ಶಿವಮೊಗ್ಗ: ಮಲೆನಾಡಿನಲ್ಲಿ ಶುಂಠಿ ಬೆಳೆಗೆ ಬರೀ ಬೆಂಕಿ ರೋಗ (ಫ್ರಾಕ್ಷಿ ಪೈರಿಕ್ಯುಲೇರಿಯಾ)ದೊಂದಿಗೆ ದುಂಡಾಣು ಎಲೆ ಮಚ್ಚೆ ರೋಗ ಮತ್ತು ಎಲೆ ಚುಕ್ಕೆ ರೋಗಗಳು (ಕೊಲೆಟೋಟ್ರೆಂಕೊಮ್) ವ್ಯಾಪಕವಾಗಿ ಹರಡುತ್ತಿರುವ ಗಂಭೀರ ಸಂಗತಿಯನ್ನು ಇಲ್ಲಿನ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ ಪತ್ತೆ ಮಾಡಿದೆ.
ಶಿಲೀಂದ್ರ ಬಾಧಿತ ಬೆಂಕಿರೋಗದ ಕಾರಣ ರಾತ್ರಿ ಕಳೆದು ಬೆಳಗಾಗುವುದರೊಳಗೆ ಬೆಳೆ ಬಾಡುತ್ತಿದೆ. ಅದಕ್ಕೆ ಔಷಧ ಕೊಡುತ್ತಿದ್ದ ಸಮಯದಲ್ಲೇ ಶುಂಠಿಗೆ ಇನ್ನೂ ಎರಡು ಬಾಧೆಗಳು ಕಾಡುತ್ತಿವೆ. ಇದರಿಂದ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ.
‘ದುಂಡಾಣುವಿನ ಎಲೆ ಮಚ್ಚೆ ರೋಗ ಬಾಧಿತ ಶುಂಠಿ ಗಿಡದ ಎಲೆ ಮತ್ತು ಕಾಂಡದ ಮೇಲೆ ನೀರಿನಿಂದ ಆವೃತವಾದ ಚಿಕ್ಕ ಗಾತ್ರದ ಮಚ್ಚೆಗಳು ಕಾಣಿಸುತ್ತವೆ. ಫ್ರಾಕ್ಸಿ ಪೈರಿಕ್ಯುಲೇರಿಯಾ ಬಾಧಿತ ಶುಂಠಿ ಗಿಡದ ಎಲೆ ಮತ್ತು ಕಾಂಡಗಳ ಮೇಲೆ ವಜ್ರಾಕಾರ ಅಥವಾ ಕಣ್ಣಿನ ಆಕಾರದ ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ. ಎಲೆಚುಕ್ಕೆ ಬಾಧಿತ ಗಿಡಗಳ ಎಲೆ ಹಾಗೂ ಕಾಂಡದ ಮೇಲೆ ಚಿಕ್ಕ ಗಾತ್ರದ ಚುಕ್ಕೆಗಳು ಕಾಣಿಸಿಕೊಂಡು ನಂತರ ತಿಳಿ ಹಳದಿ ಬಣ್ಣಗಳಿಂದ ಆವೃತವಾಗಿ ಮಧ್ಯದಲ್ಲಿ ಚಿಕ್ಕ ಗಾತ್ರದ ಕಪ್ಪು ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ’ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಸಸ್ಯರೋಗ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಶ್ರೀಶೈಲ ಸೊನ್ಯಾಳ ಮಾಹಿತಿ ನೀಡಿದರು.
ಹವಾಮಾನ ಬದಲಾವಣೆಯಿಂದಾಗಿ ಶುಂಠಿಯ ಗಡ್ಡೆ ರೂಪುಗೊಳ್ಳುವ ಮುನ್ನವೇ ವ್ಯಾಪಕ ಮಳೆಯಾಗಿದ್ದು, ಅದು ರೋಗಬಾಧೆ ಉಲ್ಬಣಗೊಳ್ಳಲು ಕಾರಣ ಎಂದು ವಿಜ್ಞಾನಿಗಳು ಹೇಳುತ್ತಾರೆ. ರೋಗಕ್ಕೆ ತುತ್ತಾಗಿರುವ ಶುಂಠಿ ಬೆಳೆಯ ಎಲೆಗಳ ಮೇಲೆ ಕಪ್ಪು ಚುಕ್ಕೆಗಳಾಗಿ ನಂತರ ಎಲೆಗಳು ಹಳದಿಯಾಗಿ ಪೂರ್ತಿ ಸುಟ್ಟಂತೆ ಭಾಸವಾಗುತ್ತದೆ.
‘ಕೆಲವೊಂದು ಶುಂಠಿ ತೋಟಗಳು ಸಂಪೂರ್ಣ ನಾಶವಾಗಿವೆ. ಶುಂಠಿಯನ್ನು ಸಹಜವಾಗಿ ಸಣ್ಣ ಪ್ರಮಾಣದಲ್ಲಿ ಬಾಧಿಸುತ್ತಿದ್ದ ಈ ರೋಗಗಳು ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಂಡು ಮಾರಣಾಂತಿಕವಾಗಿವೆ’ ಎಂಬುದು ವಿಜ್ಞಾನಿಗಳ ಅಭಿಮತ.
‘ರೋಗ ಬಾಧೆ ನಿವಾರಣೆಗೆ ರೈತರು ಶಿಲೀಂದ್ರ ನಾಶಕದ ಜೊತೆಗೆ ಅಮೈನೋ ಆಮ್ಲ ಹೊಂದಿದ ಹಾಗೂ ಸಮುದ್ರ ಪಾಚಿ ಉತ್ಪನ್ನಗಳನ್ನು ಇನ್ನಿತರ ರಾಸಾಯನಿಕಗಳನ್ನು ಅನವಶ್ಯಕವಾಗಿ ಮಿಶ್ರಣ ಮಾಡುತ್ತಿದ್ದಾರೆ. ಇದರಿಂದ ಶುಂಠಿ ಬೆಳೆಗೆ ಸಿಂಪಡಿಸಿದ ಶಿಲೀಂದ್ರ ನಾಶಕಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ’ ಎಂದು ವಿಶ್ವವಿದ್ಯಾಲಯದ ಸಸ್ಯರೋಗ ಶಾಸ್ತ್ರಜ್ಞ ಪ್ರೊ.ಉಲ್ಲಾಸ್ ಹೇಳುತ್ತಾರೆ. ಹೀಗಾಗಿ ಟಬುಕೋನ ಜೋಲ್ ಶಿಲೀಂದ್ರ ನಾಶಕದೊಂದಿಗೆ ಯಾವುದೇ ರೀತಿಯ ಕೀಟ ಹಾಗೂ ಬ್ಯಾಕ್ಟೀರಿಯ ನಾಶಕಗಳನ್ನೂ ಮಿಶ್ರಣ ಮಾಡಿ ಸಿಂಪರಣೆ ಮಾಡದಂತೆ ಸಲಹೆ ನೀಡುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.