ADVERTISEMENT

ಮಲೆನಾಡು ಗಿಡ್ಡ ತಳಿ ರಾಸುಗಳು ಸಂರಕ್ಷಣೆಗೊಂದು ಎಫ್‌ಪಿಒ

ದೇಸಿ ರಾಸು ರಕ್ಷಣೆಯ ಉದ್ದೇಶದ ರಾಜ್ಯದ ಮೊದಲ ರೈತ ಉತ್ಪಾದಕರ ಕಂಪೆನಿ

ವೆಂಕಟೇಶ ಜಿ.ಎಚ್.
Published 3 ನವೆಂಬರ್ 2025, 4:28 IST
Last Updated 3 ನವೆಂಬರ್ 2025, 4:28 IST
<div class="paragraphs"><p>ಮಲೆನಾಡು ಗಿಡ್ಡ ತಳಿಯ ರಾಸು</p></div>

ಮಲೆನಾಡು ಗಿಡ್ಡ ತಳಿಯ ರಾಸು

   

ಶಿವಮೊಗ್ಗ: ಮಲೆನಾಡಿನ ವಿಶಿಷ್ಟ ಗೋವು ತಳಿ ಮಲೆನಾಡು ಗಿಡ್ಡದ ಸಂರಕ್ಷಣೆ ಹಾಗೂ ಅದರ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಲು ಸಾಗರದಲ್ಲಿ ರೈತ ಉತ್ಪಾದಕರ ಸಂಸ್ಥೆ (ಎಫ್‌ಪಿಒ) ಆರಂಭವಾಗಿದೆ.

ಪಶು ಸಂಗೋಪನೆ ಇಲಾಖೆ ನೇತೃತ್ವದಲ್ಲಿ ರಾಸಿನ ಸಂರಕ್ಷಣೆಗೆ ಆರಂಭವಾದ ರಾಜ್ಯದಲ್ಲಿಯೇ ಮೊದಲ ಎಫ್‌ಪಿಒ ಎಂಬ ಶ್ರೇಯ ತನ್ನದಾಗಿಸಿಕೊಂಡಿದೆ.

ADVERTISEMENT

ಸಾಗರದ ಜೋಸೆಫ್‌ ನಗರದಲ್ಲಿ ಮಲೆನಾಡು ಗಿಡ್ಡದ ಎಫ್‌ಪಿಒ ಕಚೇರಿ ಇದೆ. ತಾಲ್ಲೂಕಿನಲ್ಲಿ 500ಕ್ಕೂ ಹೆಚ್ಚು ಷೇರುದಾರರನ್ನು ಹೊಂದಿದೆ. ಗೋಮಯ ಹಾಗೂ ಗೋಮೂತ್ರ ಬಳಸಿ ಹಣತೆ, ಅಗರಬತ್ತಿ, ವಿಭೂತಿ, ಸಾಬೂನು, ಹಲ್ಲುಪುಡಿ, ನೋವು ನಿವಾರಕ ಎಣ್ಣೆ, ಧೂಪ, ಗೋ ಅರ್ಕ, ದ್ರವ ಜೀವಾಮೃತ ಸೇರಿ 18ಕ್ಕೂ ಹೆಚ್ಚು ಉತ್ಪನ್ನ ಸಿದ್ಧಪಡಿಸಲಾಗುತ್ತಿದೆ ಅದಕ್ಕಾಗಿ ಷೇರುದಾರರಿಗೆ ತರಬೇತಿ ಕೊಟ್ಟಿದ್ದಾರೆ.

ಹಸುವಿನ ಗೊಬ್ಬರ ಕೂಡ ಇಲ್ಲಿ ಮಾರಾಟ ಮಾಡಲಾಗುತ್ತಿದೆ. ಕೆಲವರಿಗೆ ಕೃಷಿ ಭೂಮಿ ಇಲ್ಲ. ಅವರ ಮನೆಯಲ್ಲೂ ದನಗಳು ಇವೆ. ಅವರಿಗೆ ವೈಜ್ಞಾನಿಕವಾಗಿ ಗೊಬ್ಬರ ಸಿದ್ಧಪಡಿಸುವ ತರಬೇತಿ ಕೊಟ್ಟಿದ್ದೇವೆ. ಜೊತೆಗೆ ಎರೆಗೊಬ್ಬರ, ಸಾವಯವ ಗೊಬ್ಬರ ಕೂಡ ಸಿದ್ಧಪಡಿಸಿಕೊಡುತ್ತಾರೆ. ಆ ಉತ್ಪನ್ನಕ್ಕೆ ಉತ್ತಮ ಬೆಲೆ ಕೊಡಿಸಲಾಗುತ್ತಿದೆ. 

