ADVERTISEMENT

ಸಭೆಯಲ್ಲಿ ಪ್ರತಿಧ್ವನಿಸಿದ ಮರ ಕಡಿತಲೆ ಪ್ರಕರಣ

ರೈತರ ಕೈಗೆ ಸ್ಲೇಟು ಹಿಡಿಸಿ ಫೋಟೊ ತೆಗೆದ ಸಿಬ್ಬಂದಿ ವಿರುದ್ಧ ಶಾಸಕ ಹಾಲಪ್ಪ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2022, 2:16 IST
Last Updated 2 ಆಗಸ್ಟ್ 2022, 2:16 IST
ಸಾಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಶಾಸಕ ಎಚ್.ಹಾಲಪ್ಪ ಹರತಾಳು ಅವರ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು
ಸಾಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಶಾಸಕ ಎಚ್.ಹಾಲಪ್ಪ ಹರತಾಳು ಅವರ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು   

ಸಾಗರ: ತಾಲ್ಲೂಕಿನ ಭಾರಂಗಿ ಹೋಬಳಿಯ ಉರುಳುಗಲ್ಲು ಗ್ರಾಮದಲ್ಲಿ ಈಚೆಗೆ ನಡೆದ ಮರಗಳ ಕಡಿತಲೆ ಪ್ರಕರಣದ ವಿಷಯ ಸೋಮವಾರ ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರತಿಧ್ವನಿಸಿತು.

ವಿದ್ಯುತ್ ಸೌಲಭ್ಯ ಪಡೆಯಲು ವಿಳಂಬವಾಗುತ್ತದೆ ಎಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಕಾಡು ಜಾತಿಯ ಮರಗಳನ್ನು ಕಡಿದು ಪಕ್ಕಕ್ಕೆ ಸರಿಸಿದವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಜೈಲಿಗೆ ಕಳುಹಿಸಿದ್ದಲ್ಲದೆ ಆರೋಪಿಗಳ ಕೈಗೆ ಸ್ಲೇಟು ಹಿಡಿಸಿ ಫೋಟೊ ತೆಗೆದು ಸಾಮಾಜಿಕ ಜಾಲತಾಣಗಳಿಗೆ ಹರಿಯಬಿಟ್ಟಿರುವ ಬಗ್ಗೆ ಶಾಸಕ ಎಚ್.ಹಾಲಪ್ಪ ಹರತಾಳು ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

‘ಮಲೆನಾಡಿನಲ್ಲಿ ಕಾಡು ಉಳಿದಿದ್ದರೆ ಅದಕ್ಕೆ ಕಾರಣ ರೈತರು ಹಾಗೂ ರೈತರ ಮಕ್ಕಳೇ ಹೊರತು ಅರಣ್ಯ ಇಲಾಖೆಯಲ್ಲ. ಶ್ರೀಗಂಧ, ಬೀಟೆ ಜಾತಿಯ ಮರಗಳನ್ನು ಅಥವಾ ಇತರ ಮರಗಳನ್ನು ಸ್ವಂತ ಲಾಭಕ್ಕಾಗಿ ಕಡಿದಿದ್ದರೆ ಅವರ ಮೇಲೆ ನೀವು ಕ್ರಮ ಕೈಗೊಳ್ಳಿ. ಆದರೆ, ಸಾರ್ವಜನಿಕ ಕೆಲಸಕ್ಕಾಗಿ ಮರ ಕಡಿದವರ ಮೇಲೆ ದೌರ್ಜನ್ಯ ಎಸಗಿ ಭಯೋತ್ಪಾದಕರಂತೆ ಚಿತ್ರಿಸುವುದು ಎಷ್ಟು ಸರಿ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಶಾಸಕರು ತರಾಟೆಗೆ ತೆಗೆದುಕೊಂಡರು.

ADVERTISEMENT

‘ಶರಾವತಿ ಹಿನ್ನೀರಿನ ಪ್ರದೇಶವಾದ ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ 4 ಆಂಬುಲೆನ್ಸ್ ಇವೆ. ಒಂದು 108 ವಾಹನ ಕೆಟ್ಟು ನಿಂತಿದೆ. ಉಳಿದ ವಾಹನಗಳನ್ನು ಅಗತ್ಯವಿರುವ ರೋಗಿಗಳ ಸೇವೆಗೆ ಒದಗಿಸಲು ಆರೋಗ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿತ್ತು. ಹಾಗೆ ಮಾಡದೆ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದೀರಿ’ ಎಂದು ಹಾಲಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕಿನಲ್ಲಿ ಗಾಂಜಾ ಮಾರಾಟದ ಪ್ರಕರಣಗಳು ಆಗಾಗ ವರದಿಯಾಗುತ್ತಿವೆ. ಗಾಂಜಾ ಪೂರೈಕೆ ಎಲ್ಲಿಂದ ಆಗುತ್ತಿದೆ ಎಂಬುದರ ಮೂಲವನ್ನು ಪತ್ತೆ ಹಚ್ಚಬೇಕು. ಗಾಂಜಾ ಸೇವನೆ ಮಾಡುವವರನ್ನು ಹಾಗೂ ಗಾಂಜಾ ಪೂರೈಕೆ ಮಾಡುವವರನ್ನು ವಿಚಾರಣೆಗೆ ಒಳಪಡಿಸಿ ಈ ಜಾಲದ ಮೂಲ ಹುಡುಕಬೇಕು ಎಂದು ತಾಕೀತು ಮಾಡಿದರು.

ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಮಲ್ಲಪ್ಪ ಕೆ.ತೊದ ಲಬಾವಿ, ಪುಷ್ಪಾ ಎಂ.ಕಮ್ಮಾರ್, ಕೆಡಿಪಿ ಸದಸ್ಯರು, ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.