ADVERTISEMENT

ಪ್ರಜಾತಂತ್ರ ತಪ್ಪಾಗಿ ಅರ್ಥೈಸುವ ಹುನ್ನಾರ: ಪ್ರಾಂಶುಪಾಲ ಪಿ. ಆರಡಿಮಲ್ಲಯ್ಯ ಕಟ್ಟೀರ

ಪತ್ರಿಕಾ ದಿನಾಚರಣೆಯಲ್ಲಿ ಪ್ರಾಂಶುಪಾಲ ಪಿ. ಆರಡಿಮಲ್ಲಯ್ಯ ಕಟ್ಟೀರ

​ಪ್ರಜಾವಾಣಿ ವಾರ್ತೆ
Published 30 ಜುಲೈ 2025, 3:10 IST
Last Updated 30 ಜುಲೈ 2025, 3:10 IST
ತೀರ್ಥಹಳ್ಳಿಯಲ್ಲಿ ಸೋಮವಾರ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು
ತೀರ್ಥಹಳ್ಳಿಯಲ್ಲಿ ಸೋಮವಾರ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು   

ತೀರ್ಥಹಳ್ಳಿ: ಮಾಧ್ಯಮಗಳು ರಾಶಿ ಭವಿಷ್ಯ, ವಶೀಕರಣ, ಶತ್ರುನಾಶ, ಕನ್ಯಾಬಲದ ಮಾಹಿತಿ ಹಂಚುತ್ತವೆ. ಸಂವಿಧಾನದ ಪಾಠ ಪತ್ರಕರ್ತರಿಗೂ ಅವಶ್ಯವಿದೆ. ಪ್ರಜಾತಂತ್ರ ವ್ಯವಸ್ಥೆಯನ್ನೇ ತಪ್ಪಾಗಿ ಗ್ರಹಿಸುವ ಹುನ್ನಾರ ಸಮಾಜದಲ್ಲಿ ನಡೆಯುತ್ತಿದೆ ಎಂದು ಪ್ರಾಂಶುಪಾಲ ಪಿ.ಆರಡಿಮಲ್ಲಯ್ಯ ಕಟ್ಟೇರ ಅಭಿಪ್ರಾಯಪಟ್ಟರು. 

ಇಲ್ಲಿನ ಮಾಧವ ಮಂಗಲ ಸಭಾ ಭವನದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ತೀರ್ಥಹಳ್ಳಿ ಘಟಕ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಪತ್ರಿಕಾ ಧರ್ಮ ಸುದ್ದಿಯ ಜನಪ್ರಿಯತೆ, ಟಿಆರ್‌ಪಿ ಹಿಂದೆ ಓಡುತ್ತಿದೆ. ಶತ್ರುನಾಶ ಎಂಬ ಪದವನ್ನು ದಿನನಿತ್ಯ ಮಾಧ್ಯಮಗಳೇ ಬಳಸುತ್ತಿವೆ. ಅಂತಹ ಪದಗಳಿಗೆ ಸಂವಿಧಾನದ ಚೌಕಟ್ಟಿನಲ್ಲಿ ಬಳಕೆ ಮಾಡಬಹುದೇ ಎಂಬ ಬಗ್ಗೆ ಚಿಂತನೆ ನಡೆಸಬೇಕು. ಸತ್ಯ ಮರೆಮಾಚಿ ಅವಾಸ್ತವಕ್ಕೆ ತಳ್ಳುವುದರಲ್ಲಿ ವಿವಿಧ ಮಾಧ್ಯಮಗಳ ಪಾತ್ರ ದೊಡ್ಡದಿದೆ ಎಂದರು. 

ADVERTISEMENT

ಧೈರ್ಯವಾಗಿ ಪ್ರಭುತ್ವ ಪ್ರಶ್ನಿಸುವವರ ಸಂಖ್ಯೆ ಕ್ಷೀಣಿಸುತ್ತಿದೆ. ಪ್ರತಿಭಟನೆ ಎಂಬ ಪದವೇ ಯುವ ಸಮುದಾಯದಲ್ಲಿ ಕಣ್ಮರೆಯಾಗುತ್ತಿದೆ. ನಿರ್ಭೀತಿಯಿಂದ ಪ್ರಶ್ನಿಸುವ ಪತ್ರಿಕೆ, ಪತ್ರಕರ್ತ ಜನಮಾನಸದಲ್ಲಿ ಶಾಶ್ವತವಾಗಿ ಉಳಿಯುತ್ತಾರೆ’ ಎಂದು ಎಂಎಡಿಬಿ ಅಧ್ಯಕ್ಷ ಆರ್‌.ಎಂ.ಮಂಜುನಾಥ ಗೌಡ ಹೇಳಿದರು. 

‘ಸಂವಿಧಾನದ ಅಡಿಯಲ್ಲಿ ಪ್ರಾಪ್ತವಾದ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಪ್ರತಿಯೊಬ್ಬರೂ ನಾಗರಿಕ ಹಕ್ಕು, ಜವಾಬ್ದಾರಿಯ ಬಗ್ಗೆ ಅರಿವು ಹೊಂದಿರಬೇಕು. ಪದವೀಧರ ಕ್ಷೇತ್ರದ ಮತದಾರರೇ ಹಾಳಾದರೆ ರಾಜಕಾರಣಿಗಳು ಸರಿ ಇರಲು ಸಾಧ್ಯವಿಲ್ಲ’ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಅಭಿಪ್ರಾಯಪಟ್ಟರು. 

‘900 ಪತ್ರಕರ್ತರ ಮೇಲೆ ಪೂರ್ವ ನಿರ್ಬಂಧ ಹೇರುತ್ತಿರುವ ಪ್ರಕರಣ ಕರ್ನಾಟಕದಲ್ಲೇ ನಡೆಯುತ್ತಿದೆ. ಒಟ್ಟು 8,800 ಪ್ರಕಟಣೆಗಳನ್ನು ಅಳಿಸಲು ನ್ಯಾಯಾಲಯ ನಿರ್ದೇಶನ ಕೊಡುತ್ತದೆ. ಇಲ್ಲಿ ದೋಷ ಇದೆ ಎಂಬುದು ನ್ಯಾಯಾಲಯಕ್ಕೆ ಏಕೆ ತಿಳಿಯುತ್ತಿಲ್ಲ’ ಎಂದು ರಾಜ್ಯ ನಿರ್ದೇಶಕ ರವಿಕುಮಾರ್‌ ಟೆಲೆಕ್ಸ್‌ ಹೇಳಿದರು. 

ಪಟ್ಟಣ ಪಂಚಾಯಿತಿ ಅಧ್ಯಕ್ಷ ರಹಮತ್‌ ಉಲ್ಲಾ ಅಸಾದಿ, ಪ್ರಮುಖರಾದ ಸೊಪ್ಪುಗುಡ್ಡೆ ರಾಘವೇಂದ್ರ, ಬಿ.ಆರ್.‌ ರಾಘವೇಂದ್ರ ಶೆಟ್ಟಿ, ಮೋಹನ್‌ ಮುನ್ನೂರು, ವಿ.ಟಿ.ಅರುಣ್‌, ರಂಜಿತ್‌, ಟಿ.ಕೆ.ರಮೇಶ್‌ ಶೆಟ್ಟಿ, ಶಿವಾನಂದ ಕರ್ಕಿ, ಮುರುಘರಾಜ್‌, ಟಿ.ಜೆ.ಅನಿಲ್‌ ಇದ್ದರು.

ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.