ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸೋಮವಾರ ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲಿನ ಒಳರೋಗಿಗಳ ವಿಭಾಗದಲ್ಲಿ ದಾಖಲಾಗಿದ್ದವರ ಆರೋಗ್ಯ ವಿಚಾರಿಸಿ ಅವರ ಕಷ್ಟಕಾರ್ಪಣ್ಯ ಆಲಿಸಿದರು.
ಆಸ್ಪತ್ರೆಯಲ್ಲಿ ದೊರಕುತ್ತಿರುವ ಚಿಕಿತ್ಸೆ, ವೈದ್ಯರ ಲಭ್ಯತೆ, ಸಿಬ್ಬಂದಿಯ ವರ್ತನೆ, ಔಷಧಿ, ಕುಡಿಯುವ ನೀರು, ಊಟೋಪಹಾರದ ಸವಲತ್ತು ಹಾಗೂ ಸ್ವಚ್ಛತೆಯ ಬಗ್ಗೆ ಅವರಿಂದ ವಾಸ್ತವಾಂಶ ತಿಳಿದುಕೊಳ್ಳುವ ಪ್ರಯತ್ನ ಮಾಡಿದರು.
ಹೊರರೋಗಿಗಳ ವಿಭಾಗ, ಮೂಳೆ ಮತ್ತು ಕೀಲು ವಿಭಾಗ, ಹೊರ ರೋಗಿಗಳ ವಿಭಾಗ, ಡಯಾಲಿಸಿಸ್ ವಿಭಾಗ, ಚರ್ಮ ರೋಗ, ಜನರಲ್ ಮೆಡಿಸಿನ್ ವಾರ್ಡ್ ಸೇರಿದಂತೆ ವಿವಿಧ ವಿಭಾಗಗಳಿಗೆ ಭೇಟಿ ನೀಡಿದರು. ರೋಗಿಗಳು, ಅವರ ಕಡೆಯವರು ಮಾತ್ರವಲ್ಲದೇ ಆಸ್ಪತ್ರೆಯ ನಾನ್ ಕ್ಲಿನಿಕಲ್ ಸಿಬ್ಬಂದಿಯೊಂದಿಗೂ ಮಾತನಾಡಿ ಅವರ ಅಳಲು ಆಲಿಸಿದರು.
ಆಸ್ಪತ್ರೆಯ ವೀಕ್ಷಣೆ ನಂತರ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹಾಗೂ ಅಲ್ಲಿನ ಆರೋಗ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದ ಮಧು ಬಂಗಾರಪ್ಪ, ಹೊಸ ಒಪಿಡಿ ಕೌಂಟರ್ ನಿರ್ಮಾಣಕ್ಕೆ ಅಂದಾಜುಪಟ್ಟಿ ಸಿದ್ದಪಡಿಸಲು ಸೂಚಿಸಿದರು.
ಆಸ್ಪತ್ರೆಗೆ ಬೇಡಿಕೆ ಇರುವುದರಿಂದ ಐದು ಡಯಾಲಿಸಿಸ್ ಯಂತ್ರಗಳು ಹಾಗೂ ಡಾರ್ಮೆಟರಿ ನಿರ್ಮಾಣಕ್ಕೆ ಪ್ರಸ್ತಾವನೆ ನೀಡಲು ಸೂಚನೆ ನೀಡಿದರು.
ಹೆರಿಗೆ ವೇಳೆ ತಾಯಿ–ಮಗುವಿನ ಮರಣ ಪ್ರಮಾಣ ಕಡಿಮೆ ಮಾಡಲು ಎಲ್ಲ ರೀತಿಯಲ್ಲಿ ಪರಿಣಾಮಕಾರಿ ಕ್ರಮ ವಹಿಸಲು ಸೂಚಿಸಿದ ಅವರು, ಹೊರ ಜಿಲ್ಲೆಗಳಿಂದ ಬರುವ ಗರ್ಭಿಣಿಯರು ಇಲ್ಲಿ ಪ್ರಸವ ಆಗುವ ಕುರಿತಾದ ಮಾಹಿತಿ ನೀಡಲು ತಿಳಿಸಿದರು.
