ADVERTISEMENT

ಮಲೆನಾಡಿನಲ್ಲಿ ಮೊದಲ ಮಲೆನಾಡು ವೈಭವ

ಒಂದೇ ವೇದಿಕೆಯಲ್ಲಿ ಶಾಮಿಯಾನ, ಸೌಂಡ್ಸ್‌, ಡೆಕೋರೇಷನ್‌, ಲೈಟಿಂಗ್ಸ್‌ ಮಾಲೀಕರ ಸಮ್ಮಿಲನ

​ಪ್ರಜಾವಾಣಿ ವಾರ್ತೆ
Published 24 ಜೂನ್ 2018, 14:36 IST
Last Updated 24 ಜೂನ್ 2018, 14:36 IST
ಶಿವಮೊಗ್ಗ ನವುಲೆಯಲ್ಲಿ ನಡೆಯಲಿರುವ ಮಲೆನಾಡು ವೈಭವ ಮಹಾ ಅಧಿವೇಶನ–2018ಕ್ಕೆ ಸಿದ್ಧಗೊಳ್ಳುತ್ತಿರುವ ಬೃಹತ್ ಪೆಂಡಾಲ್.
ಶಿವಮೊಗ್ಗ ನವುಲೆಯಲ್ಲಿ ನಡೆಯಲಿರುವ ಮಲೆನಾಡು ವೈಭವ ಮಹಾ ಅಧಿವೇಶನ–2018ಕ್ಕೆ ಸಿದ್ಧಗೊಳ್ಳುತ್ತಿರುವ ಬೃಹತ್ ಪೆಂಡಾಲ್.   

ಶಿವಮೊಗ್ಗ: ಮಲೆನಾಡಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶಾಮಿಯಾನ, ಸೌಂಡ್ಸ್‌, ಡೆಕೋರೇಷನ್‌ ಮತ್ತು ಲೈಟಿಂಗ್ಸ್‌ ಮಾಲೀಕರನ್ನು ಸಂಘಟಿಸುವ ಸಲುವಾಗಿ ಏರ್ಪಡಿಸಿರುವ ಮಲೆನಾಡು ವೈಭವ ಮಹಾ ಅಧಿವೇಶನಕ್ಕೆ ಜಿಲ್ಲೆ ಸಜ್ಜುಗೊಂಡಿದೆ.

ಈವರೆಗೆ ನಡೆದ 14 ಮಹಾ ಅಧಿವೇಶನಗಳು ಬಯಲು ಸೀಮೆಯಲ್ಲಿಯೇ ನಡೆದಿದ್ದು, ಈ ಬಾರಿ ಮೊದಲ ಬಾರಿಗೆ ಮಲೆನಾಡು ಶಿವಮೊಗ್ಗದಲ್ಲಿ 15ನೇ ಅಧಿವೇಶನ ನಡೆಸಲಾಗುತ್ತಿದೆ. ಈ ಅಧಿವೇಶನ ಶಿವಮೊಗ್ಗ ಸವಳಂಗ ರಸ್ತೆಯ ನವುಲೆ ಸರ್ಜಿ ಕನ್ವೇನ್ಷನ್‌ ಹಾಲ್‌ ಪಕ್ಕದಲ್ಲಿ ಜೂನ್‌ 27 ಮತ್ತು 28 ರಂದು ನಡೆಯುತ್ತಿದ್ದು, ಇದಕ್ಕಾಗಿ 140*300 ಅಡಿ ಜಾಗದಲ್ಲಿ ಬೃಹತ್‌ ಪೆಂಡಾಲ್‌ ನಿರ್ಮಿಸಲಾಗಿದೆ. ಈ ಅಧಿವೇಶನ ಹಲವು ಹೊಸತುಗಳಿಗೆ ಸಾಕ್ಷಿಯಾಗುವ ಸಾಧ್ಯತೆಯಿದೆ.

