ವಿದ್ಯುತ್ ಲೈನ್‌ಗೆ ತಾಗಿರುವ ಮರದ ಕೊಂಬೆಗಳನ್ನು ಕತ್ತರಿಸುತ್ತಿರುವ ಮೆಸ್ಕಾಂ ಸಿಬ್ಬಂದಿ
ಆನಂದಪುರ: ಕಳೆದ ಒಂದು ತಿಂಗಳಿಂದ ಸುರಿಯುತ್ತಿರುವ ಭಾರಿ ಮಳೆ ಹಾಗೂ ಕೆಲ ದಿನಗಳಿಂದ ಬೀಸುತ್ತಿರುವ ವಿಪರೀತ ಗಾಳಿಯಿಂದ ಆನಂದಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ನಿರಂತರವಾಗಿ ಧರೆಗುರುಳುತ್ತಿವೆ. ಸಿಬ್ಬಂದಿ, ವಾಹನ, ವೇತನ ಸೇರಿದಂತೆ ಇತರ ಸೌಲಭ್ಯಗಳ ಕೊರತೆ ನಡುವೆಯೂ ಮೆಸ್ಕಾಂ ಸಿಬ್ಬಂದಿ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ರಸ್ತೆ ಬದಿ ಹಾಗೂ ತೋಟಗಳ ನಡುವೆ ಹಾದುಹೋಗಿರುವ ವಿದ್ಯುತ್ ಮಾರ್ಗಗಳು ಹಾನಿಗೀಡಾಗುತ್ತಿವೆ. ಮರಗಳು ವಿದ್ಯುತ್ ಕಂಬಗಳ ಮೇಲೆ ಉರುಳುತ್ತಿರುವುದರಿಂದ ಅವು ನೆಲಕಚ್ಚುತ್ತಿವೆ. ಅವುಗಳ ದುರಸ್ತಿ ಮೆಸ್ಕಾಂ ಸಿಬ್ಬಂದಿಗೆ ಸವಾಲಾಗಿ ಪರಿಣಮಿಸುತ್ತಿದೆ. ಲೈನ್ ಸರಿಪಡಿಸಿ ಒಂದು ಗ್ರಾಮಕ್ಕೆ ವಿದ್ಯುತ್ ಸಂಪರ್ಕ ನೀಡುತ್ತಿದ್ದಂತೆಯೇ, ಮತ್ತೊಂದು ಕಡೆ ವಿದ್ಯುತ್ ಸಮಸ್ಯೆ ಪರಿಹರಿಸಲು ಕರೆ ಬರುತ್ತಿದೆ.
ಮೆಸ್ಕಾಂಗೆ ₹25 ಲಕ್ಷ ನಷ್ಟ: ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಆನಂದಪುರ ಹಾಗೂ ಸುತ್ತಮುತ್ತ 80ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಹಾನಿಗೊಳಗಾಗಿವೆ. ಮೆಸ್ಕಾಂಗೆ ₹25 ಲಕ್ಷಕ್ಕೂ ಹೆಚ್ಚಿನ ಪ್ರಮಾಣದ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಸಿಬ್ಬಂದಿ ಕೊರತೆ: ಆನಂದಪುರದ ಮೆಸ್ಕಾಂ ವಿಭಾಗದಲ್ಲಿ ಸಿಬ್ಬಂದಿ ಕೊರತೆ ಇದೆ. ಈಗ ಇರುವವರು ಹಗಲಿರುಳು ಕೆಲಸ ನಿರ್ವಹಿಸಿ ಸಮಸ್ಯೆ ಬಗೆಹರಿಸುತ್ತಿದ್ದಾರೆ. ಆನಂದಪುರ ವಿಭಾಗದಲ್ಲಿ ಸದ್ಯ 16 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನೂ 13 ಮಂದಿಯ ನೇಮಕವಾಗಬೇಕಿದೆ.
