
ಶಿವಮೊಗ್ಗ: ‘ಹಿಂಸೆ, ಅರಾಜಕತೆ, ಭ್ರಷ್ಟಾಚಾರ ತಾಂಡವಾಡುತ್ತಿರುವ ಈ ದಿನಗಳಲ್ಲಿ ಜಗತ್ತಿಗೆ ಅಹಿಂಸೆ, ವಿಶ್ವ ಭ್ರಾತೃತ್ವ, ಗ್ರಾಮ ಸ್ವರಾಜ್ಯ ಸಮಾನತೆ, ಸರಳತೆಯ ಪಾಠ ಹೇಳಿಕೊಟ್ಟ ಮಹಾತ್ಮ ಗಾಂಧೀಜಿ ಇಂದಿಗೂ ಪ್ರಸ್ತುತ’ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವೂಡೆ ಪಿ. ಕೃಷ್ಣ ಅಭಿಪ್ರಾಯಪಟ್ಟರು.
ಇಲ್ಲಿನ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಸೋಮವಾರ ಆರಂಭವಾದ ‘ಗಾಂಧೀಜಿ ಚಿಂತನೆಗಳ ಪ್ರಸ್ತುತತೆ, ಸತ್ಯಶೋಧನೆ 100’ ವಿಷಯದ ಬಗ್ಗೆ ಎರಡು ದಿನಗಳ ರಾಜ್ಯ ಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
‘ಸಮಾಜ, ಸಾಮಾಜಿಕ, ನೈತಿಕ ಸ್ವಾತಂತ್ರ‍್ಯ ಹಾಗೂ ಗಾಂಧಿ ಅವರ ಜೀವನ ಸಂದೇಶವನ್ನು ವಿವೇಚನಾತ್ಮಕವಾಗಿ ಚಿಂತಿಸಿದಲ್ಲಿ ಮೂಲಭೂತವಾದಿಗಳ, ಕೋಮುವಾದಿಗಳ ವಿರುದ್ಧ ಹೋರಾಟ ನಡೆಸಬಹುದು. ಬಹುತ್ವದ ಚಿಂತನೆ ನಮ್ಮ ಶಕ್ತಿಯಾಗಿದೆ. ಗಾಂಧೀ ಪ್ರಪಂಚಕ್ಕೆ ಬೆಳಕಾದವರು’ ಎಂದರು.
‘ವರ್ತಮಾನದಲ್ಲಿ ಗಾಂಧಿ ನಮಗೆ ಪ್ರಸ್ತುತ. ಗಾಂಧೀಜಿಯವರ ಬದುಕಿನ ಸಂದೇಶ ನೀಡಿದ ಸತ್ಯಶೋಧನೆಗೆ 100 ಸಂವತ್ಸರಗಳು ತುಂಬಿರುವ ಆತ್ಮಕಥನವನ್ನು ಇಂದು ಮತ್ತೆ ಮತ್ತೆ ಅಧ್ಯಯನ ಮಾಡಿ ಅರ್ಥೈಸಿಕೊಳ್ಳಬೇಕಿದೆ’ ಎಂದರು.
ಕುವೆಂಪು ವಿ.ವಿ. ಕನ್ನಡ ಅಧ್ಯಾಪಕರ ವೇದಿಕೆಯ ಅಧ್ಯಕ್ಷ ಪ್ರೊ. ಕುಂಸಿ ಉಮೇಶ್ ಮಾತನಾಡಿ, ‘ಗಾಂಧೀಜಿಯವರ ಹೋರಾಟಕ್ಕೆ ಇಂಬುಕೊಟ್ಟು ಮೊದಲು ಸ್ವಾತಂತ್ರ್ಯ ಪಡೆದ ಗ್ರಾಮ ಈಸೂರು. ನಮ್ಮ ನೆರೆಯದ್ದು. ಈ ನಿಟ್ಟಿನಲ್ಲಿ ಈ ವಿಚಾರ ಸಂಕಿರಣ ಸಕಾಲಿಕ’ ಎಂದು ಹೇಳಿದರು.
ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ ಗೌಡ ಮಾತನಾಡಿ, ‘ಗಾಂಧಿ ವಿಚಾರವಾದವು ಇಂದಿನ ವಿದ್ಯಾರ್ಥಿಗಳಿಗೆ ಅಗತ್ಯ ಮತ್ತು ಅನಿವಾರ್ಯತೆ ಇದ್ದು, ವಿಚಾರ ಸಂಕಿರಣ ಹಮ್ಮಿಕೊಂಡಿರುವುದು ಅರ್ಥಪೂರ್ಣ’ ಎಂದರು.
ಕಾರ್ಯಕ್ರಮದ ಸಂಚಾಲಕ ಪ್ರೊ.ಹಾ.ಮ.ನಾಗಾರ್ಜುನ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಎನ್.ರಾಜೇಶ್ವರಿ ಅಧ್ಯಕ್ಷತೆ ವಹಿಸಿದ್ದರು.
ಕೆ.ಬಿ.ಸಿ ಸೇವಾ ಟ್ರಸ್ಟ್ ಅಧ್ಯಕ್ಷ ಕತ್ತಿಗೆ ಚನ್ನಪ್ಪ, ಮಂಡ್ಯ ಕರ್ನಾಟಕ ಸಂಘದ ಕಾರ್ಯದರ್ಶಿಗಳಾದ ಸೋಮಶೇಖರ್, ಉದಯಶಂಕರ್, ಹರೀಶ್ ಕುಮಾರ್ ಹಾಗೂ ಹಿರಿಯ ಗಾಂಧೀವಾದಿ ಪ್ರೊ.ಸೋಮಶೇಖರ್, ರತ್ನಯ್ಯ ಉಪಸ್ಥಿತರಿದ್ದರು.
ಪ್ರೊ.ಶಂಕರೇಗೌಡ, ಪದ್ಮಿನಿ ನಾಗರಾಜು, ಪ್ರೊ. ತುಕಾರಾಂ, ಪ್ರೊ.ಚಿತ್ತಯ್ಯ ಪೂಜಾರ್ ಉಪನ್ಯಾಸ ನೀಡಿದರು. ಪರಿಣತಿ, ವೈಷ್ಣವಿ, ಕಾರ್ತಿಕ, ಸಿಂಧೂ, ಅಮಿತ್, ನವೀನ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.