ಬಾಂಧವ್ಯ ವೃದ್ಧಿ:ದಿನದ 24 ಗಂಟೆಯೂ ಶಾಮಿಯಾನ, ಸೌಂಡ್ಸ್‌, ಡೆಕೋರೇಷನ್‌ ಮತ್ತು ಲೈಟಿಂಗ್ಸ್‌ ಮಾಲೀಕರು ಮತ್ತು ಸದಸ್ಯರು ತಮ್ಮ ಒತ್ತಡದ ಜೀವನದ ನಡುವೆ ಅಸಂಘಟಿತರಾಗಿ ರಾಜ್ಯದ ವಿವಿದೆಡೆ ಚದುರಿಹೋಗಿದ್ದಾರೆ. ಇವರೆಲ್ಲರನ್ನು ಒಂದೇ ವೇದಿಕೆಯಲ್ಲಿ ಸೇರಿಸಲು ಹಾಗೂ ಮಾಲೀಕರ ಬಾಂಧವ್ಯ ವೃದ್ಧಿಸಲು, ಒಬ್ಬರನೊಬ್ಬರು ಗುರುತಿಸಿಕೊಳ್ಳಲು ಈ ಅಧಿವೇಶನ ಮಹತ್ತರವಾದ ಪಾತ್ರ ವಹಿಸಲಿದೆ.

ADVERTISEMENT

ವಿವಿದೆಡೆಯಿಂದ ಆಗಮನ:ಈ ಮಹಾ ಅಧಿವೇಶನದಲ್ಲಿ ರಾಜ್ಯದ ವಿವಿದೆಡೆಯಿಂದ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಮಾಲೀಕರು ಸೇರುವ ನಿರೀಕ್ಷೆಯಿದೆ. ಇವರೆಲ್ಲರೂ ಉಳಿದುಕೊಳ್ಳಲು ಶಿವಮೊಗ್ಗದ ವಿವಿದೆಡೆ ಇರುವ 12 ಕಲ್ಯಾಣ ಮಂಟಪಗಳು, 150 ರಿಂದ 200 ಎಸಿ ರೂಂಗಳ ವ್ಯವಸ್ಥೆ ಮಾಡಲಾಗಿದೆ. ಸೂಕ್ತ ಸಮಯಕ್ಕೆ ಊಟದ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ನಡೆದಿದೆ.

ಪ್ರದರ್ಶನ ಮತ್ತು ಖರೀದಿ: ಈ ಅಧಿವೇಶನ ಕೇವಲ ಮಾಲೀಕರನ್ನು ಸಂಘಟಿಸುವುದು ಮಾತ್ರವಲ್ಲದೇ ತಮ್ಮ ವೃತ್ತಿಗೆ ಅನುಕೂಲವಾಗುವ ಎಲ್ಲಾ ರೀತಿಯ ವಸ್ತುಗಳನ್ನು ಒಂದೇ ವೇದಿಕೆಯಲ್ಲಿ ನೇರ ಖರೀದಿ ಮಾಡಲು, ವಸ್ತುಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶ ಹೊಂದಲಾಗಿದೆ. ಇದಕ್ಕಾಗಿ ದೆಹಲಿ, ಸೂರತ್, ಮೀರತ್, ಸಾಂಗ್ಲಿ, ಹೈದರಬಾದ್, ಅಹಮದಬಾದ್‌ ಸೇರಿದಂತೆ ದೇಶ ಮತ್ತು ರಾಜ್ಯದ ವಿವಿದೆಡೆಯಿಂದ ಬರುವವರು 80ಕ್ಕೂ ಹೆಚ್ಚು ಸ್ಟಾಲ್‌ಗಳನ್ನು ತೆರೆದು ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಾಡಲಿದ್ದಾರೆ.

ಮುಖ್ಯವಾಗಿ ಅತ್ಯಾಧುನಿಕ ರೀತಿಯ ಕೂಲರ್‌, ಧ್ವನಿವರ್ಧಕ ವಸ್ತುಗಳು, ಸ್ಟೈನ್‌ಲೆಸ್‌ ಸ್ಟೀಲ್‌ ಸೋಫಾ, ಕಮರ್ಷಿಯಲ್‌ ಬಾಕ್ಸ್‌, ಐಫೈ ಮ್ಯಾಟ್‌, ವಿವಿಧ ರೀತಿಯ ಪೋಡಿಯಂ, ವಿವಿಧ ರೀತಿಯ ಶಾಮಿಯಾನಗಳು ಹೀಗೆ ಸಾವಿರಾರು ರೀತಿಯ ವಸ್ತುಗಳು ಒಂದೇ ವೇದಿಯಲ್ಲಿ ಸಂಘದ ಸದಸ್ಯರಿಗೆ ಸಿಗುವಂತೆ ಮಾಡಲಾಗಿದೆ.

