ADVERTISEMENT

ಸೊರಬ: ಮಸೂದೆ ಖಂಡಿಸಿ ಚಳವಳಿ ಮುಂದುವರಿಕೆ

ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2021, 4:46 IST
Last Updated 3 ಅಕ್ಟೋಬರ್ 2021, 4:46 IST
ಸೊರಬದಲ್ಲಿ ವಿಶ್ವ ಮಾನವ ಶಕ್ತಿ ಸತ್ಯ ಶೋಧಕ ಸಮಾಜ ಆಯೋಜಿಸಿದ್ದ ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹದಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿದರು
ಸೊರಬದಲ್ಲಿ ವಿಶ್ವ ಮಾನವ ಶಕ್ತಿ ಸತ್ಯ ಶೋಧಕ ಸಮಾಜ ಆಯೋಜಿಸಿದ್ದ ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹದಲ್ಲಿ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿದರು   

ಸೊರಬ: ‘ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿರುವ ರೈತ ವಿರೋಧಿ ಮಸೂದೆಗಳನ್ನು ಖಂಡಿಸಿ ದೆಹಲಿಯಲ್ಲಿ ಹಮ್ಮಿಕೊಂಡಿರುವ ರೈತರ ಚಳವಳಿಗೆ ಒಂದು ವರ್ಷ ಆಗುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಬಗ್ಗೆ ಸಹಾನುಭೂತಿ ಹೊಂದಿಲ್ಲ. ಇದನ್ನು ಖಂಡಿಸಿ ಚಳವಳಿ ಮುಂದುವರಿಸಲಾಗುವುದು’ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

ಶನಿವಾರ ಪಟ್ಟಣದ ತಾಲ್ಲೂಕು ಕಚೇರಿ ಎದುರು ಗಾಂಧಿ ಜಯಂತಿ ಪ್ರಯುಕ್ತ ವಿಶ್ವ ಮಾನವ ಶಕ್ತಿ ಸತ್ಯ ಶೋಧಕ ಸಮಾಜ ಆಯೋಜಿಸಿದ್ದ ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.

ಕೊರೊನಾ ಸೋಂಕು ವ್ಯಾಪಕವಾಗಿ ಹರಡಿರುವ ಸಮಯವನ್ನು ನೋಡಿ ಕರಾಳ ಮಸೂದೆಯನ್ನು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿದೆ. ರೈತರ ಹೋರಾಟ ಹತ್ತಿಕ್ಕುವ ಕೆಲಸ ನಡೆಯುತ್ತಿದೆ.ರೈತ ವಿರೋಧಿ ಕಾನೂನುನ್ನು ಪರಿಶೀಲಿಸಿ ಜಾರಿಗೊಳಿಸುವಂತೆ ಸುಪ್ರೀಂ ಕೋರ್ಟ್ 3 ಜನರ ತಜ್ಞರ ಸಮಿತಿ ರಚಿಸಿ ವರದಿ ನೀಡುವಂತೆ ಸೂಚಿಸಿತು. ಆದರೆ ಸರ್ಕಾರ ನೇಮಿಸಿದ ಮುರು ಜನ ತಜ್ಞರಲ್ಲಿ ಇಬ್ಬರು ಸರ್ಕಾರದ ಪರವಾಗಿ ವರದಿ ನೀಡಿದ್ದು ಆತಂಕಕಾರಿ ಎಂದು ಹೇಳಿದರು.

ADVERTISEMENT

ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಮೂಲಕ ಕೇಂದ್ರ ಸರ್ಕಾರ ಜನ ವಿರೋಧಿ ನೀತಿ ಅನುಸರಿಸುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೃಷಿ ಕ್ಷೇತ್ರವನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡಿ ದೇಶದ ಬಡ ಜನರನ್ನು ಬೀದಿಗೆ ತಳ್ಳಲು ಹುನ್ನಾರ ನಡೆಸುತ್ತಿವೆ. ಇದಕ್ಕೆ ಪೂರಕವಾಗಿ ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕುರವ ಗಣೇಶ್, ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಬೈರೇಗೌಡ, ಹಾವೇರಿ ಘಟಕದ ಜಿಲಾಧ್ಯಕ್ಷ ಕಾಲೀರ್ ಹುಸೇನ್, ದಾವಣಗೆರೆ ಘಟಕದ ಜಿಲ್ಲಾಧ್ಯಕ್ಷ ಭರಮಗೌಡ, ವಿಶ್ವ ಮಾನವ ಶಕ್ತಿ ಸತ್ಯ ಶೋಧಕ ಸಮಾಜ ಅಧ್ಯಕ್ಷ ಚಂದ್ರಪ್ಪ ಮೇಷ್ಟ್ರು, ಚಿಂತಕ ರಾಜಪ್ಪ ಮಾಸ್ತರ್, ವೀರಭದ್ರನಾಯಕ್, ರೈತ ಸಂಘದ ಕಾರ್ಯಾಧ್ಯಕ್ಷ ಮಂಜುನಾಥಗೌಡ, ತಾಲ್ಲೂಕು ಅಧ್ಯಕ್ಷ ಈಶ್ವರಪ್ಪ ಕೊಡಕಣಿ, ಉಮೇಶ್ ಪಾಟೀಲ್, ಪುಟ್ಟರಾಜಪ್ಪಗೌಡ, ಮಂಜು ಅರೇಕೊಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.