ADVERTISEMENT

ತೀರ್ಥಹಳ್ಳಿ | ತುರ್ತು ಸೇವೆ ಆಂಬುಲೆನ್ಸ್‌ಗೆ 108 ಸಮಸ್ಯೆ

ನಿರಂಜನ ವಿ.
Published 24 ಫೆಬ್ರುವರಿ 2024, 6:38 IST
Last Updated 24 ಫೆಬ್ರುವರಿ 2024, 6:38 IST
<div class="paragraphs"><p><strong>ತೀರ್ಥಹಳ್ಳಿಯ 108 ಆಂಬುಲೆನ್ಸ್</strong></p></div>

ತೀರ್ಥಹಳ್ಳಿಯ 108 ಆಂಬುಲೆನ್ಸ್

   

ತೀರ್ಥಹಳ್ಳಿ: ಆರೋಗ್ಯ ತುರ್ತು ಸಂದರ್ಭ ಸಾರ್ವಜನಿಕರ ನೆರವಿಗೆ ಧಾವಿಸುವ 108 ಆಂಬುಲೆನ್ಸ್‌ ಕೆಟ್ಟು ನಿಲ್ಲುವ ಪ್ರಸಂಗಗಳು ಹೆಚ್ಚುತ್ತಿದ್ದರೂ ಸಂಬಂಧಪಟ್ಟವರು ದುರಸ್ತಿಗೆ ಆದ್ಯತೆ ನೀಡುತ್ತಿಲ್ಲ.

‌ಮುಖ್ಯವಾಗಿ ಆಂಬುಲೆನ್ಸ್‌ಗಳ ಟಯರ್‌ಗಳು ಸವೆದರೂ ಹೊಸ ಟಯರ್‌ ಹಾಕಿಸುತ್ತಿಲ್ಲ. ಇದರಿಂದಾಗಿ ತುರ್ತು ಕರೆಗೆ ಓಗೊಟ್ಟು ರೋಗಿಗಳನ್ನು ಹೊತ್ತು ಸಾಗುವಾಗ ಆಸ್ಪತ್ರೆಯತ್ತ ಮಾರ್ಗದಲ್ಲೇ ವಾಹನಗಳು ಕೆಟ್ಟು ನಿಲ್ಲುತ್ತಿವೆ. ಹೀಗಾಗಿ ರೋಗಿಗಳ ಪ್ರಾಣ ಉಳಿಸಲು ಆರೋಗ್ಯ ಸಿಬ್ಬಂದಿ ಕಸರತ್ತು ನಡೆಸುವಂತಾಗಿದೆ.

ADVERTISEMENT

ಇಲ್ಲಿನ ಜಯಚಾಮರಾಜೇಂದ್ರ ತಾಲ್ಲೂಕು ಆಸ್ಪತ್ರೆ ಮತ್ತು ಮಾಳೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಎರಡು 108 ವಾಹನ ಕಾರ್ಯ ನಿರ್ವಹಿಸುತ್ತಿವೆ. ಆಸ್ಪತ್ರೆಯ ಕಾರ್ಯ ವ್ಯಾಪ್ತಿಗೆ ಅನುಗುಣವಾಗಿ ಆಂಬುಲೆನ್ಸ್‌ ಸೇವೆ ವಿಭಜಿಸಲಾಗಿದೆ. ಆದರೆ ಕೋಣಂದೂರು, ಮೇಗರವಳ್ಳಿ, ಕಟಗಾರು (ಕಟ್ಟೇಹಕ್ಕಲು) ಭಾಗದಲ್ಲಿ ಆಸ್ಪತ್ರೆಗಳಿದ್ದರೂ ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್‌ಗಳಿಗೆ ಅಂಗಲಾಚುವ ಪರಿಸ್ಥಿತಿ ಇದೆ.