ಸಂಘದ ಸದಸ್ಯರಿಗೆ ಮಾತ್ರ:ಈ ಅಧಿವೇಶನದಲ್ಲಿ ಕೇವಲ ಸಂಘದ ಸದಸ್ಯರಿಗೆ ಮಾತ್ರವೇ ಭಾಗವಹಿಸಲು, ವಸ್ತುಗಳನ್ನು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರ ಪ್ರವೇಶಕ್ಕೆ ಕಡಿವಾಣ ಹಾಕುವ ಸಲುವಾಗಿ ಸಂಘದ ಸದಸ್ಯರಿಗೆ ಗುರುತಿನ ಚೀಟಿ ನೀಡಲಾಗಿದೆ.

ಬೃಹತ್‌ ಮೆರವಣಿಗೆ:ಮಹಾ ಅಧಿವೇಶನದ ಹಿನ್ನಲೆಯಲ್ಲಿ ಜೂನ್‌ 27 ರಂದು ಬೆಳಿಗ್ಗೆ 10.30ಕ್ಕೆ ಶಿವಮೊಗ್ಗದ ರಾಮಣ್ಣಶ್ರೇಷ್ಠಿ ಪಾರ್ಕ್‌ನಿಂದ ಶಿವಪ್ಪನಾಯಕ ವೃತ್ತ–ಅಮೀರ್‌ ಅಹಮ್ಮದ್‌ ವೃತ್ತ–ಗೋಪಿವೃತ್ತ ಮಾರ್ಗವಾಗಿ ಲಕ್ಷ್ಮೀ ಟಾಕೀಸ್‌ವರೆಗೂ ಬೃಹತ್‌ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ. ಈ ಮೆರವಣಿಗೆಯಲ್ಲಿ ರೋಡ್‌ ಆರ್ಕೆಸ್ಟ್ರಾ, ಡೊಳ್ಳುಕುಣಿತ, ನಾಸ್ತಿಕ್‌ಗೊಂಬೆಗಳ ಪ್ರದರ್ಶನ ಹಾಗೂ 20 ಜಿಲ್ಲೆಗಳಿಂದ 20 ವಾಹನಗಳಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ ಸೇರಿದಂತೆ ವಿವಿಧ ಪ್ರದರ್ಶನ ಇರುತ್ತದೆ.

ವಿವಿಧ ಚರ್ಚೆ:ಮಲೆನಾಡು ವೈಭವದಲ್ಲಿ ಮಾಲೀಕರ ಆಂತರಿಕ ಕುಂದುಕೊರತೆಗಳ ಕುರಿತು ಚರ್ಚೆ, ಎಲ್‌ಐಸಿ, ಕಾರ್ಮಿಕರಲ್ಲಿ ಆಗಬೇಕಾದ ಬದಲಾವಣೆಗಳು, ಕಟ್ಟಡ ಕಾರ್ಮಿಕರಂತೆ ತಮ್ಮ ಕಾರ್ಮಿಕರಿಗೂ ಜೀವವಿಮೆ ಹೀಗೆ ಅನೇಕ ವಿಷಯಗಳನ್ನು ಚರ್ಚಿಸಿ ತಮ್ಮ ಬಹುವರ್ಷಗಳ ಬೇಡಿಕೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತಿದೆ ಎಂದು ಶಿವಮೊಗ್ಗ ಜಿಲ್ಲಾ ಶಾಮಿಯಾನಾ ಆ್ಯಂಡ್ ಲೈಟಿಂಗ್ ಡೆಕೋರೇಷನ್‌ ಮಾಲೀಕರ ಸಂಘದ ಅಧ್ಯಕ್ಷ ಡಿ.ರಮಣಯ್ಯ ಹಾಗೂ ಜಿಲ್ಲಾ ಕಾರ್ಯದರ್ಶಿ ಟಿ.ಎಸ್.ಭವಾನಿಕುಮಾರ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.