ADVERTISEMENT

ಕನ್ನಡ ಮಾಧ್ಯಮ ಶಾಲೆ ಸೊರಗಬಾರದು: ಎಂ.ಮೋಹನ್‌ ಆಳ್ವ

ಬಸವಾನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವದಲ್ಲಿ ಎಂ.ಮೋಹನ್‌ ಆಳ್ವ

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 8:27 IST
Last Updated 31 ಜನವರಿ 2026, 8:27 IST
ತೀರ್ಥಹಳ್ಳಿಯ ಬಸವಾನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮವನ್ನು ಸ್ವಾಮಿ ಜಿತಕಾಮಾನಂದ ಸ್ವಾಮೀಜಿ ಉದ್ಘಾಟಿಸಿದರು
ತೀರ್ಥಹಳ್ಳಿಯ ಬಸವಾನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮವನ್ನು ಸ್ವಾಮಿ ಜಿತಕಾಮಾನಂದ ಸ್ವಾಮೀಜಿ ಉದ್ಘಾಟಿಸಿದರು   

ತೀರ್ಥಹಳ್ಳಿ: ಇಂಗ್ಲಿಷ್‌ ಮೋಹದಲ್ಲಿ ಕನ್ನಡ ಮಾಧ್ಯಮ ಶಾಲೆ ಸೊರಗಬಾರದು ಎಂದು ಆಳ್ವಾಸ್ ನುಡಿಸಿರಿ ವಿರಾಸತ್‌ ಅಧ್ಯಕ್ಷ ಎಂ.ಮೋಹನ್‌ ಆಳ್ವ ಅಭಿಪ್ರಾಯಿಸಿದರು. 

ಶುಕ್ರವಾರ ಬಸವಾನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಜ್ಞಾವಂತ ನಾಗರಿಕ ಸೌಂದರ್ಯ ಪ್ರಜ್ಞೆಯನ್ನು ಹೊಂದಿರಬೇಕು. ಆಗ ಮಾತ್ರ ಸಮಾಜದಲ್ಲಿ ಸಾಮರಸ್ಯದ ಬದುಕು ಕಟ್ಟಿಕೊಂಡು ಆಸ್ತಿಯಾಗಬಹುದು. ಇಲ್ಲದಿದ್ದರೆ ಆಘಾತಕಾರಿ ಸಮಾಜ ನಿರ್ಮಾಣವಾಗುತ್ತದೆ ಎಂದು ನುಡಿದರು.

22 ಪ್ರಾದೇಶಿಕ ಭಾಷೆಗಳನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಭಾರತೀಯರು ಸಹಿಷ್ಣುತೆಯಿಂದ ಸಂಘರ್ಷವಿಲ್ಲದೆ ಹಿಂದೂ, ಜೈನ, ಸಿಖ್, ಪಾರ್ಸಿ ಧರ್ಮವನ್ನು ಅನುಸರಿಸಿದ್ದಾರೆ. ನಮ್ಮ ಭಾಷೆ ಅಳಿದರೆ ಸಂಸ್ಕೃತಿ ನಾಶವಾಗುತ್ತದೆ. ಜಪಾನ್, ಜರ್ಮನ್, ಚೀನ ಇಂದಿಗೂ ತಮ್ಮ ಭಾಷೆಯಲ್ಲಿಯೇ ವ್ಯವಹಾರ ನಡೆಸುತ್ತಿವೆ. ಹಾಗೆ ಕನ್ನಡದ ಬಳಕೆಯೂ ಆಗಬೇಕು ಎಂದು ಹೇಳಿದರು. 

