ADVERTISEMENT

ಶಿವಮೊಗ್ಗ | ಜಿಲ್ಲೆಯಲ್ಲಿ ತಾಯಿ-ಮಗು ಮರಣ ಪ್ರಮಾಣ ತಗ್ಗಿಸಿ: ದಿನೇಶ್ ಗುಂಡೂರಾವ್

ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಚಿವ ದಿನೇಶ್ ಗುಂಡೂರಾವ್ ಸೂಚನೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 7:52 IST
Last Updated 1 ಡಿಸೆಂಬರ್ 2025, 7:52 IST
ಶಿವಮೊಗ್ಗದ ಡಿಎಚ್‌ಒ ಕಚೇರಿಯಲ್ಲಿ ಭಾನುವಾರ ಸಚಿವ ದಿನೇಶ್ ಗುಂಡೂರಾವ್ ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದರು
ಶಿವಮೊಗ್ಗದ ಡಿಎಚ್‌ಒ ಕಚೇರಿಯಲ್ಲಿ ಭಾನುವಾರ ಸಚಿವ ದಿನೇಶ್ ಗುಂಡೂರಾವ್ ಆರೋಗ್ಯ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದರು   

ಶಿವಮೊಗ್ಗ: ‘ತಾಯಿ ಮತ್ತು ಮಗು ಮರಣ ಪ್ರಮಾಣ ರಾಜ್ಯದ ಸರಾಸರಿಗಿಂತ ಜಿಲ್ಲೆಯಲ್ಲಿ ಹೆಚ್ಚಿದೆ. ಅದನ್ನು ಕಡಿಮೆ ಮಾಡಲು ಸೂಕ್ತ ಕ್ರಮ‌ ಕೈಗೊಳ್ಳಿ’ ಎಂದು ಅಧಿಕಾರಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಸೂಚನೆ ನೀಡಿದರು.  

ಇಲ್ಲಿನ ಡಿಎಚ್‌ಒ ಕಚೇರಿಯಲ್ಲಿ ಭಾನುವಾರ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಜಿಲ್ಲೆಯಲ್ಲಿ ತಾಯಿ–ಶಿಶು ಮರಣ ಪ್ರಮಾಣ ತಗ್ಗಿಸುವ ಜೊತೆಗೆ ಸೊರಬ, ಶಿವಮೊಗ್ಗ, ಭದ್ರಾವತಿ ತಾಲ್ಲೂಕುಗಳಲ್ಲಿ ಲಿಂಗಾನುಪಾತ ಕಡಿಮೆ ಇದೆ. ಅದಕ್ಕೆ ಕಾರಣ ತಿಳಿದು ಸಮತೋಲನವಾಗಿರುವಂತೆ ನೋಡಿಕೊಳ್ಳಬೇಕು’ ಎಂದು ತಾಕೀತು ಮಾಡಿದರು. 

‘ತಾಯಿ ಮತ್ತು ಶಿಶು‌ ಮರಣ ಪ್ರಮಾಣ ತಗ್ಗಿಸಲು ಹೈರಿಸ್ಕ್ ಗರ್ಭಿಣಿಯರ ಗುರುತಿಸುವ ಕಾರ್ಯ ಶೇ 100ರಷ್ಟು ಆಗಬೇಕು. ಎಎನ್‌ಸಿ‌ ನೋಂದಣಿ ನಿಗದಿತ ಅವಧಿಯೊಳಗೆ ಕಡ್ಡಾಯವಾಗಿ ಆಗುವಂತೆ ನೋಡಿಕೊಳ್ಳಬೇಕು’ ಎಂದರು. 