ರೋಗಿಗಳನ್ನು ಆಸ್ಪತ್ರೆಗಳಿಗೆ ಕೊಂಡೊಯ್ಯುವ ಆಂಬುಲೆನ್ಸ್ ವಾಹನದ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ಗುತ್ತಿಗೆ ಅವಧಿ ಮುಕ್ತಾಯದ ಹಂತದಲ್ಲಿದ್ದು, ವಾಹನ ರಿಪೇರಿ ಮಾಡಿಸದೇ ದಿನದೂಡುತ್ತಿದ್ದಾರೆ. ಮೂರು ತಿಂಗಳಿನಿಂದ ವಾಹನದ ಟಯರ್‌ಗಳು ತಂತಿ ಕಾಣಿಸುವಷ್ಟು ಸವೆದಿವೆ. ಹೊಸ ಟಯರ್‌ ಹಾಕಿಸದೇ ರೋಗಿಗಳ ಪ್ರಾಣದ ಜೊತೆಗೆ ಚೆಲ್ಲಾಟ ಆಡುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ 25 ಆಂಬುಲೆನ್ಸ್‌ಗಳ ಸೇವೆ ಕಲ್ಪಿಸಲಾಗಿದೆ. ಪ್ರತಿ 10,000 ಕಿ.ಮೀ.ಗೆ ಸರ್ವಿಸ್‌ ನಿಗದಿಪಡಿಸಲಾಗಿದೆ. ಶಿವಮೊಗ್ಗದ ಫರ್ಸ್‌ ಮೋಟರ್ಸ್‌ ಸಂಸ್ಥೆ ಸರ್ವೀಸ್‌ ಜವಾಬ್ದಾರಿ ನಿಭಾಯಿಸುತ್ತಿದೆ. ಆಂಬುಲೆನ್ಸ್‌ ಚಾಲಕರು ದುರಸ್ತಿಯ ರಸೀದಿ ನೀಡಿದರೆ ಹಣ ಮಂಜೂರಾಗುತ್ತದೆ. ನಿತ್ಯವೂ ಬೇಕಾಗುವ ಡೀಸೆಲ್‌ ಮೊತ್ತವನ್ನು ಸರ್ಕಾರವೇ ಭರಿಸುತ್ತದೆ.

ಕಗ್ಗಂಟಿನಲ್ಲಿ ಆಸ್ಪತ್ರೆ ಆಂಬುಲೆನ್ಸ್‌..

‘ಕೋಣಂದೂರು, ಕನ್ನಂಗಿ ಸಮುದಾಯ ಆಸ್ಪತ್ರೆ, ಮೇಗರವಳ್ಳಿ, ಕಟಗಾರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಸ್ಪತ್ರೆಯದ್ದೇ ಆಂಬುಲೆನ್ಸ್‌ ಸೌಲಭ್ಯ ಇದೆ. ತೀರಾ ತುರ್ತು ಸಂದರ್ಭಗಳನ್ನು ಹೊರತುಪಡಿಸಿ ಸಮುದಾಯದ ಆರೋಗ್ಯ ಕಾಪಾಡಲು ಹಳ್ಳಿಗಳಿಗೆ ಅಂಬುಲೆನ್ಸ್‌ಗಳು ತೆರಳುತ್ತಲೇ ಇಲ್ಲ. ಆಸ್ಪತ್ರೆಯ ಆಂಬುಲೆನ್ಸ್‌ ಗ್ರಾಮೀಣ ಭಾಗಕ್ಕೆ ತೆರಳಲು ಸ್ಥಳೀಯ ವೈದ್ಯರ ಶಿಫಾರಸ್ಸು ಅಗತ್ಯ. 108 ಆಂಬುಲೆನ್ಸ್‌ಗಳ ಸೇವೆಗೆ ಹೋಲಿಸಿದರೆ ಆಸ್ಪತ್ರೆ ಆಂಬುಲೆನ್ಸ್‌ ಜನ ಸಮುದಾಯದಿಂದ ದೂರವೇ ಉಳಿದಿದೆ. ಆಂಬುಲೆನ್ಸ್‌ ಸೇವೆ ಬೇಕೆಂದರೆ ಸಮುದಾಯ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ಪಡೆಯಬೇಕಾದ ತಾಂತ್ರಿಕ ತೊಂದರೆ ಎದುರಾಗಿದೆ’ ಎಂದು ಸಂದರ್ಶ ಮೇಗರವಳ್ಳಿ ದೂರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.