
ಸಾಗರ: ಇಲ್ಲಿನ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದ 6 ನೇ ದಿನವಾದ ಭಾನುವಾರ ದೇವಿಯ ದರ್ಶನ ಪಡೆಯಲು ಜನಸಾಗರವೆ ಹರಿದು ಬಂದಿತ್ತು. ಬೆಳಗಿನ ಜಾವ 6 ಗಂಟೆಯಿಂದಲೆ ನಗರದ ಬಹುತೇಕ ರಸ್ತೆಗಳಲ್ಲಿ ಜನ ಸಂದಣಿ ವಿಪರೀತವಾಗಿದ್ದು ವಾಹನಗಳು ಸಂಚರಿಸುವುದು ಕಷ್ಟಕರವಾಗಿತ್ತು.
ಭಾನುವಾರ ರಜಾ ದಿನವಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಾರೆ ಎಂಬ ನಿರೀಕ್ಷೆಯಿಂದ ಪೊಲೀಸ್ ಆಡಳಿತ ವಾಹನ ಸಂಚಾರದ ನಿಯಂತ್ರಣಕ್ಕೆ ಹೆಚ್ಚಿನ ಸಿಬ್ಬಂದಿ ನಿಯೋಜಿಸಿದ್ದರೂ ಸುಗಮ ಸಂಚಾರ ವ್ಯವಸ್ಥೆಗೆ ಹರಸಾಹಸ ಪಡಬೇಕಾಯಿತು.
ಮಧ್ಯಾಹ್ನ ಹಾಗೂ ಸಂಜೆಯ ವೇಳೆ ದೇವಸ್ಥಾನ ಹಾಗೂ ಅಮ್ಯೂಸ್ ಮೆಂಟ್ ಪಾರ್ಕ್ ಗೆ ಸಂಪರ್ಕ ಕಲ್ಪಿಸುವ ನಗರದ ವಿವಿಧ ವೃತ್ತಗಳಲ್ಲಿ ಟ್ರಾಫಿಕ್ ಜಾಮ್ ಆಗಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಸಂಸದ ಬಿ.ವೈ.ರಾಘವೇಂದ್ರ ತಮ್ಮ ಪಕ್ಷದ ಪ್ರಮುಖರೊಂದಿಗೆ ಮಾರಿಕಾಂಬಾ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದರು. ನಂತರ ಅವರು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ನಿವಾಸಕ್ಕೆ ತೆರಳಿ ಅವರ ಯೋಗಕ್ಷೇಮ ವಿಚಾರಿಸಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗೋಪಾಲಕೃಷ್ಣ ಬೇಳೂರು ವಿಜಯಶಾಲಿಯಾದರೆ ಮಾರಿಕಾಂಬಾ ದೇವಿಗೆ ಬೆಳ್ಳಿಯ ಕಿರೀಟ ತೊಡಿಸುವುದಾಗಿ ಎಪಿಎಂಸಿ ಮಾಜಿ ಅಧ್ಯಕ್ಷ ಚೇತನ್ ರಾಜ್ ಕಣ್ಣೂರು ಹರಕೆ ಹೊತ್ತಿದ್ದರು. ಆ ಪ್ರಕಾರ ಇಂದು ಅವರು ಶಾಸಕ ಬೇಳೂರು ಸಮ್ಮುಖದಲ್ಲಿ ತವರುಮನೆ ಮಾರಿಕಾಂಬಾ ದೇವಾಲಯದಲ್ಲಿ ದೇವಿಗೆ ಬೆಳ್ಳಿಯ ಕಿರೀಟ ಸಮರ್ಪಿಸಿದರು.
ರಾಜ್ಯ ಬಿಜೆಪಿ ಉಪಾಧ್ಯಕ್ಷ ಎಚ್.ಹಾಲಪ್ಪ ಹರತಾಳು ತಮ್ಮ ಕುಟುಂಬದ ಸದಸ್ಯರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಮಾರಿಕಾಂಬಾ ದೇವಸ್ಥಾನದ ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ, ಕಾರ್ಯದರ್ಶಿ ಬಿ.ಗಿರಿಧರರಾವ್, ಉಪಾಧ್ಯಕ್ಷ ಸುಂದರ್ ಸಿಂಗ್, ಖಜಾಂಚಿ ನಾಗೇಂದ್ರ ಕುಮಟಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.