ADVERTISEMENT

‘ಸಿಎಚ್‌ಸಿಗಳಲ್ಲಿ ಹೆರಿಗೆ ಪ್ರಮಾಣ ಕಡಿಮೆ ಇದೆ. ಹೆರಿಗೆ ಅತಿ ಕಡಿಮೆ ಇರುವ ಸಿಎಚ್‌ಸಿಯಿಂದ ಪ್ರಸೂತಿ‌ ಮತ್ತು ಅರವಳಿಕೆ ತಜ್ಞ ವೈದ್ಯರನ್ನು‌ ತಾಲ್ಲೂಕು ಆಸ್ಪತ್ರೆಗಳಿಗೆ ವರ್ಗಾಯಿಸಿ 24/7 ಕೆಲಸ ಮಾಡುವಂತೆ ಕ್ರಮ‌ವಹಿಸಬೇಕು. ತಾಲ್ಲೂಕು ಆಸ್ಪತ್ರೆಗಳನ್ನು ಹೆಚ್ಚಿನ ಮಟ್ಟದಲ್ಲಿ ಸುಧಾರಣೆ ಮಾಡಬೇಕು. ಆಗ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಗೂ ಹೊರೆ ಕಡಿಮೆ ಆಗುತ್ತದೆ. ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲೂ ಇಬ್ಬರು ಪ್ರಸೂತಿ ಮತ್ತು ಅರವಳಿಕೆ ತಜ್ಞರನ್ನು ನೇಮಕ ಮಾಡಲಾಗುವುದು’ ಎಂದು ತಿಳಿಸಿದರು. 

ಎಎಂಪಿಕೆ (ಅನೀಮಿಯಾ ಮುಕ್ತ ಪೌಷ್ಟಿಕ ಕರ್ನಾಟಕ) ಕಾರ್ಯಕ್ರಮದಡಿ 5 ರಿಂದ 19 ವರ್ಷದೊಳಗಿನ ಶಾಲೆ- ಕಾಲೇಜಿನ 1,14,196 ಮಕ್ಕಳನ್ನು ತಪಾಸಣೆಗೆ ಒಳಪಡಿಸಿದೆ. ಅವರಲ್ಲಿ ಶೇ 6.5 ರಷ್ಟು ತೀವ್ರವಲ್ಲದ (ಮೈಲ್ಡ್), ಶೇ 5.7ರಷ್ಟು ಮಧ್ಯಮ (ಮಾಡರೇಟ್) ಮತ್ತು ಶೇ 0.04 ತೀವ್ರ (ಸಿವಿಯರ್) ಅನಿಮಿಯಾ ಪತ್ತೆಯಾಗಿದೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದ ಸಚಿವರು, ಚಿಕಿತ್ಸೆ ಮುಗಿಸಿ ಮುಂದಿನ ತಿಂಗಳು ಆ ಬಗ್ಗೆ ವರದಿ ಕೊಡಿ ಎಂದು ಸೂಚಿಸಿದರು 

‘ನಮ್ಮ ಕ್ಲಿನಿಕ್’ ಬಗ್ಗೆ ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು. 14 ಆರೋಗ್ಯ ಸಮಸ್ಯೆಗಳನ್ನು ತಪಾಸಣೆಗೊಳಪಡಿಸಿ ರೋಗಿಗಳಿಗೆ ದೀರ್ಘಕಾಲದ ಅನುಕೂಲ ಆಗಬೇಕೆಂಬ ಉದ್ದೇಶದಿಂದ ಗೃಹ ಆರೋಗ್ಯ ಕಾರ್ಯಕ್ರಮ ಆರಂಭಿಸಿದೆ. ಬೇರೆ ಯಾವ ರಾಜ್ಯದಲ್ಲೂ ಇಂತಹ ಕಾರ್ಯಕ್ರಮ ಇಲ್ಲ. ಮನೆ ಮನೆಗೆ ತೆರಳಿ ಈ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಈ ವೇಳೆ ಸಕ್ಕರೆ ಕಾಯಿಲೆ ಮತ್ತು ಹೈಪರ್ ಟೆನ್ಶನ್ ಸಮಸ್ಯೆಗಳನ್ನು ಸಮರ್ಪಕವಾಗಿ ಸ್ಕ್ರೀನಿಂಗ್ ಮಾಡುವಂತೆ ಸಚಿವರು ಸೂಚನೆ ನೀಡಿದರು. 

ಸಭೆಯಲ್ಲಿ‌ ಎನ್‌ಸಿಡಿ ಉಪನಿರ್ದೇಶಕ ಡಾ.ರಘುನಂದನ್, ಡಿಎಚ್ಒ ಡಾ.ನಟರಾಜ್, ಎನ್‌ವಿಬಿಡಿಸಿಪಿ ಅಧಿಕಾರಿ ಡಾ.ಗುಡುದಪ್ಪ ಕಸಬಿ, ಡಿಎಸ್ಒ ಡಾ.ನಾಗರಾಜ ನಾಯ್ಕ, ಆರ್‌ಸಿಎಚ್ಒ ಡಾ.ಮಲ್ಲಪ್ಪ, ಡಿಎಲ್ಒ ಡಾ.ಕಿರಣ್ ಹಾಜರಿದ್ದರು.