ಆಸ್ಪತ್ರೆಗೆ ಅಗತ್ಯವಿರುವ ಹೆಚ್ಚುವರಿ ವೆಂಟಿಲೇಟರ್ ಗಳ ಮಾಹಿತಿ ನೀಡುವಂತೆ ಹಾಗೂ ಎನ್‌ಐಸಿಯು
ಎಂಸಿಎಚ್ (ತಾಯಿ ಮತ್ತು ಮಕ್ಕಳ ವಿಭಾಗ) ಬ್ಲಾಕ್ ವಿವರ, ಒಬಿಜಿ, ಪಿಡಿಯಾಟ್ರಿಕ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅಗತ್ಯ ಸೌಲಭ್ಯಗಳ ಕಲ್ಪಿಸಲು ಪ್ರಸ್ತಾವ ಸಿದ್ದಪಡಿಸಲು ಸೂಚಿಸಿದರು.
ಈ ವೇಳೆ ಸಿಮ್ಸ್ ನಿರ್ದೇಶಕ ವಿರೂಪಾಕ್ಷಪ್ಪ, ಮೆಗ್ಗಾನ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ತಿಮ್ಮಪ್ಪ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಸಿದ್ದನಗೌಡ ಪಾಟೀಲ್, ಡಾ.ಎಸ್. ಶ್ರೀಧರ್, ಮುಖಂಡರಾದ ಕಲಗೋಡು ರತ್ನಾಕರ್, ಜಿ.ಡಿ.ಮಂಜುನಾಥ್ ಹಾಜರಿದ್ದರು.
ವೈದ್ಯಕೀಯ ಶಿಕ್ಷಣ ಸಚಿವರೊಂದಿಗೆ ಸಭೆ:
ನಾಳೆ ಮೆಗ್ಗಾನ್ ಆಸ್ಪತ್ರೆಯ ಅಭಿವೃದ್ಧಿ ಸಿಬ್ಬಂದಿ ನೇಮಕ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿ ಸರ್ಕಾರದಿಂದ ಅಗತ್ಯ ನೆರವು ಕೊಡಿಸಲು ಜುಲೈ 23ರಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರೊಂದಿಗೆ ಬೆಂಗಳೂರಿನಲ್ಲಿ ಸಭೆ ನಡೆಸಿ ಚರ್ಚಿಸಲಿದ್ದೇನೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು. ಮೆಗ್ಗಾನ್ ಆಸ್ಪತ್ರೆಗೆ ಭೇಟಿ ಪರಿಶೀಲನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಂತ ಹಂತವಾಗಿ ಆಸ್ಪತ್ರೆಯ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಲ್ಪಿಸಲಾಗುವುದು ಎಂದರು. ಒತ್ತಡ ಹೆಚ್ಚಿದೆ: ಮೆಗ್ಗಾನ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸವಲತ್ತು ಹಾಗೂ ಚಿಕಿತ್ಸಾ ವ್ಯವಸ್ಥೆ ಲಭ್ಯವಿರುವುದರಿಂದ ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೇ ಪಕ್ಕದ ದಾವಣಗೆರೆ ಚಿತ್ರದುರ್ಗ ಹಾವೇರಿ ಚಿಕ್ಕಮಗಳೂರು ಉತ್ತರ ಕನ್ನಡ ಜಿಲ್ಲೆಯ ಶಿರಸಿ ಭಾಗದಿಂದಲೂ ರೋಗಿಗಳು ಬರುತ್ತಿದ್ದಾರೆ. ಒಳರೋಗಿಗಳ ವಾರ್ಡ್‌ಗೆ ತೆರಳಿದ್ದ ವೇಳೆ ಬೇರೆ ಬೇರೆ ಜಿಲ್ಲೆಯವರು ಮಾತಿಗೆ ಸಿಕ್ಕರು. ಹೀಗಾಗಿ ಆಸ್ಪತ್ರೆಯ ಮೇಲೆ ಒತ್ತಡ ಹೆಚ್ಚಿದೆ. ಇದು ಸಮಸ್ಯೆಗಳು ಉದ್ಭವಕ್ಕೆ ಕಾರಣವಾಗಿದೆ ಎಂದು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.