ವಾಮೀಜಿ

ಗದಗದ ತೋಂಟದಾರ್ಯ ಮಠದ ಮಹಾಂತ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 12 ಮೇ 2022, 4:38 IST
Last Updated 12 ಮೇ 2022, 4:38 IST
ಸೊರಬದ ರಂಗಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಬಸವ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಗದಗದ ತೋಂಟದಾರ್ಯ ಶಾಖಾಮಠದ ಮಹಾಂತ ಸ್ವಾಮೀಜಿ ಮಾತನಾಡಿದರು.
ಸೊರಬದ ರಂಗಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಬಸವ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಗದಗದ ತೋಂಟದಾರ್ಯ ಶಾಖಾಮಠದ ಮಹಾಂತ ಸ್ವಾಮೀಜಿ ಮಾತನಾಡಿದರು.   

ಸೊರಬ: ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರಲ್ಲಿನ ದೌರ್ಬಲ್ಯಗಳನ್ನು ಬಳಸಿಕೊಂಡು ಕೇವಲ ಶೇ 3ರಷ್ಟಿರುವ ಮುಂದುವರಿದ ಸಮುದಾಯ ದೇಶದಲ್ಲಿ ಅಧಿಕಾರ ನಡೆಸುತ್ತಿದ್ದು, ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದು ಗದಗದ ತೋಂಟದಾರ್ಯ ಮಠದ ಮಹಾಂತ ಸ್ವಾಮೀಜಿ ತಿಳಿಸಿದರು.

ಪಟ್ಟಣದ ರಂಗ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ 131ನೇ ಜನ್ಮ ದಿನಾಚರಣೆ ಹಾಗೂ 889ನೇ ಬಸವ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಸವಣ್ಣ ಹಾಗೂ ಅಂಬೇಡ್ಕರ್ ಅವರು ಜಾತಿ, ಧರ್ಮಕ್ಕಿಂತ ಮನುಷ್ಯ ಧರ್ಮ ಮುಖ್ಯ ಎಂದು ನಂಬಿ ತಳ ಸಮುದಾಯದ ಪರವಾಗಿ ಹೋರಾಟ ಮಾಡಿದರು. ಆದರೆ, ಪ್ರಬಲ ಸಮುದಾಯ ಹಣ, ತೋಳ್ಬಲ ಹಾಗೂ ಅಧಿಕಾರದ ಮೂಲಕ ದೇಶ ಆಳುತ್ತಿದೆ. ಚುನಾವಣೆ ಸಂದರ್ಭಗಳಲ್ಲಿ ಹಿಂದುಳಿದ ವರ್ಗ ಹಾಗೂ ದಲಿತರು ಜಾಗೃತಗೊಂಡರೆ ಮಾತ್ರ ದೇಶಕ್ಕೆ ಭವಿಷ್ಯವಿದೆ ಎಂದು ಪ್ರತಿಪಾದಿಸಿದರು.

ADVERTISEMENT

‘ಡಾ.ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದಲ್ಲಿ ದೇಶವಾಸಿಗಳೆಲ್ಲರೂ ಭಾರತೀಯರು ಎಂದು ತಿಳಿಸಲಾಗಿದ್ದು, ಶಿಕ್ಷಣ, ಸಂಘಟನೆ ಮತ್ತು ಹೋರಾಟ ಅವರ ಮುಖ್ಯ ಧ್ಯೇಯವಾಗಿದೆ. ಈ ಮೂಲಕ ಪ್ರತಿಯೊಬ್ಬರಿಗೂ ನ್ಯಾಯವನ್ನು ಒದಗಿಸುವ ಕೆಲಸವನ್ನು ಸಂವಿಧಾನ ಮಾಡಿದೆ. ನುಡಿದಂತೆ ನಡೆಯುವ ಕೆಲಸವಾಗಬೇಕು. ಇದರಿಂದ ನಮ್ಮಲ್ಲಿನ ನಡವಳಿಕೆಗಳಲ್ಲಿ ಬದಲಾವಣೆಗಳನ್ನು ತರಲು ಸಾಧ್ಯವಿದೆ’ ಎಂದು ಹೇಳಿದರು.

ಅಂಬೇಡ್ಕರ್ ಜಯಂತಿ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಅವರ ಆದರ್ಶಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಅವರ ಮಾರ್ಗದರ್ಶನದಲ್ಲಿ ನಡೆಯಬೇಕು ಎಂದು ಸಲಹೆ ನೀಡಿದರು.