ನಟ ಪುನೀತ್‌ ರಾಜಕುಮಾರ್ ಹೆಸರಿನ ಹೃದಯ ಜ್ಯೋತಿ ಕಾರ್ಯಕ್ರಮದಡಿ ಎಐ ಮೂಲಕ ಹೃದಯ ಕಾಯಿಲೆ ಪತ್ತೆ ಮಾಡಿ ಗಂಭೀರವಾಗಿದ್ದರೆ ಚಿಕಿತ್ಸೆ ನೀಡಲಾಗುವುದು. ಎಲ್ಲಾ ತಾಲ್ಲೂಕು ಆಸ್ಪತ್ರೆಗಳಿಗೂ ಈ ಕಾರ್ಯಕ್ರಮ ವಿಸ್ತರಿಸಲಾಗುವುದು

-ದಿನೇಶ್ ಗುಂಡೂರಾವ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ

ಶಿರಸಿಯಲ್ಲಿ ಶೀಘ್ರ ಕೆಎಫ್‌ಡಿ ಪರೀಕ್ಷೆ ಪ್ರಯೋಗಾಲಯ  ಬೇಸಿಗೆಯಲ್ಲಿ ಕೆಎಫ್‌ಡಿ (ಕ್ಯಾಸನೂರು ಫಾರೆಸ್ಟ್ ಡಿಸೀಸ್) ನಿಯಂತ್ರಣಕ್ಕೆ ಈಗಿನಿಂದಲೇ ಕಾರ್ಯೋನ್ಮುಖರಾಗುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವ ದಿನೇಶ್ ಗುಂಡೂರಾವ್ ಕೆಎಫ್‌ಡಿ ಪರೀಕ್ಷೆಗೆ ಶಿರಸಿಯಲ್ಲಿ ಪ್ರಯೋಗಾಲಯ ಆರಂಭಿಸಲು ಅನುಮತಿ ದೊರೆತಿದೆ. ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದರು.  ಈ ವರ್ಷ ಕೆಎಫ್‌ಡಿ ಪತ್ತೆಗೆ 7155 ಪರೀಕ್ಷೆ ನಡೆಸಲಾಗಿದೆ. ಅದರಲ್ಲಿ 72 ಪಾಸಿಟಿವ್ ಪ್ರಕರಣ ಕಂಡುಬಂದಿವೆ. ಅದರಲ್ಲಿ ಇಬ್ಬರು ಮರಣ ಹೊಂದಿದ್ದಾರೆ ಎಂದು ವಿಡಿಎಲ್‌ನ ಅಧಿಕಾರಿ ಡಾ.ಹರ್ಷವರ್ಧನ ಸಭೆಗೆ ಮಾಹಿತಿ ನೀಡಿದರು.

ಇಲಾಖೆ ಸಭೆ; ಕಾಂಗ್ರೆಸ್ ಮುಖಂಡರು ಭಾಗಿ! ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಂದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಹಾಗೂ ಮುಖಂಡ ಎಚ್.ಸಿ.ಯೋಗೀಶ್ ಪಾಲ್ಗೊಂಡಿದ್ದರು. ಇದು ಚರ್ಚೆಗೆ ಗ್ರಾಸವಾಯಿತು.  ಸಚಿವರ ನೇತೃತ್ವದ ಇಲಾಖೆಯ ಅಧಿಕೃತ ಸಭೆಯಲ್ಲಿ ಪಕ್ಷದ ಮುಖಂಡರು ಅದರಲ್ಲೂ ಅಧಿಕಾರೇತರ ಸದಸ್ಯರು ಪಾಲ್ಗೊಳ್ಳುವುದು ಸರಿಯೇ ಎಂಬ ಚರ್ಚೆ ಅಧಿಕಾರಿಗಳ ವಲಯದಲ್ಲಿ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.