ವಾಹನ ಸೌಲಭ್ಯವಿಲ್ಲ: ಸಾಗರ ಮುಖ್ಯ ವಿಭಾಗದಡಿ ಬರುವ 5 ವಿಭಾಗಗಳಿಗೆ ಸೇರಿ ಒಂದೇ ವಾಹನವಿದೆ. ಈ ಪೈಕಿ ದೊಡ್ಡ ವಿಭಾಗವಾಗಿರುವ ಆನಂದಪುರದಲ್ಲೇ ಈ ಬಾರಿ ಹೆಚ್ಚು ಹಾನಿಯಾಗಿದೆ. ಪ್ರತಿ ಉಪವಿಭಾಗಕ್ಕೂ ವಾಹನ ವ್ಯವಸ್ಥೆ ಕಲ್ಪಿಸಿದರೆ ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸಬಹುದು. ಒಂದೇ ವಾಹನ ಇಟ್ಟುಕೊಂಡು ಏಕಕಾಲಕ್ಕೆ ಕಾರ್ಯನಿರ್ವಹಿಸುವುದು ಅಸಾಧ್ಯ ಎಂದು ಸಿಬ್ಬಂದಿ ಹೇಳುತ್ತಾರೆ.
ಅವಧಿ ಮೀರಿ ಕೆಲಸ ನಿರ್ವಹಿಸಿದರೂ ಹೆಚ್ಚಿನ ಸಂಬಳವಿಲ್ಲ: ಸರ್ಕಾರದ ನಿಯಮದ ಪ್ರಕಾರ ಸಿಬ್ಬಂದಿ 8 ಗಂಟೆ ಕಾರ್ಯ ನಿರ್ವಹಿಸಬೇಕು. ಆದರೆ ಮೆಸ್ಕಾಂ ಸಿಬ್ಬಂದಿ ಕೆಲವೊಮ್ಮೆ, ಬೆಳಿಗ್ಗೆ 6ರಿಂದ ರಾತ್ರಿ 11ರವರೆಗೂ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಅವಧಿ ಮೀರಿ ಮಾಡಿದ ಕೆಲಸಕ್ಕೆ ಹೆಚ್ಚಿನ ವೇತನ ನೀಡುವುದಿಲ್ಲ. ಮಳೆಗಾಲದಲ್ಲಂತೂ ಮರ ಬಿದ್ದಿದೆ ಎಂದು ಮಧ್ಯರಾತ್ರಿ 3 ಗಂಟೆಗೂ ಕರೆ ಬಂದಿರುವ ನಿದರ್ಶನಗಳಿವೆ ಎಂದು ಸಿಬ್ಬಂದಿ ಅಳಲು ತೋಡಿಕೊಳ್ಳುತ್ತಾರೆ.
ಎಲ್ಲ ಕೊರತೆಗಳ ನಡುವೆಯೂ ಸಹಾಯಕ ಎಂಜಿನಿಯರ್, ಗುತ್ತಿಗೆದಾರರ ಜೊತೆಗೂಡಿ ಅಂದಂದಿನ ಸಮಸ್ಯೆಗಳನ್ನು ಆ ದಿನವೇ ಬಗೆಹರಿಸಲು ಯತ್ನಿಸುತ್ತಿದ್ದೇವೆ ಎಂದೂ ಹೇಳುತ್ತಾರೆ.
ಸದ್ಯದಲ್ಲೇ 6,000 ಸಿಬ್ಬಂದಿ ನೇಮಕವಾಗುತ್ತಿದೆ. ಈ ಪ್ರಕ್ರಿಯೆ ಮುಗಿದ ಬಳಿಕ ಸಿಬ್ಬಂದಿ ಕೊರತೆ ನೀಗಲಿದೆ. ಹೊಸ ವಾಹನಗಳು ಬಂದಿದ್ದು ಎಲ್ಲಾ ವಿಭಾಗಗಳಿಗೂ ಹಸ್ತಾಂತರಿಸಲಾಗುವುದು. ಮುಂಗಾರಿನಲ್ಲಿ ಇದೇ ಮೊದಲ ಬಾರಿಗೆ ಹೆಚ್ಚು ಮಳೆಯಾಗಿದ್ದರಿಂದ ಅಕೇಶಿಯಾ ಮರಗಳು ವಿದ್ಯುತ್ ತಂತಿಗಳ ಮೇಲೆ ಬೀಳುತ್ತಿವೆ. ಇದರಿಂದ ಸಮಸ್ಯೆ ಎದುರಾಗಿದೆ
–ವೆಂಕಟೇಶ್, ಕಾರ್ಯನಿರ್ವಾಹಕ ಎಂಜಿನಿಯರ್, ಸಾಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.