ADVERTISEMENT

ಮಾನವ ಸಂಪನ್ಮೂಲ ಭಾರತದ ಬಹುದೊಡ್ಡ ಆಸ್ತಿ. ಸಾಂಸ್ಕೃತಿಕವಾಗಿ ಪಕ್ಕ, ಗಾಳಿ, ಚರ್ಮ, ತಂತಿ ವಾದ್ಯಗಳಿವೆ. 8 ಬಗೆಯ ಶಾಸ್ತ್ರೀಯ ನೃತ್ಯಗಳಿವೆ. 36 ಸಾವಿರ ರಾಗಗಳಿರುವ ಕರ್ನಾಟಿಕ್, ಹಿಂದೂಸ್ಥಾನಿ ಸಂಗೀತವಿದೆ. ಊರಿಗೆ, ಜಾತಿಗೆ, ಭಾಷೆಗೆ, ಕಸುಬಿನ ಹಿಂದೆ ಜಾನಪದ ಕಲೆಗಳು ಹುಟ್ಟಿಕೊಂಡಿವೆ. ರಾಜಕಾರಣಿಗಳನ್ನು ನಂಬಿ ಕೂತರೆ ಸಂಸ್ಕೃತಿ ವಿಸ್ತರಿಸುವುದಿಲ್ಲ. ಕಣ್ಣು, ಕಿವಿ, ಮನಸ್ಸು ಭ್ರಷ್ಟಗೊಳ್ಳುವ ಮೊದಲು ಸಂಸ್ಕೃತಿ, ಸಂಸ್ಕಾರ ಉಳಿಸಬೇಕು ಎಂದರು.

‘ಸರ್ಕಾರಿ ಶಾಲೆ ಮುಚ್ಚುವ ಹಂತದಲ್ಲಿದ್ದು ಉಳಿಸುವ ನಿಟ್ಟಿನಲ್ಲಿ ಜನರೇ ಶಾಲೆಗೆ ಸೇರಿಸುವ ನಿರ್ಧಾರ ಕೈಗೊಳ್ಳಬೇಕು. ಪ್ರಾಥಮಿಕ ಶಾಲೆಯ ಬೋಧನೆ ಮನಸ್ಸನ್ನು ಗಟ್ಟಿಗೊಳಿಸುತ್ತದೆ. ನಾನು ಓದುವಾಗಿನ ದಟ್ಟಕಾಡು, ಕಾಡುಮಲ್ಲಿಗೆ ಸುವಾಸೆ, ಜೇನುಗಳ ಸದ್ದು ಮರೆಯಾಗಿದೆ. ಶಾಲೆ 111ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು ಸಂತಸದ ಸಂಗತಿ’ ಎಂದು ಕಾರ್ಯಕ್ರಮ ಉದ್ಘಾಟಿಸಿದ ಶಾಲೆಯ ಹಿರಿಯ ವಿದ್ಯಾರ್ಥಿ ಮತ್ತು ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದ ಹರ್ಷ ವ್ಯಕ್ತಪಡಿಸಿದರು. 

‘ಸರ್ಕಾರಿ ಶಾಲೆಗಳು ಸಮಾಜದಲ್ಲಿ ಸಂಸ್ಕಾರ ಬೆಳೆಸಲು ಕಾರಣವಾಗಿದೆ. ಊರಿನ ಹಿತಾಸಕ್ತಿ ಇಟ್ಟುಕೊಂಡು ಶಾಲೆ ಕಟ್ಟಬೇಕು’ ಎಂದು ತಹಶೀಲ್ದಾರ್‌ ಎಸ್.ರಂಜಿತ್‌ ಹೇಳಿದರು. 

ವೇದಿಕೆಯಲ್ಲಿ ಶತಮಾನೋತ್ಸವ ಸಮಿತಿ ಅಧ್ಯಕ್ಷ ಬಿ.ಕೆ.ಉದಯಕುಮಾರ್‌, ಕೆ.ಟಿ. ನಾರಾಯಣಮೂರ್ತಿ, ಚೇತನಾ ಶ್ರೀನಾಥ, ಶ್ರೀದೀಪ್‌ ಜಿ.ಎನ್.‌, ಸದಾಶಿವ ನಿಲುವಾಸೆ, ಎ.ಆರ್.ಪ್ರಕಾಶ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.