ADVERTISEMENT

‘ಮೃಗವಧೆ ದೇವಸ್ಥಾನ ಪ್ರಕರಣ ಕಾಂಗ್ರೆಸ್‌ನಿಂದ ರಾಜಕೀಯ: ಶಾಸಕ ಆರಗ ಜ್ಞಾನೇಂದ್ರ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2018, 14:22 IST
Last Updated 17 ಅಕ್ಟೋಬರ್ 2018, 14:22 IST
ಆರಗ ಜ್ಞಾನೇಂದ್ರ
ಆರಗ ಜ್ಞಾನೇಂದ್ರ   

ತೀರ್ಥಹಳ್ಳಿ: ಮೃಗವಧೆ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಈಚೆಗೆ ನಡೆದ ಗಲಾಟೆ ದುರದೃಷ್ಟಕರ. ಕೆಲವು ಭಿನ್ನಾಭಿಪ್ರಾಯಗಳು ಕೋಪಕ್ಕೆ ತಿರುಗಿ ಗಲಾಟೆ ನಡೆದಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

'ಘಟನೆಯನ್ನು ನಾನು ಸಮರ್ಥಿಸಿಕೊಳ್ಳಲು ಹೋಗಲ್ಲ. ಸಮರ್ಥನೀಯವೂ ಅಲ್ಲ. ಎರಡೂ ಗುಂಪಿನಲ್ಲಿ ಒಳ್ಳೆಯವರಿದ್ದಾರೆ. ಕೆಲವರು ಘಟನೆಗೆ ಜಾತಿ ಬಣ್ಣ ಕಟ್ಟಲು ಹೋಗಿದ್ದಾರೆ' ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ದೇವಸ್ಥಾನದ ಅಭಿವೃದ್ಧಿಗೆ ಎರಡೂ ಗುಂಪು ಪ್ರಯತ್ನಿಸುತ್ತಿದೆ. ಘಟನೆ ಕುರಿತು ಪೊಲೀಸರ ಮೇಲೆ ಇಂಥದ್ದೆ ಪ್ರಕರಣ ದಾಖಲಿಸಬೇಕು ಎಂದು ಕಾಂಗ್ರೆಸ್‌ನ ಕೆಲವರು ಒತ್ತಡ ಹೇರಿದ್ದಾರೆ. ಜೈಲಿಗೆ ಶಿಕ್ಷೆ ಅನುಭವಿಸಿದ ಕಾಂಗ್ರೆಸ್ ಮುಖಂಡರೊಬ್ಬರು ಬಿಜೆಪಿಯವರು ಹೇಗಿರಬೇಕು ಎಂದು ಪಾಠ ಹೇಳುತ್ತಿದ್ದಾರೆ. ಸಣ್ಣ ಪುಟ್ಟ ಘಟನೆಗಳಿಗೆ ಬೆಂಕಿ ಇಟ್ಟು ಚಳಿ ಕಾಯಿಸಿಕೊಳ್ಳುವ ಕೆಲಸ ಇದು ಎಂದು ಆರೋಪಿಸಿದರು.

ADVERTISEMENT

ಸಮ್ಮಿಶ್ರ ಸರ್ಕಾರ ಶಿಕ್ಷಣವನ್ನು ಖಾಸಗೀಕರಣ ಮಾಡಲು ಹೊರಟಿದೆ. ಶಿಕ್ಷಕರ ವರ್ಗಾವಣೆಯನ್ನು ಅವೈಜ್ಞಾನಿಕವಾಗಿ ಮಾಡಲಾಗುತ್ತಿದೆ. ಹೆಚ್ಚುವರಿ ಶಿಕ್ಷಕರ ಹೆಸರಿನಲ್ಲಿ ಶಿಕ್ಷಕರನ್ನು ಕಡಿತಗೊಳಿಸಲಾಗುತ್ತಿದೆ. ಶಿಕ್ಷಣ ಇಲಾಖೆ ನಿಯಮ ಪಾಲನೆ ಮಾಡಿದರೆ ಮಲೆನಾಡಿನ ಶಾಲೆಗಳನ್ನು ಮುಚ್ಚಬೇಕಾಗುತ್ತದೆ.

ಮಲೆನಾಡಿನ ಶಾಲೆಗಳಿಗೆ ತೊಂದರೆ ಆಗದಂತೆ ಎಚ್ಚರ ವಹಿಸಲಾಗುವುದು ಎಂದು ಮುಖ್ಯ ಮಂತ್ರಿಗಳು ಭರವಸೆ ನೀಡಿದ್ದರು. ಆದರೆ, ಈಗ ತೊಂದರೆ ಆಗುತ್ತಿದೆ. ಈ ಸರ್ಕಾರ ಶಿಕ್ಷಕರಿಗೆ ವೇತನ ನೀಡುವ ಯೋಗ್ಯತೆಯನ್ನು ಕಳೆದುಕೊಂಡಿದೆ. ಮಲೆನಾಡಿನ ಮಕ್ಕಳ ಭವಿಷ್ಯ ಹಾಳಾಗದಂತೆ ಎಚ್ಚರವಹಿಸಬೇಕು ಎಂದು ಒತ್ತಾಯಿಸಿದರು.

‘ವಿದ್ಯಾರ್ಥಿಗಳ ಸಂಖ್ಯೆ ಆಧರಿಸಿ ಶಿಕ್ಷಕರನ್ನು ಕಡಿತಗೊಳಿಸುವ ಕುರಿತು ಅನೇಕ ಶಿಕ್ಷಕರು ದೂರಿದ್ದಾರೆ. ಈ ಕುರಿತು ಶಿಕ್ಷಣ ಇಲಾಖೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಮಲೆನಾಡಿನ ಶಾಲೆಗಳ ಸಮಸ್ಯೆಯನ್ನು ಮನವರಿಕೆ ಮಾಡಿಕೊಟ್ಟಿದ್ದೇನೆ. ಮಲೆನಾಡಿನ ಶಾಲೆಗಳ ಉಳಿವಿಗೆ ಪೂರಕವಾಗಿ ಸ್ಪಂದಿಸಿದ್ದಾರೆ’ ಎಂದು ಹೇಳಿದರು.

ಅಭಿವೃದ್ಧಿ ಕೆಲಸಗಳು ಬಿಜೆಪಿಗೆ ಫಲ ನೀಡುತ್ತದೆ. ಕೇಂದ್ರದಲ್ಲಿ ಒಳ್ಳೆ ವ್ಯಕ್ತಿ ಇರಬೇಕು ಎಂದು ಮತದಾರರು ಬಯಸಿದ್ದಾರೆ. ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಲ್ಲೂಕು ಬಿಜೆಪಿ ಅಧ್ಯಕ್ಷ ಕೋಣಂದೂರು ಮೋಹನ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಂದೇಶ ಜವಳಿ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸಾಲೇಕೊಪ್ಪ ರಾಮಚಂದ್ರ, ಗೀತಾ ಶೆಟ್ಟಿ, ಯುವ ಮೋರ್ಚಾ ಅಧ್ಯಕ್ಷ ರಕ್ಷಿತ್ ಮೇಗರವಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.