ADVERTISEMENT

ಜಾತ್ರೆಯ ಉಳಿದ ಹಣ ಸಮಾಜಮುಖಿ ಕಾರ್ಯಕ್ಕೆ ಬಳಕೆ: ಶಾಸಕ ಗೋಪಾಲಕೃಷ್ಣ ಬೇಳೂರು

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 3:52 IST
Last Updated 16 ಫೆಬ್ರುವರಿ 2026, 3:52 IST
ಸಾಗರದ ಮಾರಿಕಾಂಬಾ ದೇವಸ್ಥಾನದಲ್ಲಿ ಭಾನುವಾರ ಶಾಸಕ ಗೋಪಾಲಕೃಷ್ಣ ಬೇಳೂರು ಅಧ್ಯಕ್ಷತೆಯಲ್ಲಿ ದೇವಸ್ಥಾನದ ಸಮಿತಿಯ ಪ್ರಮುಖರ, ಅಧಿಕಾರಿಗಳ ಸಮಾಲೋಚನಾ ಸಭೆ ನಡೆಯಿತು.
ಸಾಗರದ ಮಾರಿಕಾಂಬಾ ದೇವಸ್ಥಾನದಲ್ಲಿ ಭಾನುವಾರ ಶಾಸಕ ಗೋಪಾಲಕೃಷ್ಣ ಬೇಳೂರು ಅಧ್ಯಕ್ಷತೆಯಲ್ಲಿ ದೇವಸ್ಥಾನದ ಸಮಿತಿಯ ಪ್ರಮುಖರ, ಅಧಿಕಾರಿಗಳ ಸಮಾಲೋಚನಾ ಸಭೆ ನಡೆಯಿತು.   

ಸಾಗರ: ಇಲ್ಲಿನ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ 9 ದಿನಗಳ ಕಾಲ ಯಶಸ್ವಿಯಾಗಿ ನಡೆದಿದ್ದು ಜಾತ್ರೆಯಿಂದ ಉಳಿಯುವ ಹಣವನ್ನು ದೇವಸ್ಥಾನದ ಸಮಿತಿಯ ಮೂಲಕ ಸಮಾಜಮುಖಿ ಕಾರ್ಯಗಳಿಗೆ ಬಳಕೆ ಮಾಡಲಾಗುವುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ.

ಇಲ್ಲಿನ ಮಾರಿಕಾಂಬಾ ದೇವಸ್ಥಾನದಲ್ಲಿ ಭಾನುವಾರ ನಡೆದ ದೇವಸ್ಥಾನದ ಸಮಿತಿಯ ಪ್ರಮುಖರ, ಅಧಿಕಾರಿಗಳ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಿತಿ ವತಿಯಿಂದ ಶಿಕ್ಷಣ ಸಂಸ್ಥೆ ಹಾಗೂ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಈಗಾಗಲೆ ಚಾಲನೆ ದೊರಕಿದೆ ಎಂದು ಅವರು ಮಾಹಿತಿ ನೀಡಿದರು.

ಕೆಲವೊಂದು ಸಣ್ಣಪುಟ್ಟ ಲೋಪದೋಷಗಳ ನಡುವೆಯೂ ಜಾತ್ರಾ ಮಹೋತ್ಸವ ಯಶಸ್ವಿಯಾಗಿ ನಡೆದಿದೆ. ಪ್ರತಿದಿನ ಲಕ್ಷಕ್ಕೂ ಹೆಚ್ಚು ಜನ ಭಕ್ತರು ಭೇಟಿ ನೀಡಿದ್ದು ಕಾನೂನು ಮತ್ತು ಸುವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಅತ್ಯಂತ ಸಮರ್ಪಕವಾಗಿ ನಿರ್ವಹಿಸಿದೆ. ತ್ಯಾಜ್ಯ ವಿಲೇವಾರಿ ಕಾರ್ಯವನ್ನು ನಗರಸಭೆ ಸಿಬ್ಬಂದಿ ಮೆಚ್ಚುವ ರೀತಿಯಲ್ಲಿ ಮಾಡಿದ್ದಾರೆ. ಅವರಿಗೆ ಪ್ರತ್ಯೇಕ ಕಾರ್ಯಕ್ರಮ ನಡೆಸಿ ಅಭಿನಂದಿಸಲಾಗುವುದು ಎಂದರು.

ADVERTISEMENT

ಯಾವುದೆ ಸ್ವಾರ್ಥ ಮನೋಭಾವವಿಲ್ಲದೆ ಇಲ್ಲಿನ ಕೆಲವು ವ್ಯಾಪಾರಿಗಳು, ಉದ್ಯಮಿಗಳು ಸೇರಿ ಜಾತ್ರೆ ಆರಂಭದಿಂದ ಮುಗಿಯುವವರೆಗೂ ಅನ್ನದಾಸೋಹ ಕಾರ್ಯ ನಡೆಸಿರುವುದು ಈ ಊರಿನ ಸೇವಾ ಮನೋಭಾವಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಆದಷ್ಟು ಶೀಘ್ರವಾಗಿ ಜಾತ್ರೆಯ ಲೆಕ್ಕಪತ್ರಗಳನ್ನು ಆಡಿಟ್ ಮಾಡಿಸಿ ಜನರ ಮುಂದಿಡಬೇಕು ಎಂದು ಅವರು ಹೇಳಿದರು.

ಉಪವಿಭಾಗಾಧಿಕಾರಿ ವೀರೇಶ್ ಕುಮಾರ್, ಎಎಸ್ ಪಿ ಬೆನಕ ಪ್ರಸಾದ್, ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಎನ್.ನಾಗೇಂದ್ರ, ಉಪಾಧ್ಯಕ್ಷ ಸುಂದರ್ ಸಿಂಗ್, ಕಾರ್ಯದರ್ಶಿ ಬಿ.ಗಿರಿಧರರಾವ್, ಖಜಾಂಚಿ ನಾಗೇಂದ್ರ ಕುಮಟಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.