ಎಫ್‌ಪಿಒ ಮೂಲಕ ಷೇರುದಾರರಿಂದ ಅಡಿಕೆ ಹೊರತಾಗಿ ಬೇರೆ ಕೃಷಿ ಉತ್ಪನ್ನಗಳ ಖರೀದಿಸಿ ಸಂಸ್ಕರಿಸಿ ಮಾರಾಟ ಮಾಡಲಾಗುತ್ತಿದೆ. ಅದರಲ್ಲಿ ಸಾವಯವ ಬೆಲ್ಲ, ಅಕ್ಕಿ, ಸಿರಿ ಧಾನ್ಯಗಳು ಸೇರಿವೆ. ಹಾಲಿನ ಉತ್ಪನ್ನಗಳಾದ ಮೊಸರು, ಮಜ್ಜಿಗೆ, ತುಪ್ಪ, ಬೆಣ್ಣೆಯ ಜೊತೆಗೆ ಮೌಲ್ಯವೆರ್ಧಿತ ಉಪ್ಪಿನ ಕಾಯಿ, ಚಟ್ನಿಪುಡಿ, ಲೇಹ್ಯ ಎಲ್ಲವನ್ನೂ ‘ಅಮೃತಸಾರ’ ಬ್ರಾಂಡ್‌ ಅಡಿಯಲ್ಲಿ ಮಾರಾಟ ಮಾಡಲಾಗುತ್ತಿದೆ.

‘ಎಫ್‌ಪಿಒದ ಕೆಲವು ನಿರ್ದೇಶಕರ ಬಳಿ 100ರಿಂದ 120 ಮಲೆನಾಡು ಗಿಡ್ಡ ತಳಿಯ ಹಸುಗಳು ಇವೆ. ಹಸು ಸಾಕಲು ಬಯಸುವವರು ಸಂಪರ್ಕಿಸಿದರೆ ಅವರಿಗೂ ಕೊಡಿಸುತ್ತೇವೆ’ ಎಂದು ನಾಗೇಂದ್ರ ಸಾಗರ ಹೇಳುತ್ತಾರೆ. ಈಗ ಹೊಸದಾಗಿ ಎ2 ಹೆಸರಿನ ದೇಸಿ ಹಸುಗಳ ಹಾಲಿನಿಂದ ಸಿದ್ಧಪಡಿಸಿದ ಐಸ್‌ಕ್ರೀಂ ಕೂಡ ಮಾರುಕಟ್ಟೆಗೆ ಪರಿಚಯಿಸಿದ್ದಾರೆ.

ಉತ್ತಮ ವಹಿವಾಟು

‘ಮಲೆನಾಡು ಗಿಡ್ಡ ತಳಿ ಸಂರಕ್ಷಣೆ ಉದ್ದೇಶದ ಈ ಎಫ್‌ಪಿಒ ಎರಡು ವರ್ಷಗಳ ಹಿಂದೆ ಆರಂಭವಾಗಿದೆ. ಕಳೆದ ವರ್ಷ ₹24 ಲಕ್ಷ ಮೊತ್ತದ ವಹಿವಾಟು ನಡೆಸಿದೆ. ಈ ವರ್ಷ ವಹಿವಾಟು, ಲಾಭಾಂಶ ಎರಡೂ ಹೆಚ್ಚಳಗೊಳ್ಳುವ ನಿರೀಕ್ಷೆ ಇದೆ’ ಎಂದು ನಾಗೇಂದ್ರ ಸಾಗರ ವಿಶ್ವಾಸ ವ್ಯಕ್ತಪಡಿಸುತ್ತಾರೆ. 

