ಭದ್ರಾವತಿ: ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿರುವ ತಾಲ್ಲೂಕಿನ ಕಸಬಾ 1ನೇ ವೃತ್ತದಲ್ಲಿನ ಒಟ್ಟು 32 ಎಕರೆಯ 21 ಪ್ರದೇಶಗಳಲ್ಲಿ ಗುರುವಾರ ಗಡಿ ಗುರುತಿಸಿ ಫಲಕಗಳನ್ನು ಅಳವಡಿಸಲಾಯಿತು.
ನಗರಸಭೆ ವ್ಯಾಪ್ತಿಯ ಕೋಡಿಹಳ್ಳಿ ರಸ್ತೆಯ ದೈವಜ್ಞ ಮತ್ತು ಮಾಧವ ನಗರಕ್ಕೆ ಹೊಂದಿಕೊಂಡಿರುವ ಜಾಗವನ್ನು ಈಗಾಗಲೇ ಅತಿಕ್ರಮಿಸಿಕೊಂಡು ಬಾಳೆ, ತೆಂಗು, ಅಡಿಕೆ ಮತ್ತು ಭತ್ತದ ಬೆಳೆಗಳನ್ನು ಬೆಳೆಯಲಾಗಿದೆ.
ಬೆಳಿಗ್ಗೆ ಪ್ರಾಧಿಕಾರದ ಸದಸ್ಯ ರವಿಕುಮಾರ್ ನೇತೃತ್ವದಲ್ಲಿ ಅಧಿಕಾರಿ ಅಭಿಲಾಷ್ ಮತ್ತು ಸಿಬ್ಬಂದಿ ಹರೀಶ್, ಅಮೃತ್ ಸೇರಿ ಇತರರನ್ನೊಳಗೊಂಡ ತಂಡ ಹೊಸಮನೆ ಶಿವಾಜಿ ವೃತ್ತದ ಪೊಲೀಸ್ ಠಾಣೆ ಉಪನಿರೀಕ್ಷಕ ಕೃಷ್ಣಕುಮಾರ್ ಮಾನೆ ನೇತೃತ್ವದ ಪೊಲೀಸ್ ತಂಡದ ಬಿಗಿ ಭದ್ರತೆಯಲ್ಲಿ ಗಡಿ ಗುರುತಿಸುವ ಮೂಲಕ ಫಲಕಗಳನ್ನು ಅಳವಡಿಸಿತು.
ಈ ವೇಳೆ ಗಡಿ ಗುರುತಿಸುವ ಜಾಗದಲ್ಲಿ ಬೆಳೆ ಬೆಳೆದಿರುವವರು ಧಿಕಾರಿಗಳೊಂದಿಗೆ ಕೆಲ ಸಮಯ ವಾಗ್ವಾದ ನಡೆಸಿದರು. ಆಗ ಸ್ಥಳದಲ್ಲಿಯೇ ಸಂಬಂಧಿಸಿದ ದಾಖಲೆಗಳನ್ನು ತೋರಿಸುವ ಮೂಲಕ ಅಧಿಕಾರಿಗಳು ಸಮರ್ಥನೆ ನೀಡಿದರು.
ಸೂಡಾ ಸದಸ್ಯ ಎಚ್. ರವಿಕುಮಾರ್ ಮಾಧ್ಯಮದವರಿಗೆ ಮಾಹಿತಿ ನೀಡಿ, ‘ಪ್ರಾಧಿಕಾರಕ್ಕೆ ಸೇರಿರುವ ಜಾಗಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ಅಧಿಕಾರಿಗಳ ಬಳಿ ಇವೆ. ಈ ಜಾಗದಲ್ಲಿ ಪ್ರಾಧಿಕಾರದಿಂದ ವಸತಿ ಯೋಜನೆಯಡಿ ನಿವೇಶನಗಳನ್ನು ನಿರ್ಮಿಸಿ ವಿತರಿಸಲಾಗುವುದು. ಅಂದಾಜು ಒಂದು ಸಾವಿರ ನಿವೇಶನಗಳನ್ನು ಈ ಜಾಗದಲ್ಲಿ ನಿರ್ಮಿಸಬಹುದಾಗಿದ್ದು, ಇದರಿಂದ ನಗರದಲ್ಲಿಯೇ ಅತಿ ದೊಡ್ಡ ಬಡಾವಣೆ ನಿರ್ಮಾಣಗೊಳ್ಳಲಿದೆ. ನಿವೇಶನ ರಹಿತರಿಗೆ ಅನುಕೂಲ ಮಾಡಿಕೊಡುವ ಉದ್ದೇಶವನ್ನು ಪ್ರಾಧಿಕಾರ ಹೊಂದಿದೆ’ ಎಂದು ಹೇಳಿದರು.
‘ಪ್ರಸ್ತುತ ಬೆಳೆ ಬೆಳೆದಿರುವವರು ತಮ್ಮ ಬಳಿ ಯಾವುದಾದರೂ ಸೂಕ್ತ ದಾಖಲೆಗಳು ಇದ್ದಲ್ಲಿ ಪ್ರಾಧಿಕಾರದ ಅಧಿಕಾರಿಗಳ ಬಳಿ ಹಾಜರುಪಡಿಸಿ, ಗೊಂದಲ ಬಗೆಹರಿಸಿಕೊಳ್ಳಬಹುದು. ಈಗ ಬೆಳೆದಿರುವ ಬೆಳೆಗಳಿಗೆ ಯಾವುದೇ ರೀತಿ ಹಾನಿ ಮಾಡುವುದಿಲ್ಲ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.