ADVERTISEMENT

ಸರ್ಕಾರಿ ಬಾಲಿಕಾ ಪಿಯು ಕಾಲೇಜು: ಅಗ್ನಿ ಅವಘಡ ಪ್ರಾತ್ಯಕ್ಷಿಕೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2025, 12:54 IST
Last Updated 28 ಜನವರಿ 2025, 12:54 IST
ಶಿವಮೊಗ್ಗದ ಬಿ.ಎಚ್. ರಸ್ತೆಯ ಸರ್ಕಾರಿ ಬಾಲಿಕಾ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಅಗ್ನಿ ಅವಘಡ ಪ್ರಾತ್ಯಕ್ಷಿಕೆ ನಡೆಯಿತು
ಶಿವಮೊಗ್ಗದ ಬಿ.ಎಚ್. ರಸ್ತೆಯ ಸರ್ಕಾರಿ ಬಾಲಿಕಾ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಅಗ್ನಿ ಅವಘಡ ಪ್ರಾತ್ಯಕ್ಷಿಕೆ ನಡೆಯಿತು   

ಶಿವಮೊಗ್ಗ: ಬಿ.ಎಚ್. ರಸ್ತೆಯ ಸರ್ಕಾರಿ ಬಾಲಿಕಾ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಅಗ್ನಿ ಅವಘಡ ಪ್ರಾತ್ಯಕ್ಷಿಕೆ ನಡೆಯಿತು. ಈ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಅಗ್ನಿಶಾಮಕ ದಳದ ಠಾಣಾಧಿಕಾರಿ ನರೇಂದ್ರ ಅವರು ಅಗ್ನಿ ಅವಘಡ ನಿಯಂತ್ರಿಸುವ ಬಗ್ಗೆ ಮಾಹಿತಿ ನೀಡಿದರು.

‘ಮನೆಗಳಲ್ಲಿ ಅಡುಗೆ ಅನಿಲ ಸೋರಿಕೆಯಾದಾಗ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಮಾಹಿತಿ ನೀಡಲಾಯಿತು. ಒಲೆ ಮತ್ತು ಅಡುಗೆ ಅನಿಲದ ಸಿಲಿಂಡರ್‌ಗೆ ಐದು ಅಡಿ ಅಂತರವಿರಬೇಕು. ಸಿಲಿಂಡರ್ ಕಾಲಾವಧಿ ಸೂಚಿಸಲು ಎ, ಬಿ, ಸಿ, ಡಿ ಎಂಬುದಾಗಿ ತುದಿಯಲ್ಲಿ ನಮೂದಿಸಿರುವ ಇಸ್ವಿಗಳನ್ನು ಗಮನಿಸಬೇಕು. ಆ ಇಸ್ವಿಯ ಒಳಗೆ ಮಾತ್ರ ಅದನ್ನು ಬಳಸಬೇಕು. ಒಂದು ವೇಳೆ ಸರಬರಾಜುದಾರರು ಅವಧಿ ಮುಗಿದ ಸಿಲಿಂಡರ್ ಗಳನ್ನು ನೀಡಿದ್ದಲ್ಲಿ ನಿಮಗೆ ಅದರ ಅರಿವಿರಬೇಕು. ಕೂಡಲೇ ಅದನ್ನು ಹಿಂತಿರುಗಿಸಬೇಕು’ ಎಂದು ವಿವರಿಸಿದರು. 

ಶಾಲಾ–ಕಾಲೇಜು, ಸಿನಿಮಾ ಮಂದಿರ, ಹಾಸ್ಟೆಲ್‌, ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಅಗ್ನಿ ಅವಘಡ ಸಂಭವಿಸಿದಾಗ ಯಾವ ರೀತಿ ಅದನ್ನು ನಿಭಾಯಿಸಬೇಕು ಎಂಬುದನ್ನು ತಿಳಿಸಿದ ಅವರು, 112 ಸಂಖ್ಯೆಗೆ ಕರೆ ಮಾಡಿದರೆ ಅಗ್ನಿಶಾಮಕ ದಳಕ್ಕೆ ಅವಘಡ ಸಂಭವಿಸಿದ ಸ್ಥಳದ ಲೋಕೇಷನ್ ಸಹಿತ ಮಾಹಿತಿ ಸಿಗುತ್ತದೆ ಎಂದರು.

ADVERTISEMENT

ಅಗ್ನಿಶಾಮಕ ದಳದಲ್ಲಿ ಅತ್ಯಾಧುನಿಕ ಸಲಕರಣೆಗಳು ಮತ್ತು ನುರಿತ ಸಿಬ್ಬಂದಿಯಿದ್ದಾರೆ. ನೀರು ಮತ್ತು ಅಗ್ನಿ ಅಪಘಾತಗಳು ಸೇರಿದಂತೆ ಯಾವುದೇ ತುರ್ತು ಸಂದರ್ಭದಲ್ಲಿ ಕಾರ್ಯಾಚರಣೆ ನಡೆಸಲು ಅಗ್ನಿಶಾಮಕ ದಳದಲ್ಲಿ ಎಲ್ಲ ಸೌಲಭ್ಯಗಳಿವೆ. ಇದರ ಅರಿವು ಪ್ರತಿಯೊಬ್ಬರಿಗೂ ಇದ್ದರೆ, ಅವಘಡ ತಪ್ಪಿಸಲು ಸಹಕಾರಿಯಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಎಚ್. ಜಯಂತ್ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಯ ಚನ್ನವೀರಪ್ಪ ಗಾಮನಗಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.