ಸತ್ಯ ಭದ್ರಾವತಿ ಮಾತನಾಡಿ, ‘ಪ್ರಸ್ತುತ ದಿನಗಳಲ್ಲಿ ಉಡುಗೆಗಳೇ ಶಿಕ್ಷಣಕ್ಕೆ ಅಡ್ಡಿಯಾಗುತ್ತಿರುವುದು ಅಕ್ಷಮ್ಯ. ಅಲ್ಪಸಂಖ್ಯಾತ ಸಮುದಾಯದ ಹೆಣ್ಣುಮಕ್ಕಳ ಶಿಕ್ಷಣದ ಹಕ್ಕನ್ನು ಕಸಿಯಲು ಹಿಜಾಬ್ ವಿಚಾರವನ್ನು ಮುನ್ನೆಲೆಗೆ ತರಲಾಗಿದೆ. ಹಲಾಲ್‍ ಕಟ್-ಜಟ್ಕಾ ಕಟ್, ಅಝಾನ್-ಓಂ ಪಠಣ ಇವುಗಳ ನಡುವಿನ ಪೈಪೋಟಿ ಸಮಾಜವನ್ನು ಒಡೆಯುತ್ತವೆಯೇ ಹೊರತು ಒಗ್ಗೂಡಿಸುವುದಿಲ್ಲ. ಹಿಂದುಳಿದ ಸಮುದಾಯದವರು, ಲಿಂಗಾಯತರು ಹಾಗೂ ಅಲ್ಪಸಂಖ್ಯಾತರು ಒಗ್ಗಟ್ಟಾಗಿ ದೇಶ ಕಟ್ಟುವ ಕೆಲಸ ಮಾಡಬೇಕಿದೆ. ಕೋಮುವಾದಿ ಷಡ್ಯಂತ್ರಗಳಿಗೆ ಬಲಿಯಾಗಬಾರದು’ ಎಂದು ಕರೆ ನೀಡಿದರು.

ರಾಷ್ಟ್ರೀಯ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎನ್.ಕೆ. ಚಿದಾನಂದ, ರಾಜಪ್ಪ ಮಾಸ್ತರ್, ನಾಗಪ್ಪ ಮಾಸ್ತರ್, ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಎಂ. ಬಷೀರ್ ಅಹಮ್ಮದ್, ಸುನ್ನಿ ಜಾಮಿಯಾ ಮಸೀದಿಯ ಅಬ್ದುಲ್ ರಶೀದ್ ಹಿರೇಕೌಂಶಿ, ಮಾಜಿ ಸೈನಿಕ ದಾನಪ್ಪ ನಾಯ್ಕ್ ಅವರನ್ನು ಸನ್ಮಾನಿಸಲಾಯಿತು.

ರುದ್ರಪ್ಪ ಭೈರೇಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿಎಸ್‍ಎಸ್ ಜಿಲ್ಲಾ ಸಂಚಾಲಕ ಚಿನ್ನಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ತಾಲ್ಲೂಕು ಸಂಚಾಲಕ ಮಹೇಶ ಶಕುನವಳ್ಳಿ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಮಿತಿ ಸದಸ್ಯ ಬಂದಗದ್ದೆ ರಾಜೇಂದ್ರ, ರಾಜ್ಯ ವಿಭಾಗೀಯ ಸಂಚಾಲಕ ಗುರುರಾಜ್, ಜಿಲ್ಲಾ ಸಂಘಟನಾ ಸಂಚಾಲಕ ಬಂಗಾರಪ್ಪ ನಿಟ್ಟಕ್ಕಿ, ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಜೆ.ಎಸ್. ನಾಗರಾಜ್ ಜೈನ್, ಎಂ. ಸಲೀಂ ಅಹಮ್ಮದ್, ಅನ್ಸರ್ ಅಹಮ್ಮದ್, ಕೋಲಾರ ಕೃಷ್ಣಪ್ಪ, ಕೃಷ್ಣಪ್ಪ ಮಟ್ಟೇರ್, ಪ್ರಕಾಶ ಮಲ್ಲಾಪುರ, ರೇವಪ್ಪ ಹಿರೇಚೌಟಿ, ಹುಚ್ಚರಾಯಪ್ಪ ಗುಂಜನೂರು, ನಾಗರಾಜ ಹುರಳಿಕೊಪ್ಪ, ಚಂದ್ರಪ್ಪ ತುಡನೂರು, ರವೀಂದ್ರ ಆನವಟ್ಟಿ, ಆಶೋಕ, ನಾಗರಾಜ ಕಾಸರಗುಪ್ಪೆ, ಶ್ರೀಕಾಂತ ಚಿಕ್ಕಶಕುನ, ಮುಸ್ಲಿಂ ಸಮಾಜದ ಮುಖಂಡರಾದ ಸೈಯದ್ ಅತೀಕ್, ಯು. ಫಯಾಜ್ ಅಹಮ್ಮದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.