ಶಿವಮೊಗ್ಗ: ‘ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್ಎಂಇ) ಆರ್ಥಿಕತೆಯ ಬೆನ್ನೆಲುಬಾಗಿದ್ದು, ಅವುಗಳ ಬೆಳವಣಿಗೆಗೆ ಪೂರಕವಾದ ಅವಕಾಶ ಕಲ್ಪಿಸಬೇಕಿದೆ’ ಎಂದು ಕೈಗಾರಿಕಾ ಕೇಂದ್ರದ ಜಂಟಿ ಜಿಲ್ಲಾ ನಿರ್ದೇಶಕ ಆರ್. ಗಣೇಶ್ ಹೇಳಿದರು.
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ ಹಾಗೂ ರಾಜ್ಯ ಸಣ್ಣ ಕೈಗಾರಿಕೆಗಳ ಸಂಘದಿಂದ ಗೋಪಾಲಗೌಡ ಬಡಾವಣೆಯ ಜಿಲ್ಲಾ ಔಷಧ ಭವನದಲ್ಲಿ ಶನಿವಾರ ಆಯೋಜಿಸಿದ್ದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ಕೈಗಾರಿಕಾ ನೀತಿ ಜಾರಿಗೊಳಿಸಿ ಕೈಗಾರಿಕೆಗಳಿಗೆ ಉತ್ತೇಜನ, ಸೌಲಭ್ಯಗಳನ್ನು ನೀಡುತ್ತಿದ್ದು, ಇದರ ಸದುಪಯೋಗವನ್ನು ಉದ್ಯಮಿಗಳು ಪಡೆದುಕೊಳ್ಳಬೇಕು. ಇದರಿಂದ ಹೆಚ್ಚಿನ ಸಂಖ್ಯೆಯ ಕೈಗಾರಿಕೆಗಳ ಸ್ಥಾಪನೆ, ವಿಸ್ತರಣೆ ಹಾಗೂ ಮಾರ್ಪಾಡು ಮಾಡಲು ಸಾಧ್ಯವಿದೆ ಎಂದರು.
ಕೇಂದ್ರ ಸರ್ಕಾರ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಎಂಪ್ಲಾಯ್‌ಮೆಂಟ್ ಲಿಂಕ್ಡ್ ಇನ್ಸೆಂಟಿಸ್ ಸ್ಕೀಂ ಎಂಬ ಮಹಾತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿ ಎರಡು ವರ್ಷ ಉದ್ಯೋಗ ನೀಡಿದವರು ಮತ್ತು ಉದ್ಯೋಗ ಪಡೆದವರೂ ಪ್ರೋತ್ಸಾಹ ಧನ ಪಡೆಯಲು ಅವಕಾಶವಿದೆ ಎಂದರು.
‘ಎಂಎಸ್‌ಎಂಇಗಳಿಗೆ ಕಾಸಿಯಾ, ಡಿಐಸಿ ಸಹಕಾರ ಅತ್ಯುತ್ತಮವಾಗಿದೆ. ದೇಶ ಪ್ರಗತಿ ಪಥದಲ್ಲಿದ್ದು, ಅವಕಾಶ, ಸೌಲಭ್ಯಗಳು ಬಹಳಷ್ಟಿವೆ. ಇಲ್ಲಿ ರಫ್ತಿಗೆ ಅನೇಕ ಅವಕಾಶಗಳಿದ್ದು, ಹೊಸ ತಂತ್ರಜ್ಞಾನ, ಆರ್ಥಿಕ ಸಹಕಾರವೂ ಇದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಮಾಚೇನಹಳ್ಳಿ ಕೈಗಾರಿಕಾ ಸಂಘದ ಅಧ್ಯಕ್ಷ ಬೆನಕಪ್ಪ ತಿಳಿಸಿದರು.
ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ ರಫ್ತಿಗೆ ಹೆಚ್ಚಿನ ಉತ್ತೇಜನ ನೀಡಲಿದ್ದು, ಜಿಲ್ಲೆಯಿಂದ ಕಳೆದ ಸಾಲಿನಲ್ಲಿ ₹443.7 ಕೋಟಿ ಮೊತ್ತದ ಸರಕು ರಫ್ತು ಮಾಡಲಾಗಿದೆ ಎಂದು ವಿಟಿಪಿಸಿ ಧಾರವಾಡ ಶಾಖಾ ಕಚೇರಿಯ ಸಹಾಯಕ ನಿರ್ದೇಶಕ ಟಿ.ಎಸ್.ಮಲ್ಲಿಕಾರ್ಜುನ ಹೇಳಿದರು.
ಸಿಡ್ಬಿಯ ಡಿಜಿಎಂ ಗುಣಶೇಖರನ್, ಪ್ರಾದೇಶಿಕ ಕಚೇರಿಯ ಪ್ರಧಾನ ವ್ಯವಸ್ಥಾಪಕ ಎಸ್.ಶ್ರೀಪತಿ, ಕಾಸಿಯಾ ಗೌರವ ಪ್ರಧಾನ ಕಾರ್ಯದರ್ಶಿ ಎಸ್. ಎಂ. ಹುಸೇನ್, ಗ್ರಾಮೀಣ ಜಂಟಿ ಕಾರ್ಯದರ್ಶಿ ಆರ್. ಕೇಶವ ಮೂರ್ತಿ, ನಗರ ಜಂಟಿ ಕಾರ್ಯದರ್ಶಿ ಎಸ್. ವಿಶ್ವೇಶ್ವರಯ್ಯ, ಕಾಸಿಯಾ ಉಪಾಧ್ಯಕ್ಷ ನಿಂಗಣ್ಣ ಎಸ್. ಬಿರಾದರ, ಜೋಯಿಸ್ ರಾಮಾಚಾರ್ ಇದ್ದರು.
ಎಂಎಸ್‌ಎಂಇ: ಜಿಡಿಪಿಗೆ ಶೇ 29ರಷ್ಟು ಕೊಡುಗೆ
ಎಂಎಸ್‌ಎಂಇಗಳಿಗೆ ಸಂಬಂಧಿಸಿದಂತೆ ಜಿಎಸ್‌ಟಿ ಆರ್ಥಿಕತೆ ತಾಂತ್ರಿಕ ವಿಷಯಗಳ ಕುರಿತು ಏನೇ ಸಮಸ್ಯೆಗಳಿದ್ದರೂ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಪರಿಹಾರ ಒದಗಿಸಲಾಗುತ್ತಿದೆ. ಎಂಎಸ್‌ಎಂಇಗಳು ಸಾಕಷ್ಟು ಉದ್ಯೋಗ ಸೃಷ್ಟಿಸಿವೆ. ದೇಶದ ಜಿಡಿಪಿಗೆ ಶೇ 29ರಷ್ಟು ಕೊಡುಗೆ ನೀಡಿದ್ದು ಸರ್ಕಾರ ಬಜೆಟ್‌ನಲ್ಲಿ ಎಂಎಸ್‌ಎಂಇ ಗಳಿಗೆ ಪೂರಕವಾದ ಯೋಜನೆಗಳನ್ನು ನೀಡಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಗೋಪಿನಾಥ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.