ಸಾಗರದ ಜೋಸೆಫ್ ನಗರದಲ್ಲಿರುವ ಮಲೆನಾಡು ಗಿಡ್ಡ ತಳಿ ರೈತ ಉತ್ಪಾದಕರ ಕಂಪೆನಿ ಕಚೇರಿ
ರೈತ ಉತ್ಪಾದಕರ ಕಂಪೆನಿಯಿಂದ ಮಲೆನಾಡು ಗಿಡ್ಡ ರಾಸಿನ ಕ್ಷೀರ ಗೋಮಯ ಹಾಗೂ ಗವ್ಯ ಬಳಸಿ ಸಿದ್ಧಪಡಿಸಿದ ಉತ್ಪನ್ನಗಳು

ಮಲೆನಾಡು ಗಿಡ್ಡ ತಳಿಯ ಕ್ಷೀರ ಗವ್ಯ ಹಾಗೂ ಕೃಷಿಗೆ ಪೂರಕ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಕೊಡಿಸಿ ಅವುಗಳ ಸಾಕಣೆ ಪ್ರೋತ್ಸಾಹಿಸುವ ಆಶಯದಿಂದ ಈ ಎಫ್‌ಪಿಒ ಆರಂಭಿಸಿದ್ದೇವೆ. ಷೇರುದಾರರಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ

–ನಾಗೇಂದ್ರ ಸಾಗರ ಮಲೆನಾಡು ಗಿಡ್ಡ ರೈತ ಉತ್ಪಾದಕ ಕಂಪೆನಿ ಅಧ್ಯಕ್ಷ

ಮಲೆನಾಡು ಭಾಗದ ದೇಸಿ ತಳಿಯ ಹಸುವಿನ ಸಂರಕ್ಷಣೆಗೆ ರಾಜ್ಯದಲ್ಲಿಯೇ ಮೊದಲ ಬಾರಿಗೆ ರೈತ ಉತ್ಪಾದಕರ ಸಂಸ್ಥೆ ಆರಂಭಿಸಲಾಗಿದೆ. ಇದಕ್ಕೆ ಇಲಾಖೆಯಿಂದ ಅಗತ್ಯ ಬೆಂಬಲ ನೀಡಿದ್ದೇವೆ.

–ಡಾ.ಬಾಬು ರತ್ನಾ ಉಪನಿರ್ದೇಶಕರು ಶಿವಮೊಗ್ಗ ಪಶುಸಂಗೋಪನಾ ಇಲಾಖೆ

ಅಳಿವಿನಂಚಿನ ತಳಿ ಮಲೆನಾಡು ಗಿಡ್ಡ

‘ಮಲೆನಾಡು ಗಿಡ್ಡ ಅಳಿವಿನಂಚಿನ ಗೋ ತಳಿ. ಮಲೆನಾಡಿನ ಹವಾಗುಣ ಪರಿಸರಕ್ಕೆ ಹೊಂದಿಕೆಯಾದ ತಳಿ. ಆದರೆ ಈಗ ಗೋಮಾಳ ಸೊಪ್ಪಿನ ಬೆಟ್ಟಗಳು ಅತಿಕ್ರಮಣಗೊಂಡಿರುವ ಕಾರಣ ಸ್ವಾಭಾವಿಕವಾಗಿ ಹಸು ಸಾಕಾಣಿಕೆ ಕಡಿಮೆ ಆಗಿದೆ. ಇರುವ ಹಸುಗಳನ್ನಾದರೂ ಉಳಿಸಿ ಬೆಳೆಸುವ ಉದ್ದೇಶದಿಂದ ಎಫ್‌ಪಿಒ ಆರಂಭಿಸಿದ್ದೇವೆ’ ಎಂದು ಸಂಸ್ಥೆಯ ಅಧ್ಯಕ್ಷ ಚಿಪ್ಪಳಿಯ ನಾಗೇಂದ್ರ ಸಾಗರ ಹೇಳುತ್ತಾರೆ. ‘ಮಲೆನಾಡು ಗಿಡ್ಡ ಹೆಚ್ಚು ಹಾಲು ಕೊಡುವ ತಳಿ ಅಲ್ಲ. ಹಾಲಿನ ವಿಚಾರದಲ್ಲೂ ರೈತರಿಗೆ ಲಾಭದಾಯಕ ಅಲ್ಲ. ಹೀಗಾಗಿ ಬರೀ ಕ್ಷೀರೋತ್ಪನ್ನದ ವಹಿವಾಟು ಮಾತ್ರವಲ್ಲ ಗವ್ಯೋತ್ಪನ್ನ ಕೃಷಿ ಉತ್ಪನ್ನಗಳ ವಹಿವಾಟು ಕೂಡ ಎಫ್‌ಪಿಒ ಮೂಲಕ ಮಾಡುತ್ತಿದ್ದೇವೆ. ಅದಕ್ಕಾಗಿ ‘ಅಮೃತಸಾರ’ ಎಂಬ ಬ್ರಾಂಡ್ ಹುಟ್ಟುಹಾಕಿದ್ದೇವೆ’ ಎನ್ನುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.